ಯೂನಿಯನ್‌ ಸಮೃದ್ಧಿ ಕೇಂದ್ರ 30ಕ್ಕೆ ಹೆಚ್ಚಳ

7
ಯೂನಿಯನ್‌ ಬ್ಯಾಂಕ್‌ ಸಿಇಒ ರಾಜಕಿರಣ್ ರೈ

ಯೂನಿಯನ್‌ ಸಮೃದ್ಧಿ ಕೇಂದ್ರ 30ಕ್ಕೆ ಹೆಚ್ಚಳ

Published:
Updated:
Deccan Herald

ಮಂಗಳೂರು: ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತ್ವರಿತವಾಗಿ ಬ್ಯಾಂಕಿಂಗ್‌ ಸೇವೆ ನೀಡುವ ಉದ್ದೇಶದಿಂದ ಪ್ರಾರಂಭಿಸಿರುವ ‘ಯೂನಿಯನ್‌ ಸಮೃದ್ಧಿ ಕೇಂದ್ರ’ಗಳ ಸಂಖ್ಯೆಯನ್ನು ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದೊಳಗೆ 30ಕ್ಕೆ ಹೆಚ್ಚಿಸಲಾಗುವುದು ಎಂದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಜ್‌ಕಿರಣ್‌ ರೈ ತಿಳಿಸಿದರು.

ನಗರದ ಪಾಂಡೇಶ್ವರದ ಅರಿಸ್ತಾ ಎನ್‌ಕ್ಲೇವ್‌ ಕಟ್ಟಡದಲ್ಲಿ ಪ್ರಾರಂಭಿಸಿರುವ ಬ್ಯಾಂಕ್‌ನ 24ನೇ ಮಿಡ್‌ ಕಾರ್ಪೋರೇಟ್‌ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಆರು ತಿಂಗಳ ಹಿಂದೆ ಮುಂಬೈನ ನಾಸಿಕ್‌ ಮತ್ತು ಹರಿಯಾಣ ರಾಜ್ಯದಲ್ಲಿ ಯೂನಿಯನ್‌ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಲಾಗಿತ್ತು. ಕರ್ನಾಟಕದ ರಾಣೆಬೆನ್ನೂರು ಮತ್ತು ಬೆಳಗಾವಿಯಲ್ಲೂ ಕೇಂದ್ರಗಳನ್ನು ಪ್ರಾರಂಭಿಸಲಾಗಿತ್ತು’ ಎಂದರು.

ಗ್ರಾಮೀಣ ಪ್ರದೇಶದ 20 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಪ್ರತಿ 15 ಶಾಖೆಗಳಿಗೆ ಒಂದರಂತೆ ಸಮೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಆ ಎಲ್ಲ ಶಾಖೆಗಳ ಗ್ರಾಹಕರಾಗಿರುವ ರೈತರು ನೇರವಾಗಿ ಸಮೃದ್ಧಿ ಕೇಂದ್ರಕ್ಕೆ ಬಂದು ಸಾಲದ ಅರ್ಜಿ ಸಲ್ಲಿಸಬಹುದು. ಎರಡರಿಂದ ಮೂರು ದಿನಗಳಲ್ಲೇ ಸಾಲ ಮಂಜೂರು ಮಾಡಲಾಗುತ್ತದೆ. ಇದಕ್ಕಾಗಿ ಬ್ಯಾಂಕ್‌ ಸಿಬ್ಬಂದಿಗೆ ಟ್ಯಾಬ್ಲೆಟ್‌ ನೀಡಲಾಗಿದೆ. ಆನ್‌ಲೈನ್‌ ಮೂಲಕವೇ ಎಲ್ಲ ಪ್ರಕ್ರಿಯೆ ನಡೆಸಲಾಗುತ್ತದೆ. ರೈತರು ಆಗಾಗ ಬ್ಯಾಂಕ್‌ಗೆ ಬರುವ ಪ್ರಮೇಯವೇ ಉದ್ಭವಿಸದು ಎಂದು ವಿವರಿಸಿದರು.

ನಗದುರಹಿತ ಕ್ಯಾಂಪಸ್: ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಗದುರಹಿತ ವಹಿವಾಟು ಉತ್ತೇಜಿಸುವ ‘ಕ್ಯಾಶ್‌ಲೆಟ್‌ ಕ್ಯಾಂಪಸ್‌’ ಎಂಬ ನೂತನ ಯೋಜನೆಯನ್ನು ಯೂನಿಯನ್‌ ಬ್ಯಾಂಕ್‌ ಜಾರಿಗೆ ತಂದಿದೆ. ಈಗಾಗಲೇ ಮಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಯೋಜನೆ ಜಾರಿಯಾಗಿದೆ. ಎರಡನೇ ಹಂತದಲ್ಲಿ ನಗರದ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲೂ ಕ್ಯಾಶ್‍ಲೆಸ್ ಕ್ಯಾಂಪಸ್‌ ಜಾರಿಗೆ ಸಿದ್ಧತೆ ನಡೆಯುತ್ತಿದೆ ಎಂದರು.

ಗ್ರಾಹಕರ ಅಭಿರುಚಿಗೆ ತಕ್ಕಂತೆ ಡಿಜಿಟಲ್ ಆರ್ಥಿಕತೆಯತ್ತ ಬ್ಯಾಂಕ್ ಹೆಜ್ಜೆಯಿಟ್ಟಿದೆ. ಬ್ಯಾಂಕ್ ವ್ಯವಹಾರಗಳನ್ನು ವರ್ಗೀಕರಿಸಲಾಗುತ್ತಿದೆ. ಒಂದು ವರ್ಷದಿಂದೀಚೆಗೆ ಅನೇಕ ಹೊಸ ಬದಲಾವಣೆಗಳನ್ನು ತರಲಾಗಿದೆ ಎಂದು ಹೇಳಿದರು.

ಬ್ಯಾಂಕ್‍ನ ಬೆಂಗಳೂರು ಕ್ಷೇತ್ರೀಯ ಪ್ರಧಾನ ಪ್ರಬಂಧಕ ಎಸ್.ಎನ್. ಕೌಶಿಕ್, ಮುಂಬೈನ ಮಿಡ್ ಕಾರ್ಪೋರೇಟ್‌ ವರ್ಟಿಕಲ್ ಕೇಂದ್ರ ಕಚೇರಿಯ ಪ್ರಧಾನ ಪ್ರಬಂಧಕ ಸತ್ಯನಾರಾಯಣ ಪಿ., ಮಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ನಂಜುಂಡಪ್ಪ, ನೂತನ ಎಂಸಿಬಿ ಮುಖ್ಯಸ್ಥ ಅಶೋಕ್ ಭಾಂಡಗೆ, ಉದ್ಯಮಿ ಎ.ಜೆ.ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !