ಪ್ರವಾಸಕ್ಕೆ ತೆರೆಮರೆಯ ತಯಾರಿ: ನಗರವಾಸಿಗಳ ಟೀಕೆ

7
ಚುನಾವಣೆ ಹೊಸ್ತಿಲಲ್ಲಿ ಅಧ್ಯಯನ ಪ್ರವಾಸಕ್ಕೆ ಸಜ್ಜಾದ ನಗರಸಭೆ ಸದಸ್ಯರು– ಅಧಿಕಾರಿಗಳು

ಪ್ರವಾಸಕ್ಕೆ ತೆರೆಮರೆಯ ತಯಾರಿ: ನಗರವಾಸಿಗಳ ಟೀಕೆ

Published:
Updated:
Prajavani

ಕೋಲಾರ: ನಗರವಾಸಿಗಳು ಜಲಕ್ಷಾಮದಿಂದ ತತ್ತರಿಸಿದ್ದರೆ ನಗರಸಭೆಯ ಕೆಲ ಸದಸ್ಯರು ಹಾಗೂ ಅಧಿಕಾರಿಗಳ ತಂಡವು ಪುರಪಿತೃ ನೇತೃತ್ವದಲ್ಲಿ ಅಧ್ಯಯನದ ಸೋಗಿನಲ್ಲಿ ಪ್ರವಾಸ ಹೋಗಲು ತೆರೆಮರೆಯಲ್ಲೇ ತಯಾರಿ ನಡೆಸಿದೆ.

ಆಂಧ್ರಪ್ರದೇಶದ ಬಂದರು ನಗರಿ ವೈಜಾಗ್‌ಗೆ (ವಿಶಾಖಪಟ್ಟಣ) ಪ್ರವಾಸ ಹೋಗಲು ತೀರ್ಮಾನಿಸಲಾಗಿದ್ದು, ಜುಲೈನಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರವಾಸಕ್ಕೆ ಅನುಮೋದನೆ ಸಹ ಸಿಕ್ಕಿದೆ. ಪ್ರವಾಸಕ್ಕೆ ನಗರಸಭೆ ನಿಧಿಯ ಅನುದಾನ ಬಳಸಲು ಉದ್ದೇಶಿಸಲಾಗಿದ್ದು, ಅನುಮತಿ ಕೋರಿ ಜಿಲ್ಲಾಧಿಕಾರಿಗೆ ಕಡತ ರವಾನಿಸಲಾಗಿದೆ.

ನಗರಸಭೆಯ 35 ಸದಸ್ಯರ ಪೈಕಿ 20 ಮಂದಿ ಪ್ರವಾಸಕ್ಕೆ ಜೈ ಎಂದಿದ್ದು, 15 ಸದಸ್ಯರು ಪ್ರವಾಸಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ. ನಗರಸಭೆ ಆಯುಕ್ತರು, ಎಂಜಿನಿಯರ್‌ ಹಾಗೂ ಆರೋಗ್ಯ ನಿರೀಕ್ಷಕರನ್ನು ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ.

ಪ್ರಸಕ್ತ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಮಳೆ ಕೈ ಕೊಟ್ಟಿದ್ದು, ಸರ್ಕಾರ ಜಿಲ್ಲೆಯ 5 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳೆಂದು ಈಗಾಗಲೇ ಘೋಷಣೆ ಮಾಡಿದೆ. ಬರ ಪರಿಸ್ಥಿತಿಯಿಂದಾಗಿ ನಗರದ ಬಹುತೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೇಸಿಗೆಗೂ ಮುನ್ನವೇ ನಗರದಲ್ಲಿ ನೀರಿಗೆ ಹಾಹಾಕಾರ ಶುರುವಾಗಿದೆ.

ಮತ್ತೊಂದೆಡೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದ್ದು, ಹಾದಿ ಬೀದಿಯಲ್ಲಿ ಕಸ ರಾಶಿಯಾಗಿ ಬಿದ್ದಿದೆ. ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಇಡೀ ನಗರ ಗುಂಡಿಮಯವಾಗಿದೆ. ಊರಿನ ಸಮಸ್ಯೆಗೆ ಸ್ಪಂದಿಸದ ಸದಸ್ಯರು ಅಧ್ಯಯನದ ಸೋಗಿನಲ್ಲಿ ಮೋಜು ಮಸ್ತಿಗಾಗಿ ಪ್ರವಾಸ ಹೊರಟಿರುವುದಕ್ಕೆ ನಗರವಾಸಿಗಳಿಂದ ಟೀಕೆ ವ್ಯಕ್ತವಾಗಿದೆ. ಚುನಾಯಿತ ಮಂಡಳಿ ಹಾಗೂ ಅಧಿಕಾರಿ ವರ್ಗವು ಜನರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಅಂತ್ಯದಲ್ಲಿ ಪ್ರವಾಸ: ನಗರಸಭೆ ಚುನಾಯಿತ ಮಂಡಳಿಯು 5 ವರ್ಷದ ಅಧಿಕಾರಾವಧಿಯಲ್ಲಿ ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ದೇಶದ ಮಾದರಿ ನಗರಗಳಿಗೆ ಒಂದು ಬಾರಿ ಅಧ್ಯಯನ ಪ್ರವಾಸ ಹೋಗಲು ಸರ್ಕಾರವೇ ಅವಕಾಶ ಕಲ್ಪಿಸಿದೆ. ಅಧ್ಯಯನ ಪ್ರವಾಸದ ಪರಿಪಾಠ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ನಗರಸಭೆಯಲ್ಲಿ ಈ ಹಿಂದೆ ಆಡಳಿತ ನಡೆಸಿದ ಚುನಾಯಿತ ಮಂಡಳಿಗಳು ಅಧಿಕಾರಾವಧಿಯ ಆರಂಭದಲ್ಲಿ ಅಥವಾ ಮಧ್ಯ ಭಾಗದಲ್ಲಿ ಮಾದರಿ ನಗರಗಳಿಗೆ ಪ್ರವಾಸ ಹೋಗಿ ಅಲ್ಲಿನ ಅಭಿವೃದ್ಧಿ, ಮೂಲಸೌಕರ್ಯ, ಕಸ ವಿಲೇವಾರಿ ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಿ ಬಂದು ನಗರದಲ್ಲೂ ಅದೇ ಮಾದರಿ ಕಾರ್ಯಗತಗೊಳಿಸುವ ಪ್ರಯತ್ನ ಮಾಡಿವೆ. ಆದರೆ, ಪ್ರಸಕ್ತ ಚುನಾಯಿತ ಮಂಡಳಿಯು ಅಧಿಕಾರಾವಧಿಯ ಕೊನೆಯಲ್ಲಿ ಪ್ರವಾಸಕ್ಕೆ ಹೊರಟಿರುವುದು ಟೀಕೆಗೆ ಗುರಿಯಾಗಿದೆ.

ಪರ–ವಿರೋಧ: 2014ರಲ್ಲಿ ಅಸ್ತಿತ್ವಕ್ಕೆ ಬಂದ ಚುನಾಯಿತ ಮಂಡಳಿಯ ಅಧಿಕಾರಾವಧಿ ಮಾರ್ಚ್‌ 10ಕ್ಕೆ ಕೊನೆಗೊಳ್ಳಲಿದೆ. ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಯಾವುದೇ ಕ್ಷಣದಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಸದ ಬಗ್ಗೆ ಸದಸ್ಯರಲ್ಲೇ ಪರ– ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.

15 ಸದಸ್ಯರು, ‘ಚುನಾವಣೆ ಹೊಸ್ತಿಲಲ್ಲಿ ಪ್ರವಾಸ ಹೋಗಿ ಬಂದು ನಗರದಲ್ಲಿ ಏನು ಅಭಿವೃದ್ಧಿ ಮಾಡುತ್ತೀರಿ. ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಅವಧಿಯಲ್ಲಿ ಪ್ರವಾಸಕ್ಕೆ ಹೋದರೆ ಜನರೆದುರು ನಗೆಪಾಟಲಿಗೆ ಈಡಾಗುತ್ತೇವೆ?’ ಎಂದು ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

20 ಸದಸ್ಯರು, ‘ನಗರದ ಸಮಸ್ಯೆಗೆ ಕೊನೆಯಿಲ್ಲ. 5 ವರ್ಷದ ಅಧಿಕಾರಾವಧಿಯಲ್ಲಿ ಎಲ್ಲಿಗೂ ಪ್ರವಾಸ ಹೋಗಿಲ್ಲ. ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತೇವೊ ಅಥವಾ ಸೋಲುತ್ತೇವೊ ಗೊತ್ತಿಲ್ಲ. ಸರ್ಕಾರವೇ ಅವಕಾಶ ಕಲ್ಪಿಸಿರುವಾಗ ಪ್ರವಾಸ ಹೋಗುವುದರಲ್ಲಿ ತಪ್ಪಿಲ್ಲ’ ಎಂಬ ವಾದ ಮುಂದಿಟ್ಟಿದ್ದಾರೆ. ಕೆಲ ಸದಸ್ಯರು ಬಸ್‌ನಲ್ಲಿ ಪ್ರವಾಸ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ವಿಮಾನದಲ್ಲೇ ಹೋಗಬೇಕೆಂದು ಪಟ್ಟು ಹಿಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !