ಸೋಮವಾರ, ಮೇ 17, 2021
23 °C
ಗಡಿನಾಡ ಮಕ್ಕಳ ಹಬ್ಬದಲ್ಲೂ ಮಾರ್ದನಿಸಿದ ಸುಳ್ವಾಡಿ ದುರಂತ

ಮನುಷ್ಯತ್ವ ಗುಣ ಅಳವಡಿಸಿಕೊಳ್ಳಿ: ಡಿಡಿಪಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ‘ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ಮನುಷ್ಯತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ ಅವರು ಮಂಗಳವಾರ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್‌ ಸಭಾಂಗಣದಲ್ಲಿ ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ ‘ಗಡಿನಾಡ ಮಕ್ಕಳ ಹಬ್ಬ’ದಲ್ಲಿ ಅವರು ಮಾತನಾಡಿದರು.

‘ಗುಣಮಟ್ಟದ ಶಿಕ್ಷಣದಿಂದ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಗವಹಿಸಬೇಕು. ಸಮಾಜದೊಟ್ಟಿಗೆ ಬದುಕು ನಡೆಸುವಾಗ ಮಾನವೀಯ ಮೌಲ್ಯವನ್ನು ಮರೆಯಬಾರದು. ಒಳ್ಳೆಯ ವಿಚಾರಗಳನ್ನು ಕೇಳಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ನಿಸ್ವಾರ್ಥ ಸಮಾಜ ಸೇವೆಯಲ್ಲಿ ನಿರತರಾಗಬೇಕು. ಸೇವೆಯಲ್ಲಿ ಸ್ವಾರ್ಥ, ಲಾಭ ಇದ್ದರೆ ಮಾನವೀಯ ಬದುಕು ನಡೆಸಲು ಸಾಧ್ಯವಿಲ್ಲ. ಜೀವಿಸುವಷ್ಟು ದಿನ ಬದುಕನ್ನು ಸೇವೆಗಾಗಿ ಮುಡಿಪಾಗಿಡಬೇಕು. ಶಿಕ್ಷಣದಿಂದ ಒಳ್ಳೆಯದನ್ನು ಸ್ವೀಕರಿಸಿ, ಅನ್ಯಾಯವನ್ನು ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಲ್ಯ ಕಸಿದ ‘ವಿಷ ಪ್ರಸಾದ’: ‘ಸುಳ್ವಾಡಿ ದುರಂತದಲ್ಲಿ ಸಿಲುಕಿ 11 ಮಕ್ಕಳು ಕೂಡ ನರಳಾಡುತ್ತಿದ್ದಾರೆ. ಅವರ ಗೋಳಾಟ ನೋಡಲು ಆಗುತ್ತಿಲ್ಲ. ಅಂದು ಶಾಲೆ ಇತ್ತು. ಆದರೂ, ಮಕ್ಕಳು ದೇವಸ್ಥಾನಕ್ಕೆ ಹೋಗಿದ್ದರು. ಒಂದು ವೇಳೆ ಅವರು ಅಂದು ಶಾಲೆಯಲ್ಲಿದ್ದಿದ್ದರೆ ಈ ದುರಂತಕ್ಕೆ ತುತ್ತಾಗುತ್ತಿರಲಿಲ್ಲ. ವಿಷ ಪ್ರಸಾದ ಮಕ್ಕಳ ಬಾಲ್ಯವನ್ನೇ ಕಸಿದಿದೆ’ ಎಂದು  ದುರಂತವನ್ನು ನೆನಪು ಮಾಡಿಕೊಂಡರು.

ಜಿಲ್ಲಾ ಭಾರತ ಸೇವಾದಳ ಉಪಾಧ್ಯಕ್ಷ ವೆಂಕಟನಾಗಪ್ಪ ಶೆಟ್ಟಿ ಮಾತನಾಡಿ, ‘ಸುಳ್ವಾಡಿ ದುರಂತವನ್ನು ರಾಷ್ಟ್ರೀಯ ದುರಂತ ಎಂದು ಪರಿಗಣಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಹೇಳಿದರು.

‘ಕೇವಲ ಹಣ ನೀಡುವುದೇ ಸೇವೆಯಲ್ಲ. ಜೀವನದಲ್ಲಿ ನಿತ್ಯ ಸೇವೆ ಮಾಡುವ ಕೆಲಸಗಳು ತುಂಬಾ ಇವೆ. ಇವುಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಸೇವಾದಳದ ಧ್ಯೇಯೋದ್ದೇಶಗಳನ್ನು, ಮಾನವೀಯ ಮೌಲ್ಯಗಳನ್ನು ಮನವರಿಕೆ ಮಾಡಿಕೊಂಡು ಅವುಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ನಗೆಗಡಲಲ್ಲಿ ತೇಲಿದ ಮಕ್ಕಳು: ಮಕ್ಕಳ ಹಬ್ಬದಲ್ಲಿ ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಹಾಗೂ ಮೈಸೂರಿನ ಜಗ್ಗುಜಾದೂಗಾರ್‌ ಅವರನ್ನು ಕರೆಸಲಾಗಿತ್ತು. ಮಿಮಿಕ್ರಿ ಗೋಪಿ ಅವರು ಚಲನಚಿತ್ರ ಹಾಸ್ಯ ಕಲಾವಿದರು, ನಾಯಕ ನಟರು, ಖಳ ನಟರು ಹಾಗೂ ರಾಜಕೀಯ ಧುರೀಣರ ಧ್ವನಿಯನ್ನು ಅನುಕರಿಸಿ ಮಕ್ಕಳನ್ನು ನಗೆಗಡಲಲ್ಲಿ ತೇಲಿಸಿದರು. ಜಗ್ಗುಜಾದೂಗಾರ್‌ ಅವರು ತಮ್ಮ ಜಾದೂ ಚತುರತೆಯಿಂದ ಮಕ್ಕಳನ್ನು ತಮ್ಮೆಡೆಗೆ ಸೆಳೆದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಜಾರ್ಜ್‌ ಪಿಲಿಪ್‌, ಭಾರತ ಸೇವಾ ದಳದ ತಾಲ್ಲೂಕು ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ತಾಲ್ಲೂಕು ಅಧಿನಾಯಕ ಎಸ್‌. ನಾಗಣ್ಣ, ಕೋಶಾಧ್ಯಕ್ಷ ಪ್ರಸಾದ್, ಉಪಾಧ್ಯಕ್ಷ ಬಂಗಾರಗಿರಿನಾಯಕ, ಕಾರ್ಯದರ್ಶಿ ನಾಗರಾಜು, ಕೊಳ್ಳೇಗಾಲ ತಾಲ್ಲೂಕು ಅಧಿನಾಯಕ ಪಳನಿಸ್ವಾಮಿ, ಜಿಲ್ಲಾ ಸಂಘಟಕ ಕೆ.ಈರಯ್ಯ ಇದ್ದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು