ಭಾನುವಾರ, ಮೇ 31, 2020
27 °C

‘ನನ್ನ ಮೊಮ್ಮಗ ಕನ್ನಡ ವಿದ್ಯಾರ್ಥಿ’: ಮುಖ್ಯಮಂತ್ರಿಗೆ ಪ್ರೊ.ಚಂಪಾ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ‘ನನ್ನ ಮೊಮ್ಮಗ ಕನ್ನಡ ಕಲಿತಿದ್ದಾನೆ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಯಾರಾದರೂ ಕನ್ನಡ ಕಲಿತಿದ್ದಾರಾ?’ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಚಂಪಾ ಆಡಿದ ಮಾತುಗಳಿಗೆ ಕುಮಾರಸ್ವಾಮಿ ಶನಿವಾರ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದರು. ‘ಚಂಪಾ ಅವರ ಮಕ್ಕಳು, ಮೊಮ್ಮಕ್ಕಳು ಕನ್ನಡ ಶಾಲೆಯಲ್ಲಿ ಓದಿದ್ದಾರಾ?’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಚಂಪಾ, ‘ನನ್ನ ಮಕ್ಕಳು ಏಳನೇ ತರಗತಿಯವರೆಗೆ ಕನ್ನಡ ಕಲಿತಿದ್ದರು. ನನಗೆ ಒಬ್ಬನೇ ಮೊಮ್ಮಗ ಇದ್ದಾನೆ. ಅವನೂ ಕನ್ನಡ ಶಾಲೆಯಲ್ಲಿ ಓದಿದವನು. ಮುಖ್ಯಮಂತ್ರಿ ಪ್ರಶ್ನೆ ಮಾಡಿರುವುದಕ್ಕೆ ನನಗೆ ಬೇಸರವಿಲ್ಲ. ನನ್ನ ಬಳಿಯೇ ನೇರವಾಗಿ ಕೇಳಬಹುದಿತ್ತು. ನಿಮ್ಮ ಬಳಿ ಪ್ರಶ್ನೆ ಕೇಳಿದ್ದಾರೆ. ನಿಮ್ಮ ಮೂಲಕವೇ ಉತ್ತರ ನೀಡುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಹೇಳಿದರು.

‘ಕನ್ನಡದ ಬಗ್ಗೆ ನೀವು ಬಹಳ ಕಳಕಳಿ ವ್ಯಕ್ತಪಡಿಸಿದ್ದೀರಿ. ಒಂದು ಜಾತ್ಯತೀತ ಪಕ್ಷದ ನಾಯಕ ನೀವು. ನಿಮ್ಮ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂಬುದನ್ನು ಹಕ್ಕಿನಿಂದಲೇ ಕೇಳುತ್ತೇನೆ’ ಎಂದರು.

‘ನಾನು ಬಹಳ ಮಂದಿ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ರಾಜಕಾರಣಿಗಳು ಬಹಳ ಗಂಭೀರವಾಗಿ ಇರಬೇಕು. ಮಾತನಾಡುವಾಗ ತಾಳ್ಮೆ ಕಳೆದುಕೊಳ್ಳಬಾರದು. ದೇವೇಗೌಡರು ತಾಳ್ಮೆಯ ಮನುಷ್ಯ. ಆದರೆ, ಅವರ ಮಗ ಏಕೋ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಅವರು ಸಂಯಮದಿಂದ ಇರಬೇಕು ಎಂದು ಅವರ ಗೆಳೆಯನಾಗಿ ನಾನು ಬಯಸುತ್ತೇನೆ. ಸಮ್ಮೇಳನದಲ್ಲಿ ಕೊಟ್ಟ ಮಾತನ್ನು ಅವರು ನಡೆಸಿಕೊಟ್ಟರೆ ಸಾಕು’ ಎಂದು ಚಂಪಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು