‘ಅನದರ್‌ ವರ್ಲ್ಡ್’ ತೆರೆದಿಟ್ಟ ನೆನಪುಗಳು

7
ಬೆಂಗಳೂರು ಕ್ಲಬ್‌: 150 ವರ್ಷಗಳ ಇತಿಹಾಸ ದಾಖಲೆಯ ಕೃತಿ ಬಿಡುಗಡೆ

‘ಅನದರ್‌ ವರ್ಲ್ಡ್’ ತೆರೆದಿಟ್ಟ ನೆನಪುಗಳು

Published:
Updated:
Deccan Herald

ಬೆಂಗಳೂರು: ಬೆಂಗಳೂರು ಕ್ಲಬ್‌ನ 150 ವರ್ಷಗಳ ಇತಿಹಾಸ ನೆನಪಿಸುವ ‘ಅನದರ್‌ ವರ್ಲ್ಡ್‌’ ಪುಸ್ತಕದ ಬಿಡುಗಡೆ ಶನಿವಾರ ಕ್ಲಬ್‌ ಆವರಣದಲ್ಲಿ ನಡೆಯಿತು. 

ಯಕ್ಷಗಾನದ ವೇಷಧಾರಿಗಳು ಪಲ್ಲಕ್ಕಿಯಲ್ಲಿ ಹೊತ್ತು ತಂದ ಪುಸ್ತಕವನ್ನು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಬಿಡುಗಡೆಗೊಳಿಸಿದರು. ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಚೀಟಿ ಮತ್ತು ಲಕೋಟೆಯನ್ನು ಏರ್‌ ಮಾರ್ಷಲ್‌ ಆರ್‌.ಕೆ.ಎಸ್‌. ಬದೂರಿಯಾ ಇದೇ ವೇಳೆ ಬಿಡುಗಡೆಗೊಳಿಸಿದರು. 

ಕ್ಲಬ್‌ಗೆ ಪ್ರವೇಶ ಪಡೆದ ದಿನಗಳನ್ನು ನೆನಪಿಸಿಕೊಂಡ ಸಂತೋಷ್‌ ಹೆಗ್ಡೆ, ‘1969ರ ಅವಧಿಯಲ್ಲಿ ಕ್ಲಬ್‌ ಸದಸ್ಯತ್ವ ಪಡೆಯುವುದು ತುಂಬಾ ಕಷ್ಟ ಇತ್ತು. ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದಾಗ ಇಲ್ಲಿ ಹಿರಿಯರೊಬ್ಬರು ‘ನೀನು ಏನು ಮಾಡುತ್ತಿರುವೆ’ ಎಂದು ಕೇಳಿದರು. ಆಗ ನಾನು ವಕೀಲಿಕೆ ಮಾಡುತ್ತಿದ್ದೆ. ಆದರೆ, ತಕ್ಷಣ ಮಾತು ಹೊರಳಿಸಿದ ಅವರು, ‘ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಜಯ ಗಳಿಸಿದ್ದು ಗೊತ್ತಿದೆಯೇನು’ ಎಂದು ಕೇಳಿದರು. ಆ ಬಳಿಕ ಇನ್ನೊಬ್ಬರು ಸಂದರ್ಶನ ನಡೆಸಿದರು. ಹೀಗೆ ಸದಸ್ಯತ್ವ ಪಡೆದ ಕ್ಲಬ್‌ನಲ್ಲಿ ಕಳೆದ ರಸನಿಮಿಷಗಳು ಹಸಿರಾಗಿಯೇ ಇದೆ’ ಎಂದರು.

‘ಅಂದು ಕ್ಲಬ್‌ನ ಬಾರ್‌ಗೆ ನಮಗೆಲ್ಲಾ ಪ್ರವೇಶ ಇರಲಿಲ್ಲ. ನನಗೆ ಅವಶ್ಯಕತೆಯೂ ಇರಲಿಲ್ಲ ಬಿಡಿ. ಆದರೆ, ಬಾರ್‌ ಮಾತ್ರ ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ ತುಂಬಿರುತ್ತಿತ್ತು’ ಎಂದು ಹೇಳಿದಾಗ ಸಭೆಯಲ್ಲಿ ನಗೆಯ ಅಲೆಯೆದ್ದಿತು.

ಬದೂರಿಯಾ ಮಾತನಾಡಿ, ‘ಪರಸ್ಪರ ಸಂಬಂಧಗಳನ್ನು ಬೆಸೆಯುವಲ್ಲಿ ಕ್ಲಬ್‌ ಪ್ರಮುಖ ಪಾತ್ರ ವಹಿಸಿದೆ. ಒಳ್ಳೆಯ ಸಂಪ್ರದಾಯಗಳನ್ನು ಕಾಯ್ದುಕೊಂಡು ಬಂದಿರುವುದು ಅನುಕರಣೀಯ’ ಎಂದರು. 

ಕ್ಲಬ್‌ ಅಧ್ಯಕ್ಷ ಆರ್‌.ರಾಮಕೃಷ್ಣನ್‌ ಕಾರ್ಯಚಟುವಟಿಕೆಗಳ ವರದಿ ಮಂಡಿಸಿದರು. ಗಿರೀಶ್‌ ಪೂಂಜಾ ಅವರು ಪುಸ್ತಕದ ಬಗ್ಗೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !