ಭತ್ತ ಖರೀದಿಗೆ 2 ದಿನ ಗಡುವು: ಸತ್ಯಾಗ್ರಹ ಎಚ್ಚರಿಕೆ

7

ಭತ್ತ ಖರೀದಿಗೆ 2 ದಿನ ಗಡುವು: ಸತ್ಯಾಗ್ರಹ ಎಚ್ಚರಿಕೆ

Published:
Updated:

ಮಂಡ್ಯ: ‘ರೈತರಿಂದ ಎರಡು ದಿನದಲ್ಲಿ ಭತ್ತ ಖರೀದಿ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂರುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವಣ್ಣ ಎಚ್ಚರಿಕೆ ನೀಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಡಿ.16ರಿಂದ ಖರೀದಿಯಾಗಬೇಕಿದ್ದ ಭತ್ತವನ್ನು ಜ.1 ಕಳೆದರೂ ಖರೀದಿಸುತ್ತಿಲ್ಲ. ಜಿಲ್ಲೆಯಲ್ಲಿ ಬೆಳೆಯಲಾದ ಒಟ್ಟು ಭತ್ತದಲ್ಲಿ ಶೇ.65ರಷ್ಟು ಈಗಾಗಲೇ ದಲ್ಲಾಳಿಗಳ ಪಾಲಾಗಿದೆ. ಉಳಿದಿರುವ ಶೇ.35ರಷ್ಟು ಭತ್ತವನ್ನಾದರೂ ಸರ್ಕಾರ ರೈತರಿಂದ ಖರೀದಿಸಬೇಕು. ತಮಿಳುನಾಡು ಹಾಗೂ ಕೇರಳದಲ್ಲಿ ಪ್ರತಿ ಕ್ವಿಂಟಲ್ ಭತ್ತ ₹ 2,300 ಮಾರಾಟವಾಗುತ್ತಿದೆ. ದಲ್ಲಾಳಿಗಳು ರೈತರಿಂದ ₹ 1,200– ₹1,300 ಬೆಲೆಯಲ್ಲಿ ಖರೀದಿ ಮಾಡಿ, ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಾ ಲಾಭ ಗಳಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಜಿಲ್ಲಾಡಳಿತ ತಕ್ಷಣ ಭತ್ತ ಖರೀದಿ ಮಾಡದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ರೂಪಿಸಲಾಗುವುದು. ಖರೀದಿ ಕೇಂದ್ರದ ಹೆಸರಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಗ್ಗಾಜಗ್ಗಾಟದಲ್ಲಿ ತೊಡಗಿದ್ದಾರೆ. ಇದರಿಂದ ದಲ್ಲಾಳಿಗಳಿಗೆ ಅನುಕೂಲವಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ ‘ಪ್ರತಿ ಕ್ವಿಂಟಲ್ ಭತ್ತಕ್ಕೆ ಕೇಂದ್ರ ಸರ್ಕಾರ ₹ 1,750 ನಿಗದಿ ಮಾಡಿದೆ. ಕೇಂದ್ರದ ಬೆಲೆ ನಿಗದಿ ಸಹಿಸದ ರಾಜ್ಯ ಸರ್ಕಾರ, ರೈತರಿಂದ ಭತ್ತ ಖರೀದಿ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಹೆಸರು ಬರುತ್ತದೆ ಎಂಬ ಹುನ್ನಾರದಿಂದ ಭತ್ತ ಖರೀದಿ ಮಾಡುತ್ತಿಲ್ಲ. ಹೀಗಾಗಿ ಅಕ್ಕಿ ಗಿರಣಿ ಮಾಲೀಕರೊಂದಿಗೆ ಶಾಮೀಲಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಮನ್‌ಮುಲ್‌ನಿಂದ ಹಾಲಿನ ಖರೀದಿ ದರ ₹ 2 ಕಡಿತಗೊಳಿಸಿ ಹಾಲು ಉತ್ಪಾದಕರಿಗೆ ವಂಚನೆ ಮಾಡಿದೆ. 2014 ರಿಂದ ಪ್ರತಿ ಲೀಟರ್ ಹಾಲಿಗೆ ₹ 5 ಖರೀದಿ ದರ ಕಡಿತಗೊಳಿಸಿದೆ. ಉತ್ಪಾದಕರಿಂದ ನೀಡಲಾಗುವ ಹಾಲಿನ ದರದಲ್ಲಿ ₹ 600 ಕೋಟಿ ವಂಚನೆ ಮಾಡಿದೆ. ಈ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಮನ್‌ಮುಲ್ ಹಾಲಿನ ಉಪ ಉತ್ಪನ್ನಗಳು ಗುಣಮಟ್ಟವಾಗಿದ್ದು, ಮಾರುಕಟ್ಟೆ ಸೃಷ್ಟಿ ಹಾಗೂ ವಿಸ್ತರಣೆಯಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಹಾಲಿನ ದರ ಕಡಿತಗೊಳ್ಳಲು ಒಕ್ಕೂಟದ ಲೋಪ ಕಾರಣವಾಗಿದ್ದು, ನಷ್ಟಕ್ಕೆ ಕಾರಣವಾಗಿರುವ ಆಡಳಿತ ಮಂಡಳಿಯನ್ನು ಕೂಡಲೇ ವಜಾ ಮಾಡಬೇಕು. ಹಾಲಿನ ದರ ಇಳಿಕೆಯಾಗುತ್ತಿದ್ದರೂ, ಪಶು ಆಹಾರದ ಬೆಲೆ ಗಗನಕ್ಕೇರುತ್ತಿದೆ. ಕೂಡಲೇ ದರ ಕಡಿತದ ಆದೇಶ ಹಿಂಪಡೆಯದಿದ್ದರೆ ಮನ್‌ಮುಲ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ’ ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಇ.ಅಶ್ವತ್ಥನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣಗೌಡ, ಮುಖಂಡರಾದ ಡಾ.ಸಿದ್ದರಾಮಯ್ಯ, ಬಿ.ಕೃಷ್ಣ, ವಿಜಯ್‌ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !