ಸಹಿಷ್ಣುತೆಯಿಂದ ಮಾನವ ಹಕ್ಕುಗಳ ರಕ್ಷಣೆ

7
ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯ

ಸಹಿಷ್ಣುತೆಯಿಂದ ಮಾನವ ಹಕ್ಕುಗಳ ರಕ್ಷಣೆ

Published:
Updated:
Deccan Herald

ಕೋಲಾರ: ‘ಎಲ್ಲಾ ಧರ್ಮಗಳಿಗಿಂತ ಮಾನವ ಧರ್ಮವೇ ದೊಡ್ಡದು. ಪರಸ್ಪರ ಸೋದರ ಮನೋಭಾವದಿಂದ ಮುನ್ನಡೆದರೆ ಸಮಾಜದಲ್ಲಿ ಶಾಂತಿ ನೆಲೆಗೊಳ್ಳುತ್ತದೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಹಯೋಗದಲ್ಲಿ ತಾಲ್ಲೂಕಿನ ವೇಮಗಲ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಎಲ್ಲಾ ಧರ್ಮಗಳ ಸಾರವೂ ಒಂದೇ. ಯಾವುದೇ ಧರ್ಮ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಪ್ರತಿಯೊಬ್ಬರು ಧಾರ್ಮಿಕ ಸಹಿಷ್ಣುತೆಯಿಂದ ನಡೆದುಕೊಂಡರೆ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತದೆ. ಒಬ್ಬರು ಮತ್ತೊಬ್ಬರಿಗೆ ತೊಂದರೆ ಕೊಡುವಂತೆ ಅಥವಾ ಕೊಲೆ ಮಾಡುವಂತೆ ಯಾವ ಧರ್ಮವೂ ಹೇಳಿಲ್ಲ’ ಎಂದು ತಿಳಿಸಿದರು.

‘ವಿಶ್ವದ 2ನೇ ಮಹಾಯುದ್ಧದಲ್ಲಿ 50 ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗಿದ ಹಿನ್ನೆಲೆಯಲ್ಲಿ ಮಾನವನ ರಕ್ಷಣೆಗಾಗಿ ಮಾನವ ಹಕ್ಕುಗಳ ದಿನಾಚರಣೆ ಜಾರಿಗೆ ಬಂದಿತು. ಇಂದು ಜಾಗತಿಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿರುವುದು ವಿಷಾದಕರ. ಮೂಲಭೂತ ಹಕ್ಕು ಪಡೆದುಕೊಳ್ಳುವಾಗ ಮತ್ತೊಬ್ಬರ ಹಕ್ಕಿಗೆ ಚ್ಯುತಿ ಬಾರದಂತೆ ಎಚ್ಚರ ವಹಿಸುವುದು ಮಾನವೀಯ ಧರ್ಮ’ ಎಂದು ಕಿವಿಮಾತು ಹೇಳಿದರು.

ವಿಷಾದನೀಯ: ‘ಹಕ್ಕುಗಳ ಶೋಷಣೆ ನಿರಂತರವಾಗಿ ನಡೆಯುತ್ತಿದ್ದರೂ ಅನೇಕರಿಗೆ ನ್ಯಾಯಕ್ಕಾಗಿ ಅರ್ಜಿ ಹಾಕಿಕೊಳ್ಳುವ ತಿಳಿವಳಿಕೆ ಇಲ್ಲದಿರುವುದು ವಿಷಾದನೀಯ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್ ಕಳವಳ ವ್ಯಕ್ತಪಡಿಸಿದರು.

‘ಜನರ ಮನೆ ಬಾಗಿಲಿಗೆ ನ್ಯಾಯವೆಂಬ ಧ್ಯೇಯದೊಂದಿಗೆ ಮಾನವ ಹಕ್ಕುಗಳ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಮಾನವ ಹಕ್ಕುಗಳ ರಕ್ಷಣೆ ಕುರಿತು ಯುವಕ ಯುವತಿಯರು ಜಾಗೃತರಾಗುತ್ತಿದ್ದು, ತಿಳಿವಳಿಕೆ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕೊನೆಯಾಗಲಿ’ ಎಂದು ಆಶಿಸಿದರು.

ಮೊದಲು ಮಾನವರಾಗಿ: ‘ನಾವೆಲ್ಲಾ ಮೊದಲು ಮಾನವರಾಗಬೇಕು. ಧರ್ಮ ಪಾಲಿಸುವುದರ ಜತೆಗೆ ಮತ್ತೊಬ್ಬರಿಗೆ ನೋವುಂಟು ಮಾಡಬಾರದು’ ಎಂದು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮುನಿಕೃಷ್ಣಪ್ಪ ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಯರಾಮ್‌, ಪ್ರಧಾನ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ವಕೀಲರಾದ ರಾಮಕೃಷ್ಣ, ನಾಗೇಶ್, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಪದಾಧಿಕಾರಿಗಳಾದ ರಾಮಚಂದ್ರೇಗೌಡ, ಲೋಕೇಶ್, ರಾಮಾಂಜಿ, ಸಂಪತ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !