ಸತ್ಯ ಮರೆಮಾಚಿ ಸಮಾಜಕ್ಕೆ ವಂಚನೆ

7
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗರಾಜ್‌ ಕಳವಳ

ಸತ್ಯ ಮರೆಮಾಚಿ ಸಮಾಜಕ್ಕೆ ವಂಚನೆ

Published:
Updated:
Prajavani

ಕೋಲಾರ: ‘ಇತಿಹಾಸ ಪಠ್ಯಗಳಲ್ಲಿ ಸತ್ಯ ಮರೆಮಾಚಿ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ. ಇದು ಭವಿಷ್ಯದ ಪೀಳಿಗೆಗೆ ಮಾಡುತ್ತಿರುವ ದೊಡ್ಡ ದ್ರೋಹ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ವಿಷಾದಿಸಿದರು.

ಜನಾಧಿಕಾರ ಸಂಘಟನೆಯು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ‘ಕೋರೆಗಾಂವ್ ಚಳವಳಿ ನಡೆದು 201 ವರ್ಷ ಕಳೆದರೂ ಇತಿಹಾಸ ಪಠ್ಯಗಳಲ್ಲಿ ಈ ಐತಿಹಾಸಿಕ ಕದನದ ಪರಿಚಯ ಮಾಡದೆ ಮುಚ್ಚಿಡಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶಿಕ್ಷಣ ಇಲಾಖೆಯು ಹಲವು ಸತ್ಯಗಳನ್ನು ಇತಿಹಾಸದ ಪಠ್ಯದಲ್ಲಿ ಸೇರಿಸದೆ ಭವಿಷ್ಯದ ಪೀಳಿಗೆಯನ್ನು ಮತ್ತು ಸಮಾಜವನ್ನು ವಂಚಿಸುತ್ತಲೇ ಬಂದಿದೆ. ಅಂಬೇಡ್ಕರ್ ಅವರು ದೇಶದಲ್ಲೇ ಮೊದಲ ಬಾರಿಗೆ ರೂಪಾಯಿ ಕುರಿತು ಪಿ.ಎಚ್‌ಡಿ ಮಾಡಿದರೂ ಇಂದಿಗೂ ಅವರನ್ನು ಆರ್ಥಿಕ ತಜ್ಞರೆಂದು ಪರಿಚಯಿಸದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಂಚಿತ ಸಮುದಾಯಗಳಿಂದ ಬಂದ ಮಹನೀಯರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಇತಿಹಾಸದ ಪಠ್ಯದಲ್ಲಿ ಸೇರಿಸದೆ ದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೋಸ ಮಾಡಲಾಗುತ್ತಿದೆ. ಕೋರೆಗಾಂವ್ ಕದನವು ಅವಮಾನಿತ ಅಸ್ಪೃಶ್ಯ ಸಮುದಾಯದ ವೀರ ಯೋಧರು ಅಸ್ಪೃಶ್ಯತೆ ಮತ್ತು ಅವಮಾನ ಸಹಿಸಲಾಗದೆ ಸಿಡಿದೆದ್ದು ನಡೆಸಿದ ಸ್ವಾಭಿಮಾನಿ ಹೋರಾಟದ ಪ್ರತೀಕ’ ಎಂದು ಹೇಳಿದರು.

ವಿಮೋಚನೆಯ ಹೋರಾಟ: ‘ಕೋರೆಗಾಂವ್ ಕದನವು ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಪಾಲಿಗೆ ವಿಮೋಚನೆ ನೀಡಿದ ಹೋರಾಟವಾಗಿದೆ. ಅಸಮಾನತೆ, ಅನ್ಯಾಯದ ವಿರುದ್ಧ ದ್ವನಿ ಎತ್ತಲು ಹೋರಾಟ ಮಾಡಲು ಹೆಚ್ಚಿನ ಜನ ಬೇಕಿಲ್ಲ. ಸಣ್ಣ ಗುಂಪಿನಲ್ಲಾದರೂ ಒಗ್ಗಟ್ಟಿನಿಂದ ವೀರರಂತೆ ಹೋರಾಡಿದರೆ ಗೆಲುವು ನಿಶ್ಚಿತ ಎಂಬುದನ್ನು ಕೋರೆಗಾಂವ್‌ ಕದನದಲ್ಲಿ ಭಾಗಿಯಾದ ಮಹರ್ ಯೋಧರು ತೋರಿಸಿಕೊಟ್ಟಿದ್ದಾರೆ’ ಎಂದು ಜನಾಧಿಕಾರ ಸಂಘಟನೆ ಅಧ್ಯಕ್ಷ ಕೆ.ರಾಮಮೂರ್ತಿ ತಿಳಿಸಿದರು.

ಉಪನ್ಯಾಸಕರಾದ ಎನ್.ರಾಮಚಂದ್ರ, ಸವಿತಾ, ಕಾಳಿದಾಸ್, ಜನಾಧಿಕಾರ ಸಂಘಟನೆ ಖಜಾಂಚಿ ಮಂಜುಳಾ, ಸದಸ್ಯರಾದ ಅಲ್ಲಾಬಕಾಶ್‌, ಕಲಾವಿದ ಪ್ರಸಾದ್‌ ಭಾಗವಹಿಸಿದ್ದರು.

ಭೀಮ ನಮನ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸದಸ್ಯರು ಇಲ್ಲಿನ ನಚಿಕೇತ ವಿದ್ಯಾರ್ಥಿನಿಲಯ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭೀಮ ನಮನ ಸಲ್ಲಿಸಿದರು. ಕೋರೆಗಾಂವ್‌ ಹೋರಾಟದಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ಸದಸ್ಯರು ಮೌನಾಚರಣೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !