ಬುಧವಾರ, ಏಪ್ರಿಲ್ 21, 2021
23 °C
ಶಾಸಕ ಕೆ.ಶ್ರೀನಿವಾಸಗೌಡ ಪ್ರತಿಕ್ರಿಯೆ

ಪ್ರಕಾಶ್ ಹೇಳಿಕೆಗೆ ಉತ್ತರಿಸುವ ಅಗತ್ಯತೆಯಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿರುವ ಮಾಜಿ ಶಾಸಕ ವರ್ತೂರು ಆರ್.ಪ್ರಕಾಶ್ ಬೇಸರದಲ್ಲಿ ತಮ್ಮ ಬಗ್ಗೆ ಮಾತನಾಡುತ್ತಿದ್ದು, ಅದಕ್ಕೆ ಉತ್ತರಿಸುವ ಮೂಲಕ ಸಣ್ಣತನ ತೋರಿಸಿಕೊಳ್ಳುವ ಅಗತ್ಯತೆ ತಮಗಿಲ್ಲ' ಎಂದು ಶಾಸಕ ಕೆ.ಶ್ರೀನಿವಾಸಗೌಡ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣೆಯಲ್ಲಿ ಸೋತ್ತಿರುವ ಬೇಸರಿಂದ ವರ್ತೂರು ಪ್ರಕಾಶ್ ಇನ್ನು ಹೊರಗೆ ಬಂದಿಲ್ಲ. ಅವರ ಹೇಳಿಕೆಗಳಿಗೆಲ್ಲಾ ಉತ್ತರ ಕೊಡಬೇಕಾದ ಅಗತ್ಯವಿಲ್ಲ. ಜನ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ ಸಾಕು' ಎಂದು ತಿರುಗೇಟು ನೀಡಿದರು.

‘ಸಂಸದ ಕೆ.ಎಚ್.ಮುನಿಯಪ್ಪ ಅವರ ಮೂಲಕ ಕಾಂಗ್ರೆಸ್‍ಗೆ ಸೇರಿಕೊಳ್ಳಬೇಕು ಎಂಬ ಪ್ರಯತ್ನ ವಿಫಲವಾಗಿದೆ. ಈಗ ಕೆ.ಎಚ್.ಮುನಿಯಪ್ಪ ಅವರೊಂದಿಗೆ ಸೇರಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು ಕ್ಷೇತ್ರದಲ್ಲಿ ಯಾರ ಜತೆಗೂ ಗುರುತಿಸಿಕೊಳ್ಳಲು ಅವಕಾಶವಿಲ್ಲ’ ಎಂದು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಾವು ಯಾರಿಗೆ ಬೆಂಬಲಿಸಬೇಕು ಎನ್ನುವುದನ್ನು ಪಕ್ಷದ ವರಿಷ್ಠರು ಸೂಚನೆಯನ್ನು ನಾವು ಪಾಲಿಸಬೇಕಾಗಿದ್ದು, ಸರ್ಕಾರ ಉಳಿವಿಗೆ ಬದ್ಧರಾಗಿರುತ್ತೇವೆ' ಎಂದರು.

‘ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿದ ಕೆ.ಶ್ರೀನಿವಾಸಗೌಡ, ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಇನ್ನು ಯಾವುದೇ ತೀರ್ಮಾನವಾಗಿಲ್ಲ’ ಎಂದು ತಿಳಿಸಿದರು.

‘ಹಿಂದೆ ನಾನು ಸಚಿವನಾಗಿದ್ದಾಗೆ, ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕರಾಗಿದ್ದರು. ಮುಂದಿನವಾರ ಜೆಡಿಎಸ್ ಪಕ್ಷದಿಂದ ಆಯ್ಕೆ ಮಾಡಲಾಗುತ್ತಿದೆ. ಹೀಗಾಗಿ ನಾನೂ ಆಕಾಂಕ್ಷಿಯಾಗಿರಬೇಕಲ್ಲವೇ. ರಾಜಕಾರಣದಲ್ಲಿ ಏರುಪೇರು ಸಾಮಾನ್ಯ’ ಎಂದು ಹೇಳಿದರು.

‘ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿ ಅವರೇ ಶಾಸಕರಾಗಿದ್ದರು. ಅಂತಹ ಸಂದರ್ಭದಲ್ಲಿಯೂ ಜೆಡಿಎಸ್‍ನವರೇ ಹೆಚ್ಚಿನ ಸ್ಥಾನಗಳನ್ನು ಪಡೆದಿದ್ದರು. ಮೂವರು ಸದಸ್ಯರು ಮಣ್ಣು ತಿಂದ ಪರಿಣಾಮ ಅಧ್ಯಕ್ಷ ಸ್ಥಾನವು ಕೈತಪ್ಪಿದೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಸಾಧ್ಯತೆಯಿದ್ದು, ಪಕ್ಷದ ತೀರ್ಮಾನದ ಬಳಿಕ ನಾವೂ ಸಿದ್ಧರಾಗುತ್ತೇವೆ' ಎಂದರು.

‘ದಿವಂಗತ ದೇವರಾಜ್ ಅರಸು ಅವರು 40 ವರ್ಷಗಳ ಹಿಂದೆಯೇ ಮೇಕೆದಾಟು ಯೋಜನೆಯಡಿಯಲ್ಲಿ ನೀರನ್ನು ಬೆಂಗಳೂರು ನಗರ ಮತ್ತು ಕೋಲಾರಕ್ಕೆ ಹರಿಸಲು ಚಿಂತಿಸಿದ್ದರು. ಆದರೆ ಇಂದು ಯೋಜನೆಯಲ್ಲಿ ಕೋಲಾರವನ್ನೇ ಕೈಬಿಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೋಲಾರವನ್ನು ಯೋಜನೆಯಲ್ಲಿ ಸೇರಿಸಲು ಮನವಿ ಮಾಡಲಾಗುವುದು’ ಎಂದು ಹೇಳಿದರು.

’ಈಗಾಗಲೇ ಕೆಸಿವ್ಯಾಲಿ ಯೋಜನೆಯಿಂದ ಕೋಲಾರಕ್ಕೆ ನೀರು ಹರಿಯುತ್ತಿದೆ. ಪೈಪ್‍ಲೈನ್ ಕಾಮಗಾರಿಗೆ ಸ್ಥಗಿತಗೊಂಡಿದ್ದ ಯರಗೋಳ್ ಡ್ಯಾಂ ನಿರ್ಮಾಣ ಕಾಮಗಾರಿ ಹಾಗೂ ಎತ್ತಿನಹೊಳೆ ಯೋಜನೆ ಪ್ರಗತಿಯಲ್ಲಿದೆ. ಮೇಕೆದಾಟು ಯೋಜನೆಯಲ್ಲಿಯೂ ಕೋಲಾರಕ್ಕೆ ಪಾಲು ಸಿಕ್ಕಿದ್ದಲ್ಲಿ, ಎಲ್ಲ ಯೋಜನೆಗಳೂ ಬರ ಪೀಡಿತ ಜಿಲ್ಲೆಗೆ ಆಧಾರ ಸ್ತಂಭಗಳಾಗಲಿವೆ' ಎಂದು ಅಭಿಪ್ರಾಯಪಟ್ಟರು.

‘ಕೋಲಾರಮ್ಮ ಕೆರೆ ಸುತ್ತಲೂ ₹10 ಕೋಟಿ ವೆಚ್ಚದಲ್ಲಿ ವಾಕಿಂಗ್ ಟ್ರಾಕ್ ನಿರ್ಮಿಸಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಸುತ್ತಲೂ ಗಿಡಗಳನ್ನು ಬೆಳೆಸಿ ಉತ್ತಮ ವಾತಾವರಣ ನಿರ್ಮಿಸಲು ಚಿಂತಿಸಿದ್ದು, ಅದಕ್ಕಾಗಿ ಕ್ರಿಯಾಯೋಜನೆಯನ್ನೂ ತಯಾರಿಸಲಾಗಿದೆ. ಸದ್ಯದಲ್ಲೇ ಸರ್ಕಾರ ಪ್ರಸ್ತಾವ ಸಲ್ಲಿಸುವುದಿ' ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ದಯಾನಂದ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲ್, ಮುಖಂಡರಾದ ಚಂದ್ರಮೌಳಿ, ಅನ್ವರ್‍ಪಾಷ, ವೆಂಕಟೇಶ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು