ಕನ್ನಡದ ಪಾಲಿನ ವಿಸ್ಮಯ ಕಂಬಾರ: ಪ್ರೊ.ಸಿ.ಎನ್‌.ರಾಮಚಂದ್ರನ್‌

7
ವಿಶೇಷ ಉಪನ್ಯಾಸದಲ್ಲಿ ಪ್ರೊ.ಸಿ.ಎನ್‌.ರಾಮಚಂದ್ರನ್‌ ಬಣ್ಣನೆ

ಕನ್ನಡದ ಪಾಲಿನ ವಿಸ್ಮಯ ಕಂಬಾರ: ಪ್ರೊ.ಸಿ.ಎನ್‌.ರಾಮಚಂದ್ರನ್‌

Published:
Updated:

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಡಾ.ಚಂದ್ರಶೇಖರ ಕಂಬಾರ ಎಂದರೆ ಕನ್ನಡದ ಪಾಲಿಗೆ ಅರ್ಥೈಸಲಾಗದ, ಯಾವುದೇ ಕಾರ್ಯಕಾರಣ ಸಂಬಂಧಗಳಿಂದ ವಿವರಿಸಲಾಗದ ಒಂದು ವಿಸ್ಮಯ’ ಎಂದು ಹಿರಿಯ ವಿಮರ್ಶಕ ಪ್ರೊ.ಸಿ.ಎನ್‌.ರಾಮಚಂದ್ರನ್‌ ಬಣ್ಣಿಸಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ‘ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಕವಿ, ನಾಟಕಕಾರ, ಕಾದಂಬರಿಕಾರ, ಸಂಶೋಧಕ, ಸಂಗೀತಗಾರ, ಆಡಳಿತಗಾರ, ಶಾಸಕನಾಗಿ ಅವರು ಮಾಡಿದ ಕೆಲಸಗಳು ಇದಕ್ಕೆ ಸಾಕ್ಷಿ’ ಎಂದರು.

1958ರಲ್ಲಿ ಕಂಬಾರರ ಮೊದಲ ಕವನ ಸಂಕಲನ ‘ಮುಗುಳು’ ಪ್ರಕಟವಾಗಿತ್ತು. ಆರು ದಶಕಗಳಿಂದ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವ ಇವರು, ಎಂಟು ಕವನ ಸಂಕಲನ, 32 ನಾಟಕ, ಆರು ಕಾದಂಬರಿ, 14 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಕೃತಿಯನ್ನು ಕಟ್ಟುವ ಮುನ್ನ ವಿಷಯಗಳ ಆಯ್ಕೆಯಲ್ಲಿ ಕಂಬಾರರು ಅನುಸರಿಸುವ ಭಿನ್ನತೆಯೇ ಅಚ್ಚರ ಹುಟ್ಟಿಸುತ್ತದೆ ಎಂದು ಹೇಳಿದರು.

ಆಯಾ ಕಾಲಘಟ್ಟದಲ್ಲಿ ಪ್ರಸಿದ್ಧರಾಗಿದ್ಧ ಸಾಹಿತಿಗಳ ವಿಚಾರ ಆಯ್ಕೆ ಮತ್ತು ನಿರೂಪಣೆಯ ವಿಧಾನವನ್ನು ಕಂಬಾರರು ಯಾವತ್ತೂ ನಕಲು ಮಾಡಲಿಲ್ಲ. ಸಂಪೂರ್ಣವಾಗಿ ಸ್ವಂತಿಕೆಯನ್ನು ರೂಪಿಸಿಕೊಂಡರು. ಪ್ರಭುತ್ವ, ಸಾಮ್ರಾಜ್ಯಷಾಹಿ, ಊಳಿಗಮಾನ್ಯ ವ್ಯವಸ್ಥೆಯ ಬೆಳವಣಿಗೆ ಮತ್ತು ಅಧಃಪತನ, ರಾಜಕೀಯ ಸೇರಿದಂತೆ ವಿಭಿನ್ನ ವಿಚಾರಗಳನ್ನು ಮುಂದಿಟ್ಟುಕೊಂಡು ಕೃತಿಗಳನ್ನು ರಚಿಸಿದರು. ಬಹುತೇಕ ಸಂದರ್ಭಗಳಲ್ಲಿ ಅಲಕ್ಷಿತ ಸಮುದಾಯಗಳ ನೆಲೆಯಲ್ಲಿ ನಿಂತು ಸಮಕಾಲೀನ ಸಂಧರ್ಭದ ಬೆಳವಣಿಗೆಗಳನ್ನು ಗ್ರಹಿಸಿದ ಮತ್ತು ಪ್ರತಿಕ್ರಿಯಿಸಿದ ಮೇರು ಪ್ರತಿಭೆ ಇವರು ಎಂದರು.

1964ರಲ್ಲಿ ಪ್ರಕಟವದ ‘ಹೇಳತೇನ ಕೇಳಾ’ ನೀಳ್ಗವನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಂದ್ರಶೇಖರ ಕಂಬಾರರಿಗೆ ದೊಡ್ಡ ಸ್ಥಾನ ನೀಡಿತು. 21 ಭಾಗಗಳುಳ್ಳ ಈ ನೀಳ್ಗವನ ಇಂದಿಗೂ ಜನಪ್ರಿಯವಾಗಿದೆ. ಇವರ ‘ಮಹಾಮಾಯಿ’ ಮತ್ತು ‘ಗುಳ್ಕಾಯಜ್ಜಿ’ ನಾಟಕಗಳು ಅಲಕ್ಷಿತ ಸಮುದಾಯಗಳ ಕುರಿತು ಹೊಸ ದೃಷ್ಟಿಕೋನವನ್ನು ನೀಡಿದವು. ದೇಶ, ಕಾಲ, ಭಾಷೆ, ಸಂಸ್ಕೃತಿಯ ಪರಿಧಿಗಳಿಲ್ಲದೇ ಇವರ ನಾಟಕಗಳು ಮನ್ನಣೆ ನಪಡೆದಿವೆ ಎಂದು ವಿಶ್ಲೇಷಿಸಿದರು.

ಲೈಂಗಿಕತೆ ಮತ್ತು ಸೃಜನಶೀಲತೆ: ‘ಕಂಬಾರರ ಕೃತಿಗಳಲ್ಲಿ ಲೈಂಗಿಕತೆಯ ವಿಚಾರಗಳು ಹೆಚ್ಚು ಪ್ರಸ್ತಾಪವಾಗುತ್ತವೆ. ಇದೇ ಕಾರಣಕ್ಕಾಗಿ ಸಾಹಿತ್ಯ ವಲಯದ ಕೆಲವರು ಕಂಬಾರರಿಗೆ ಲೈಂಗಿಕತೆಯ ಕುರಿತು ಬರೆಯುವ ಗೀಳು ಅಂಟಿಕೊಂಡಿದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ವಾಸ್ತವ ಹಾಗಿರಲಿಲ್ಲ. ಕಂಬಾರರು ಲೈಂಗಿಕತೆಯನ್ನು ಸೃಜನಶೀಲತೆಯೊಡನೆ ಸಮೀಕರಿಸುತ್ತಾರೆ. ಇದರ ಹಿಂದೆ ಘನವಾದ ಉದ್ದೇಶಗಳಿರುತ್ತವೆ’ ಎಂದು ರಾಮಚಂದ್ರನ್‌ ವ್ಯಾಖ್ಯಾನಿಸಿದರು.

ಗತಕಾಲದ ಆಡಳಿತ ಕೇಂದ್ರವಾಗಿದ್ದ ಹಂಪಿ ಮತ್ತು ದೇಶದ ಈಗಿನ ರಾಜಕೀಯ ಬೆಳವಣಿಗೆಗಳ ಕೇಂದ್ರ ಬಿಂದುವಾಗಿರುವ ದೆಹಲಿಯ ನಡುವಿನ ಸಾಮ್ಯತೆಯನ್ನು ಕಂಬಾರರು ಸ್ಪಷ್ಟವಾಗಿ ಗುರುತಿಸುತ್ತಾರೆ. ಜನರ ಮೇಲಿನ ಅನ್ಯಾಯಗಳು ಹೇಗೆ ನಡೆದವು ಮತ್ತು ನಡೆಯುತ್ತಿವೆ ಎಂಬುದನ್ನು ಜನಪದೀಯವಾಗಿ ಕಟ್ಟಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಪರಂಪರೆಯನ್ನು ಎಷ್ಟು ಉಳಿಸಿಕೊಳ್ಳಬೇಕು ಮತ್ತು ಆಧುನಿಕತೆಯನ್ನು ಎಷ್ಟು ಅಪ್ಪಿಕೊಳ್ಳಬೇಕು ಎಂಬ ಪ್ರಶ್ನೆಗಳಿಗೆ ಅವರ ಬರಹದಲ್ಲಿ ಉತ್ತರವಿದೆ ಎಂದರು.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !