ಶುಕ್ರವಾರ, ಡಿಸೆಂಬರ್ 6, 2019
17 °C
ಸಕಾಲಕ್ಕೆ ಮಾಹಿತಿ ದಾಖಲಿಸಲು ಪಿಡಿಒಗಳಿಗೆ ಜಿ.ಪಂ ಸಿಇಒ ಸೂಚನೆ

ಅಭಿವೃದ್ಧಿ ಕಾಮಗಾರಿಗೆ ಹೊಸ ತಂತ್ರಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಜಿಲ್ಲೆಯ ಗ್ರಾಮಗಳಲ್ಲಿ ಪೂರ್ಣಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಹೊಸ ತಂತ್ರಾಂಶದಲ್ಲಿ ಸಕಾಲಕ್ಕೆ ದಾಖಲು ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಸೂಚಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಡಾಟಾ ಆಪರೇಟರ್‌ಗಳಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ. ‘ಗ್ರಾ.ಪಂಗಳ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ಹೊಸ ತಂತ್ರಾಂಶ ಜಾರಿಗೆ ತರಲಾಗಿದ್ದು, ಇದರ ಬಳಕೆ ಕುರಿತು ತರಬೇತಿ ನೀಡಲಾಗುತ್ತಿದೆ’ ಎಂದರು.

‘ಹೊಸ ತಂತ್ರಾಂಶವನ್ನು ಗಂಭೀರವಾಗಿ ಪರಿಗಣಿಸಿ, ಸಕಾಲಕ್ಕೆ ಮಾಹಿತಿ ಭರ್ತಿ ಮಾಡಿ ಸರ್ಕಾರಕ್ಕೆ ಕಳುಹಿಸಬೇಕು. ಈ ಕಾರ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘14ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾ.ಪಂಗಳಿಗೆ ಬಿಡುಗಡೆ ಮಾಡಲು ಮತ್ತು ಯೋಜನೆಯಡಿ ಭರಿಸಿದ ವೆಚ್ಚವನ್ನು ದಾಖಲೆ ಮಾಡಲು ಪಂಚತಂತ್ರಾಂಶದ ಬದಲಿಗೆ ಪ್ರಿಯಾ ಸಾಫ್ಟ್‌ ತಂತ್ರಾಂಶ ಬಳಸಲಾಗುತ್ತದೆ. ಸಮಗ್ರವಾದ ನಮ್ಮ ಗ್ರಾಮ ನಮ್ಮ ಯೋಜನೆ (ಜಿಪಿಡಿಪಿ) ಕ್ರಿಯಾಯೋಜನೆ ತಯಾರಿಕೆಗೆ ಈ ಮೊದಲು ಇದ್ದ ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶದ ಬದಲಿಗೆ ಪ್ಲಾನ್‌ ಪ್ಲಟ್‌ ತಂತ್ರಾಂಶ ಬಳಸಲಾಗುತ್ತದೆ’ ಎಂದು ವಿವರಿಸಿದರು.

ಬದಲಿಸಲು ಸಾಧ್ಯವಿಲ್ಲ: ‘14ನೇ ಹಣಕಾಸು ಆಯೋಗದ ಅನುದಾನದ ಭೌತಿಕ ಪ್ರಗತಿ ಕುರಿತ ವಿವರ ಅಳವಡಿಸಲು ಹಾಗೂ ಮೇಲ್ವಿಚಾರಣೆಗೆ ಆ್ಯಕ್ಷನ್ ಸಾಫ್ಟ್‌ ತಂತ್ರಾಂಶ ಅನುಷ್ಠಾನಗೊಳಿಸಲಾಗುತ್ತಿದೆ. ಈ 3 ಹೊಸ ತಂತ್ರಾಂಶಗಳ ಅನುಷ್ಠಾನದಿಂದ ಕಾಮಗಾರಿಗಳು ಮತ್ತಷ್ಟು ವೇಗವಾಗಿ ನಡೆಯುತ್ತವೆ’ ಎಂದು ಮಾಹಿತಿ ನೀಡಿದರು.

‘ಒಂದು ಕಾಮಗಾರಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ತಂತ್ರಾಂಶದಲ್ಲಿ ಅಡಕ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ. ಅದು ಮುಗಿದ ಬಳಿಕವಷ್ಟೇ ಬೇರೆಯವರು ಮಾಡಬೇಕಾಗುತ್ತದೆ. ಹೊಸ ತಂತ್ರಾಂಶಗಳ ಬಳಕೆ ಬಗ್ಗೆ ಮೈಸೂರಿನಲ್ಲಿ ತರಬೇತಿ ಪಡೆದವರು ಜಿಲ್ಲೆಯಲ್ಲಿ ಮಾಹಿತಿ ನೀಡುತ್ತಾರೆ. ಸಿಬ್ಬಂದಿ ತಂತ್ರಾಂಗಳ ಬಳಕೆ ಸಮರ್ಪಕವಾಗಿ ತಿಳಿದು ಅನುಷ್ಠಾನಗೊಳಿಸಬೇಕು’ ಎಂದು ಸೂಚಿಸಿದರು.

ಪಾರದರ್ಶಕ ತಂತ್ರಾಂಶ: ‘14ನೇ ಹಣಕಾಸು ಯೋಜನೆಯ ಸಮರ್ಪಕ ಬಳಕೆಗೆ ಪಾರದರ್ಶಕವಾಗಿ ತಂತ್ರಾಂಶ ಜಾರಿ ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗೆ ಚೆಕ್ ಮೂಲಕ ಹಣ ನೀಡುವ ವ್ಯವಸ್ಥೆ ರದ್ದು ಮಾಡಲಾಗಿದೆ. ಇನ್ನು ಮುಂದೆ ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಬೇಕು’ ಎಂದು ತರಬೇತುದಾರ ಜುಬೇರ್‌ ಪಾಷಾ ತಿಳಿಸಿದರು.

ಮೊದಲ ಹಂತದಲ್ಲಿ ಕೋಲಾರ ಮತ್ತು ಶ್ರೀನಿವಾಸಪುರ, ಎರಡನೇ ಹಂತದಲ್ಲಿ ಮುಳಬಾಗಿಲು ಮತ್ತು ಮಾಲೂರು ತಾಲ್ಲೂಕಿನ ಪಿಡಿಒಗಳು, ಡಾಟಾ ಆಪರೇಟರ್‌ಗಳಿಗೆ ತರಬೇತಿ ನೀಡಲಾಯಿತು.

ಪ್ರತಿಕ್ರಿಯಿಸಿ (+)