ಚುನಾವಣಾ ತಾಲೀಮಿನ ಕಣವಾದ ಸಮ್ಮೇಳನ!

7
ಪರಿಷತ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಂದ ಭರ್ಜರಿ ಪ್ರಚಾರ

ಚುನಾವಣಾ ತಾಲೀಮಿನ ಕಣವಾದ ಸಮ್ಮೇಳನ!

Published:
Updated:

ಧಾರವಾಡ: ಕನ್ನಡ ಸಾಹಿತ್ಯ, ನಾಡು–ನುಡಿಗೆ ಸಂಬಂಧಿಸಿದ ತವಕ ತಲ್ಲಣಗಳ ಕುರಿತು ಚರ್ಚಿಸುವ ಉದ್ದೇಶದಿಂದ ಆಯೋಜನೆಯಾಗಿರುವ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರಶಃ ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿಯ ಚುನಾವಣಾ ತಾಲೀಮಿನ ಕಣವಾಗಿ ಮಾರ್ಪಟ್ಟಿದೆ. ಪರಿಷತ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಹಲವರು ಎರಡು ದಿನಗಳಿಂದ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಸಾಹಿತ್ಯ ಪರಿಷತ್‌ನ ಹಾಲಿ ಅಧ್ಯಕ್ಷ ಮನು ಬಳಿಗಾರ ಅವರ ಅವಧಿ ಮಾರ್ಚ್‌ 3ಕ್ಕೆ ಕೊನೆಗೊಳ್ಳಲಿದೆ. ಅಧ್ಯಕ್ಷರ ಅಧಿಕಾರದ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಿ ಪರಿಷತ್‌ ಉಪ ನಿಯಮಗಳಿಗೆ ತಿದ್ದುಪಡಿ ತಂದಿರುವ ವಿಚಾರ ರಾಜ್ಯ ಮೇಲ್ಮನವಿ ನ್ಯಾಯಮಂಡಳಿ ಮುಂದಿದೆ. ಈ ನಡುವೆಯೇ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲವರು, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲೇ ಪ್ರಚಾರ ಆರಂಭಿಸಿದ್ದಾರೆ.

ದೂರದರ್ಶನದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ ಜೋಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್‌, ಸಾಹಿತ್ಯ ಪರಿಷತ್ತಿನ ಹಾಲಿ ಕಾರ್ಯಕಾರಿ ಸಮಿತಿಯ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಕೊಪ್ಪಳ ಜಿಲ್ಲೆಯ ಸಂಗಮೇಶ ಬಾದವಾಡಗಿ (ಹಿಂದಿನ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು), ಬೆಂಗಳೂರಿನ ಸಿ.ಕೆ.ರಾಮೇಗೌಡ, ಕುಷ್ಟಗಿಯ ಶೇಖರಗೌಡ ಮಾಲಿಪಾಟೀಲ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ.

ತರಹೇವಾರಿ ಪ್ರಚಾರ: ಮಹೇಶ ಜೋಶಿ ಎರಡು ದಿನಗಳಿಂದ ಸಮ್ಮೇಳನದ ಅಂಗಳದಲ್ಲೇ ಬೀಡು ಬಿಟ್ಟಿದ್ದಾರೆ. ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಬಹಿರಂಗವಾಗಿಯೇ ಕರಪತ್ರ ಹಂಚುತ್ತಿದ್ದಾರೆ. ಪರಿಷತ್‌ನ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಸಂಪರ್ಕಿಸಿ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಕಂಡವರಿಗೆಲ್ಲಾ ಕೈಮುಗಿದು ಪರಿಷತ್‌ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಸಿ.ಕೆ.ರಾಮಮೂರ್ತಿ ಕೂಡ ಬೃಹತ್‌ ಸಂಖ್ಯೆಯ ಕರಪತ್ರಗಳನ್ನು ಹಂಚಿದ್ದಾರೆ. ಸಿ.ಸೋಮಶೇಖರ್‌ ಸಮ್ಮೇಳನಕ್ಕೆ ಭೇಟಿನೀಡಿ ಪ್ರಮುಖ ಸಾಹಿತಿಗಳು, ಪರಿಷತ್‌ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ವ್ಯಕ್ತಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಉಳಿದ ಆಕಾಂಕ್ಷಿಗಳ ಪರವಾಗಿಯೂ ಮುಗುಮ್ಮಾಗಿ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ.

ಪ್ರಮುಖ ಆಕಾಂಕ್ಷಿಗಳು ಒಂದೂ ಗೋಷ್ಠಿಗೂ ತಪ್ಪಿಸದಂತೆ ಹಾಜರಿ ಹಾಕುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆಯೂ ಬೆಂಬಲ ಯಾಚನೆ ನಡೆದಿದೆ. ಭೋಜನಾಲಯದ ಬಳಿಯೂ ಕರಪತ್ರ ಹಂಚಿಕೆ ಮಾಡಿಸುತ್ತಿದ್ದಾರೆ. ಕರಪತ್ರ ಸಾಗಣೆ, ಹಂಚಿಕೆಗಾಗಿಯೇ ಕೆಲವರು ಬೆಂಬಲಿಗರನ್ನು ಕರೆತಂದಿದ್ದಾರೆ.

‘ಪರಿಷತ್‌ನ ಸದಸ್ಯರೊಬ್ಬರಿಗೆ ಅಂಚೆ ಮೂಲಕ ಒಮ್ಮೆ ಕರಪತ್ರ ತಲುಪಿಸಲು ₹4 ವೆಚ್ಚವಾಗುತ್ತದೆ. ಲಕ್ಷಾಂತರ ಮಂದಿಗೆ ಕರಪತ್ರ ತಲುಪಿಸಲು ದೊಡ್ಡ ಪ್ರಮಾಣದ ಹಣ ಬೇಕಾಗುತ್ತದೆ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಕೆಲವು ಆಕಾಂಕ್ಷಿಗಳು ಸಮ್ಮೇಳನದಲ್ಲೇ ಪ್ರಚಾರ ಆರಂಭಿಸಿದ್ದಾರೆ. ಅಂಚೆ ವೆಚ್ಚ ಇಲ್ಲದೇ ಕರಪತ್ರ ಹಂಚಿ ಮತದಾರರನ್ನು ತಲುಪುವ ತಂತ್ರ ಮಾಡಿಕೊಂಡಂತೆ ಕಾಣುತ್ತಿದೆ’ ಎಂದು ಸಾಹಿತ್ಯ ಪರಿಷತ್‌ನ ಕೇಂದ್ರ ಸಮಿತಿಯ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸದಸ್ಯತ್ವ ನೋಂದಣಿ ಹೆಚ್ಚಳ: ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಸಾಹಿತ್ಯ ಪರಿಷತ್‌ ಸದಸ್ಯತ್ವ ನೋಂದಣಿಯೂ ಹೆಚ್ಚಿದೆ. ಕೆಲವು ಆಕಾಂಕ್ಷಿಗಳು ತಮ್ಮ ಪರಿಚಯಸ್ಥರ ಮೂಲಕ ಸದಸ್ಯತ್ವ ನೋಂದಣಿ ಮಾಡಿಸುತ್ತಿದ್ದಾರೆ. ಸಮ್ಮೇಳನದಲ್ಲಿ ನೋಂದಣಿಗಾಗಿಯೇ ಪ್ರತ್ಯೇಕ ಕೇಂದ್ರ ತೆರೆಯಲಾಗಿದೆ. ಹೊಸ ನೋಂದಣಿಗಳು ಸೇರಿದಂತೆ ಪರಿಷತ್‌ನ ಒಟ್ಟು ಸದಸ್ಯರ ಸಂಖ್ಯೆ 4 ಲಕ್ಷ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದು ವರ್ಷದ ಬಳಿಕ ಚುನಾವಣೆ

ಈಗ ಜಾರಿಯಲ್ಲಿರುವ ಉಪ ನಿಯಮಗಳ ಪ್ರಕಾರ 2019ರ ಮಾರ್ಚ್‌ 3ಕ್ಕೆ ಮನು ಬಳಿಗಾರ ಅವಧಿ ಅಂತ್ಯಗೊಳ್ಳಲಿದೆ. ಆದರೆ, 6 ತಿಂಗಳು ಅವಧಿ ವಿಸ್ತರಣೆಗೆ ಅವಕಾಶವಿದೆ. ಸಾಹಿತ್ಯ ಪರಿಷತ್‌ ಅಧ್ಯಕ್ಷರ ಅವಧಿಯನ್ನು ಐದು ವರ್ಷ ಅವಧಿಗೆ ವಿಸ್ತರಿಸುವ ಪ್ರಯತ್ನಕ್ಕೆ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಹಿನ್ನಡೆಯಾದರೆ ಆರು ತಿಂಗಳ ವಿಸ್ತರಣೆಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

‘ಅವಧಿ ವಿಸ್ತರಣೆ ಆದರೆ, ಆಗ ಸೆಪ್ಟೆಂಬರ್‌ 3ಕ್ಕೆ ಅವರ ಅಧಿಕಾರದ ಅವಧಿ ಕೊನೆಗೊಳ್ಳುತ್ತದೆ. ಆ ಬಳಿಕ ಮತದಾರರ ಪಟ್ಟಿ ಸಿದ್ಧಪಡಿಸಿ ಚುನಾವಣೆ ನಡೆಸಲು ಮತ್ತೆ ಆರು ತಿಂಗಳು ಬೇಕಾಗುತ್ತದೆ. ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮುಗಿಯಲು ಒಂದು ವರ್ಷ ಬೇಕಾಗಬಹುದು’ ಎನ್ನುತ್ತಾರೆ ಪರಿಷತ್‌ನ ಪದಾಧಿಕಾರಿಯೊಬ್ಬರು.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !