ಸೇತುವೆಗಳು ಹೃದಯ ಬೆಸೆಯುತ್ತವೆ: ಬಿ.ಗಿರೀಶ್ ಭಾರಧ್ವಾಜ್‌

7

ಸೇತುವೆಗಳು ಹೃದಯ ಬೆಸೆಯುತ್ತವೆ: ಬಿ.ಗಿರೀಶ್ ಭಾರಧ್ವಾಜ್‌

Published:
Updated:
Deccan Herald

ಮಂಗಳೂರು: ‘ಸೇತುವೆಗಳು ಎರಡು ಪ್ರದೇಶಗಳ ಜನರ ಹೃದಯಗಳನ್ನು ಬೆಸೆಯುತ್ತವೆ. ದೇಶದಲ್ಲಿ ಬಹುಕಾಲದಿಂದ ಇದ್ದ ಬೇಡಿಕೆಗಳಿಗೆ ಸ್ಪಂದಿಸಿ ನಾನು ಹಲವು ಸ್ಥಳಗಳಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಿದಾಗ ಇದು ಅನುಭವಕ್ಕೆ ಬಂದಿದೆ’ ಎಂದು ತೂಗು ಸೇತುವೆ ನಿರ್ಮಾಣ ತಜ್ಞ ಬಿ.ಗಿರೀಶ್ ಭಾರಧ್ವಾಜ್‌ ಹೇಳಿದರು.

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವೇದಿಕೆ ‘ಸ್ಪೆಕ್ಟ್ರಮ್' ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಭಾರತವನ್ನು ಜೋಡಿಸಿದ ತೂಗು ಸೇತುವೆಗಳು’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

‘ಕೆಲವು ಕಡೆಗಳಲ್ಲಿ ನಾವು ಒಂದು ತೂಗು ಸೇತುವೆ ನಿರ್ಮಿಸಿದಾಗ ಜನರು ದಶಕಗಳಿಂದ ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಪರಿಹಾರ ದೊರೆಯಿತು. ಅಲ್ಲಿನ ಜನರಲ್ಲಿ ಕಂಡ ಸಂತೃಪ್ತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಸೇತುವೆಗಳು ಜನರ ಹೃದಯ ಬೆಸೆಯುತ್ತವೆ ಎಂಬುದು ಆಗ ನನಗೆ ಮನವರಿಕೆಯಾಯಿತು’ ಎಂದರು.

‘ನಿನ್ನೆಗಿಂತ ಉತ್ತಮರಾಗಬೇಕು ಎಂಬ ಶ್ರೇಷ್ಠ ಸವಾಲು ನಮ್ಮದಾಗಬೇಕು. ನಿರಂತರವಾಗಿ ಹೊಸತನಕ್ಕೆ ತುಡಿಯುತ್ತಾ ಮಾನವೀಯತೆಯಿಂದ ಕೆಲಸ ಮಾಡುವುದು ಒಳ್ಳೆಯ ಮಾರ್ಗ. ಶಿಕ್ಷಣದಿಂದ ಪಡೆದ ಜ್ಞಾನ ಮತ್ತು ಕೌಶಲ, ತಂತ್ರಜ್ಞಾನವನ್ನು ಸಮಾಜದ ಹಿತಕ್ಕಾಗಿ, ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಿಕೊಳ್ಳುವ ಮನೋಭಾವ ಎಲ್ಲರದ್ದಾಗಬೇಕು’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ವಿಶ್ವೇಶ್ವರ ಉಪಾಧ್ಯಾಯ, ಗಣಿತ ವಿಭಾಗದ ಮುಖ್ಯಸ್ಥ ಪಿ.ಗುರುಪ್ರಸಾದ್ ಉಪಾಧ್ಯ ಉಪಸ್ಥಿತರಿದ್ದರು. ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಎನ್.ದಾಮೋದರ ಸ್ವಾಗತಿಸಿದರು. ಆಡಳಿತಾಧಿಕಾರಿ ಎಂ.ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು.

ಸ್ಪೆಕ್ಟ್ರಮ್‍ನ ವಿದ್ಯಾರ್ಥಿ ಅಧ್ಯಕ್ಷ ಅನಂತ ಪೈ ಸಂಘಟನೆಯ ಪದಾಧಿಕಾರಿಗಳು, ಚಟುವಟಿಕೆಗಳ ಕುರಿತು ವಿವರಿಸಿದರು. ಉಪಾಧ್ಯಕ್ಷೆ ರಚನಾ ಪೈ ವಂದಿಸಿದರು. ಉಪನ್ಯಾಸಕಿ ಆಶಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !