ಮನೆಯಲ್ಲೇ ಹೆಣ್ಣಿಗೆ ಸಮಾನತೆ ಇಲ್ಲ

7
ಮಹಿಳಾ ಸಂಸ್ಕೃತಿ ಉತ್ಸವದಲ್ಲಿ ಜಿ.ಪಂ ಉಪಾಧ್ಯಕ್ಷೆ ಯಶೋದಾ ಕಳವಳ

ಮನೆಯಲ್ಲೇ ಹೆಣ್ಣಿಗೆ ಸಮಾನತೆ ಇಲ್ಲ

Published:
Updated:
Prajavani

ಕೋಲಾರ: ‘ಗಂಡು ಹೆಣ್ಣಿನ ಭೇದಭಾವ ಮನೆಯಿಂದಲೇ ಆರಂಭವಾಗುತ್ತಿದ್ದು, ಕಾನೂನುಬಾಹಿರವಾಗಿ ಭ್ರೂಣ ಪತ್ತೆ ಮಾಡಿ ಹೆಣ್ಣು ಮಕ್ಕಳನ್ನು ಹತ್ಯೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಕಳವಳ ವ್ಯಕ್ತಪಡಿಸಿದರು.

ಸಾವಿತ್ರಿಬಾಯಿ ಬಾಪುಲೆ ಜನ್ಮದಿನದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿ, ‘ಸಮಾಜಕ್ಕೆ ಹೆಣ್ಣು ತಾಯಿ ಮತ್ತು ಪತ್ನಿಯಾಗಿ ಬೇಕು. ಆದರೆ, ಮಗಳಾಗಿ ಮಾತ್ರ ಬೇಡ. ಮನೆಯಲ್ಲೇ ಹೆಣ್ಣಿಗೆ ಸಮಾನತೆ ಇಲ್ಲದಾಗಿದೆ’ ಎಂದು ವಿಷಾದಿಸಿದರು.

‘ಕೆಲಸದಿಂದ ಹಿಡಿದು ಪ್ರೀತಿ ತೋರುವವರೆಗೂ ಗಂಡು ಮಕ್ಕಳಿಗೆ ಹೆಚ್ಚಿನ ಪಾಲಿದೆ. ಹೀಗಾಗಿ ಮನೆಯಲ್ಲಿ ಹೆಣ್ಣು ಸಮಾನತೆ ಕಳೆದುಕೊಂಡಿದ್ದಾಳೆ. ಅಂತೆಯೇ ಸಮಾಜದಲ್ಲೂ ಸಮಾನತೆಯಿಂದ ದೂರವಾಗಿದ್ದಾಳೆ. ಈ ವ್ಯವಸ್ಥೆ ಬದಲಾಗಲು ಶಿಕ್ಷಣ ಅಗತ್ಯ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಮಹಿಳಾ ಜಿಲ್ಲಾಧಿಕಾರಿ ಅಥವಾ ಸಿಇಒ ಇದ್ದಿದ್ದರೆ ಖಂಡಿತ ಈ ಕಾರ್ಯಕ್ರಮಕ್ಕೆ ಬರುತ್ತಿದ್ದರು. ಆದರೆ, ಪುರುಷರು ಜಿಲ್ಲಾಧಿಕಾರಿ ಮತ್ತು ಸಿಇಒ ಹುದ್ದೆಯಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಇದರಿಂದ ಬೇಸರವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಯ್ಯಪ್ಪಸ್ವಾಮಿ ಹೇಳಿಲ್ಲ: ‘ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಾರದೆಂದು ಅಯ್ಯಪ್ಪಸ್ವಾಮಿ ಹೇಳಿಲ್ಲ. ಆದರೆ, ಅಂತಹ ರೂಢಿಯನ್ನು 800 ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿದರು.

‘ಮಹಿಳೆಯರು ದೇವರ ದರ್ಶನ ಪಡೆದರೆ ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಇಬ್ಬರು ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸಿ ಅಯ್ಯಪ್ಪಸ್ವಾಮಿಯ ದರ್ಶನ ಪಡೆದಿರುವುದು ಸಂತಸ ತಂದಿದೆ. ಇದೇ ರೀತಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ನಮಾಜ್‌ಗೆ ಕಳುಹಿಸುವ ಹೋರಾಟ ಆರಂಭಗೊಳ್ಳಲಿ’ ಎಂದು ಸಲಹೆ ನೀಡಿದರು.

ಮಹಿಳೆಯ ಶ್ರಮ: ಸಾವಿತ್ರಿಬಾಯಿ ಬಾಪುಲೆ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ‘ಸಾಮಾಜಿಕ ಬದಲಾವಣೆಯ ಆಲೋಚನೆ ಮಾಡಬೇಕು. ಮಹಿಳಾ ಮೀಸಲಾತಿಯನ್ನು ಶೇ 33ರಿಂದ 50ಕ್ಕೆ ಹೆಚ್ಚಿಸಬೇಕು. ಮೀಸಲಾತಿ ಹೆಚ್ಚಿಸಿದರೆ ಖಂಡಿತ ಬದಲಾವಣೆ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪುರುಷರ ಸಾಧನೆಯ ಹಿಂದೆ ಮಹಿಳೆಯ ಶ್ರಮ ಇರುತ್ತದೆ. ಸಾವಿತ್ರಿಬಾಯಿ ಬಾಪುಲೆಯವರ ದೂರದೃಷ್ಟಿಯ ಫಲವಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಬಾಪುಲೆ ಸಮಾಜ ಬದಲಾವಣೆ ಮಾಡುವ ಉದ್ದೇಶದಿಂದ ಶಿಕ್ಷಕಿಯಾಗಿದ್ದರು’ ಎಂದರು.

ಮೌಢ್ಯತೆ ಮುಂದುವರಿದಿದೆ: ‘ಮಹಿಳೆಯರಿಗೆ ಮಾದರಿಯಾಗಿರುವ ಸಾವಿತ್ರಿಬಾಯಿ ಬಾಪುಲೆ ಅವರ ಶ್ರಮದಿಂದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ಅಭಿಪ್ರಾಯಪಟ್ಟರು.

‘ಹೆಣ್ಣು ಮಕ್ಕಳು ದೇವಾಲಯ ಪ್ರವೇಶಿಸುವುದಕ್ಕೆ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಶಬರಿಮಲೆಯಲ್ಲಿ ಮಹಿಳೆಯರು ದೇವಾಲಯ ಪ್ರವೇಶಿಸಿದ್ದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಕೆಲವರು ನೋವು ತಿನ್ನುತ್ತಿದ್ದಾರೆ. ಮೌಢ್ಯತೆ ಇನ್ನೂ ಮುಂದುವರಿದಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶ ಭಕ್ತಿ ಎಂದರೆ ಮಣ್ಣು ಬೆಟ್ಟ ಗುಡ್ಡಗಳಲ್ಲ. ದೇಶದ ಜನ ಎಂದು ಅರ್ಥ. ಗ್ರಾಮ ಮಟ್ಟದಿಂದ ಪ್ರಧಾನಿ, ರಾಷ್ಟ್ರಪತಿವರೆಗೆ ಮಹಿಳೆಯರು ಅಧಿಕಾರ ನಡೆಸಿದ್ದಾರೆ. ಮಹಿಳೆಯರು ಅಧಿಕಾರಿಗಳಾಗಲು ಮತ್ತು ಜನಪ್ರತಿನಿಧಿಗಳಾಗಲು ಸಂವಿಧಾನದಿಂದ ಸಾಧ್ಯವಾಗಿದೆ. ಆದರೆ, ಮಹಿಳೆಯರಿಗೆ ರಕ್ಷಣೆಯಿಲ್ಲ. ಪ್ರತಿ ಹಂತದಲ್ಲೂ ಹೋರಾಟ ನಡೆಸಿದರೆ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ’ ಎಂದರು.

ಕಲಾ ತಂಡಗಳ ಮೆರವಣಿಗೆ: ಕಲಾವಿದರು ನೃತ್ಯ, ಕೋಲಾಟ, ಡೊಳ್ಳು ಕುಣಿತ, ಗಾಯನ, ಭರತನಾಟ್ಯ ಪ್ರದರ್ಶಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಕಲಾ ತಂಡಗಳ ಮೆರವಣಿಗೆ ನಡೆಯಿತು.

ಜಿ.ಪಂ ಅಧ್ಯಕ್ಷೆ ಗೀತಮ್ಮ, ಸಾಹಿತಿ ಸ.ರಘುನಾಥ, ವಿಮರ್ಶಕ ಚಂದ್ರಶೇಖರ ನಂಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಸಹ್ಯಾದ್ರಿ ವಿದ್ಯಾಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !