ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಶ್ರೀನಿವಾಸಗೌಡ ತಾಕೀತು

7
ಅಭಿವೃದ್ಧಿ ಕಾಮಗಾರಿಗೆ ಚಾಲನೆ,

ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಶ್ರೀನಿವಾಸಗೌಡ ತಾಕೀತು

Published:
Updated:
Prajavani

ಕೋಲಾರ: ‘ತೀವ್ರ ಬರಗಾಲ ಎದುರಾಗಿದ್ದು ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿನ ವಿಚಾರದಲ್ಲಿ ಮುಖಂಡರು ರಾಜಕೀಯ ಮಾಡಬಾರದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಾಕೀತು ಮಾಡಿದರು.

ತಾಲ್ಲೂಕಿನ ಮಲಿಯಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ಮಿಸಿರುವ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ಹಾಲು ಕರೆಯುವ ಯಂತ್ರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

‘ತಾಲ್ಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಸಮಸ್ಯಾತ್ಮಕ ಗ್ರಾಮಗಳಿಗೆ ಕೂಡಲೇ ಟ್ಯಾಂಕರ್‌ ಮೂಲಕ ಸರಬರಾಜು ಮಾಡಲು ಎಂಜನಿಯರ್‌ಗಳಿಗೆ ಸೂಚನೆ ನೀಡಲಾಗಿದೆ. ಗ್ರಾಮಸ್ಥರು ಸಮಸ್ಯೆಯನ್ನು ಅರಿತು ನೀರನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯರಗೋಳ್ ಯೋಜನೆ ಅನುಷ್ಟಾನಗೊಳಿಸಲಾಯಿತು. ಆನಂತರ ಅಧಿಕಾರಕ್ಕೆ ಬಂದ ಪುಣ್ಯತ್ಮ ಪೈಪ್‌ಲೈನ್ ಹಾಕಿಸಿ ದುಡ್ಡು ಮಾಡಿಕೊಂಡ. ಆದರೆ ಡ್ಯಾಂ ಕಟ್ಟಿಸುವಲ್ಲಿ ವಿಫಲರಾಗಿದ್ದು, ಆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತೆ ನಾನೇ ಅಧಿಕಾರಕ್ಕೆ ಬರಬೇಕಾಯಿತು’ ಎಂದು ತಿಳಿಸಿದರು.

‘ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಕೊಡುಗೆಯಿಂದ ಅವಿಭಜಿತ ಕೋಲಾರ ಜಿಲ್ಲೆಯ ಜನ ಬರಗಾಲದಲ್ಲೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಹೈನೋದ್ಯಮ ಸ್ಥಾಪನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲು ಚಿಂತಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಿದರೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ. ಬರಗಾಲದಲ್ಲೂ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ‘ಹಿಂದೆ ಅಧಿಕಾರದಲ್ಲಿದ್ದವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿಯೂ ಕುಂಠಿತಗೊಂಡಿದೆ’ ಎಂದು ದೂರಿದರು.

‘ರೈತರ, ಬಡವರ ಸಮಸ್ಯೆಗಳಿಗೆ ಸ್ಪಂದಿಸುವಂತಹ ಶ್ರೀನಿವಾಸಗೌಡರನ್ನು ಗೆಲ್ಲಿಸಿಕೊಂಡಿದ್ದೇವೆ. ಗ್ರಾಮಗಳಲ್ಲಿ ಏನೇ ಸಮಸ್ಯೆಗಳು ಇದ್ದರೂ ಅವರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿಕೊಂಡು ಕುಳಿತರೆ ಏನು ಪ್ರಯೋಜನೆಯಾಗುವುದಿಲ್ಲ’ ಎಂದು ಹೇಳಿದರು.

‘ತಾಲ್ಲೂಕಿನ ಕಡಗಟ್ಟೂರು ಸಹಕಾರ ಬ್ಯಾಂಕ್ ವತಿಯಿಂದ ರೈತರಿಗೆ, ಸ್ತ್ರೀಶಕ್ತಿ ಸಂಘಗಳಿಗೆ ₨ 3 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಲಾಗಿದ್ದು, ಶೇ.100ರಷ್ಟು ಮರುಪಾವತಿಯಾಗುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದ ಹಾಗೂ ಈಗಿನ ಸಮ್ಮಿಶ್ರ ಸರ್ಕಾದ ಅವಧಿಯಲ್ಲಿ ಮಾಡಿದ ಸಾಲ ಮನ್ನಾ ಸೌಕರ್ಯ ಸಾಕಷ್ಟು ರೈತರಿಗೆ ದೊರೆತಿದೆ’ ಎಂದರು.

ತಾಲ್ಲೂಕಿನ ಮಚ್ಚಂಡಹಳ್ಳಿಯಲ್ಲಿ ಕೋಚಿಮುಲ್‌ನಿಂದ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ಹಾಗೂ ಚನ್ನಸಂದ್ರ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಇ.ಗೋಪಾಲಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಶ್ರೀನಿವಾಸಗೌಡ, ಹಾಲು ಉತ್ಪಾಕದರ ಸಹಕಾರ ಸಂಘದ ಅಧ್ಯಕ್ಷ ಸಿ.ರಾಜಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !