ಶುಕ್ರವಾರ, ಮೇ 29, 2020
27 °C
ಜಾತಿಗಳ ಅಸ್ಮಿತೆ ರಾಜಕಾರಣದಲ್ಲಿ ಮಿಲ್ಲರ್‌ ಹಾಗೂ ನಾಲ್ವಡಿಯವರನ್ನು ಮರೆಯುವಂತಿಲ್ಲ

ಮೀಸಲಾತಿಗೆ ನೂರು ವರುಷ

ಡಾ.ಮುಜಾಪ್ಫರ್ ಅಸ್ಸಾದಿ Updated:

ಅಕ್ಷರ ಗಾತ್ರ : | |

ಮೀಸಲಾತಿ ಕುರಿತಂತೆ ಮಿಲ್ಲರ್ ಸಮಿತಿ ನೀಡಿದ ಶಿಫಾರಸುಗಳಿಗೆ ಇದು ನೂರನೇ ವರ್ಷ. ಅಂದಿನ ಮೈಸೂರು ಸಂಸ್ಥಾನವು ಹಿಂದುಳಿದ ವರ್ಗಗಳವರ ಒತ್ತಡದ ಮೇರೆಗೆ 1918ರಲ್ಲಿ ನ್ಯಾಯಮೂರ್ತಿ ಮಿಲ್ಲರ್ ನೇತೃತ್ವದಲ್ಲಿ ಆರು ಜನರ ಸಮಿತಿಯನ್ನು ನೇಮಿಸಿತ್ತು. ಸರ್ಕಾರಿ ರಂಗದಲ್ಲಿ ಹಿಂದುಳಿದ ವರ್ಗಗಳ ಸಮರ್ಪಕ ಪ್ರಾತಿನಿಧ್ಯಕ್ಕೆ ಶಿಫಾರಸು, ಅದರ ಭಾಗವಾಗಿ ಮೀಸಲಾತಿ ನಿಗದಿಮಾಡುವುದು ಈ ಸಮಿತಿಗೆ ನೀಡಿದ ಷರತ್ತುಗಳು. ಸಮಿತಿಯು 1919ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ಸಮಿತಿಯ ಶಿಫಾರಸುಗಳು ಕರ್ನಾಟಕದ ಸಮಾಜೋ-ರಾಜಕಾರಣವನ್ನು ಐತಿಹಾಸಿಕವಾಗಿ ಬದಲಾಯಿಸಿತು- ಜಾತಿಯ ಐಡೆಂಟಿಟಿಗಳು, ಸಾಂಸ್ಕೃತಿಕ ರಾಜಕಾರಣ, ಆಧಿಕಾರದ ರಾಜಕಾರಣ, ಗುರುತಿಸುವಿಕೆಯ ರಾಜಕಾರಣ, ವೈವಿಧ್ಯಮಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇತ್ಯಾದಿ ಬದಲಾದದ್ದು ದಿಟ. ಇದರಲ್ಲಿ ಬಹುಮುಖ್ಯವೆನಿಸುವುದು ಐಡೆಂಟಿಟಿ(ಅಸ್ಮಿತೆ) ಹಾಗೂ ಗುರುತಿಸುವಿಕೆಯ ರಾಜಕಾರಣಗಳು.

ಅಂದಿನ ವಸಾಹತು ಸಂದರ್ಭದಲ್ಲಿ ಮೀಸಲಾತಿ ಒಂದು ದಿಟ್ಟ ಮತ್ತು ಕ್ರಾಂತಿಕಾರಿ ಹೆಜ್ಜೆ. ಇಲ್ಲಿ ನಾಲ್ವಡಿಯವರ ದೂರದೃಷ್ಟಿ ಮುಖ್ಯವೆನಿಸುತ್ತದೆ. ಮೀಸಲಾತಿಯನ್ನು ವಿರೋಧಿಸಿದ ದಿವಾನ್ ವಿಶ್ವೇಶ್ವರಯ್ಯನವರು ಈ ವಿಷಯದಲ್ಲಿ ಮೇಲ್ಜಾತಿಯ ಪ್ರತಿನಿಧಿಯಾಗಿ, ಪ್ರತಿಗಾಮಿಯಾಗಿ ಕಂಡುಬರುತ್ತಾರೆಯೇ ಹೊರತು ಪ್ರಗತಿಪರ, ಕರ್ನಾಟಕದ ಆಭಿವೃದ್ಧಿಯ ಶಿಲ್ಪಿಯಾಗಿಯಲ್ಲ.

ಅಂದಿನ ಮೈಸೂರು ಪ್ರಾಂತ್ಯದಲ್ಲಿ ಮೀಸಲಾತಿಗೆ ಮತ್ತು ಹಿಂದುಳಿದ ವರ್ಗಗಳ ಹೋರಾಟಕ್ಕೆ ಪುಷ್ಟಿ ಕೊಟ್ಟದ್ದು ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಬ್ರಾಹ್ಮಣೇತರ ಚಳವಳಿ. ಮದ್ರಾಸ್‍ನಲ್ಲಿ ಅದು ದ್ರಾವಿಡ ಚಳವಳಿಗೆ ಕಾರಣವಾದರೆ ಮೈಸೂರು ಪ್ರಾಂತ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಮೈಸೂರು ಪ್ರಾಂತ್ಯದಲ್ಲಿ ಇದರ ನಾಯಕತ್ವ ವಹಿಸಿದ್ದು ಪ್ರಜಾಮಿತ್ರ ಮಂಡಳಿ.

ಇಲ್ಲಿ ಎರಡು ವಾದಗಳನ್ನು ಮುಂದಿಡಬಹುದು. ಮೊದಲನೆಯದಾಗಿ, ಇದನ್ನು ಜಾತಿ ವಿರೋಧಿ ಚಳವಳಿ ಎನ್ನಬಹುದು. ವಿಚಿತ್ರವೆಂದರೆ ಲೆಸ್ಲಿಮಿಲ್ಲರ್ ಸಮಿತಿಯ ಶಿಫಾರಸಿಗೂ  ಮೊದಲೇ ಜಾತಿಗಳನ್ನು ಸಾಮಾಜಿಕ ವರ್ಗಗಳಾಗಿ ಗುರುತಿಸಲಾಗಿತ್ತು. ಇದಕ್ಕೆ 1881 ಮತ್ತು ತದನಂತರದ ಜನಗಣತಿಗಳು ಸಾಕ್ಷಿ. ಪ್ರತೀ ಜನಗಣತಿಯಲ್ಲಿ ಜಾತಿಗಳ ಶಂಖ್ಯೆ ಹೆಚ್ಚಾಗುತ್ತಿತ್ತು ಇಲ್ಲವೇ ಹೊಸ ಹೊಸ ಜಾತಿಗಳು ಜನಗಣತಿ ಪಟ್ಟಿಯೊಳಗೆ ಸೇರುತ್ತಿದವು. ಈ ರಾಜಕಾರಣ 1931ರ ತನಕ ನಡೆಯಿತು. ಕೆಲವು ಸಲ ಜನಗಣತಿಯಲ್ಲಿ ಜಾತಿಗಳು ‘ಧರ್ಮ’ ಅಥವಾ ರಿಲಿಜನ್‍ಗಳಾಗಿ ಪರಿವರ್ತಿತವಾದದ್ದು ಇದೆ.

ಲಿಂಗಾಯತರು ಕೆಲವೊಮ್ಮೆ ಹಿಂದೂ ಧರ್ಮದ ಜಾತಿಗಳಾಗುವುದು, ಇನ್ನೂ ಕೆಲವೊಮ್ಮೆ ಪ್ರತ್ಯೇಕ ಧರ್ಮವಾಗಿದ್ದು ಇಲ್ಲಿ ಸ್ಪಷ್ಟ. ಮೈಸೂರಿನ ಜನಗಣತಿ ಇದರಿಂದ ವಿಭಿನ್ನವಾಗಿರಲಿಲ್ಲ. ಮಿಲ್ಲರ್ ಸಮಿತಿಯು ಪ್ರಾಂತ್ಯದಲ್ಲಿರುವ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಒಟ್ಟಾರೆ ಜಾತಿಗಳ ಜನ ಸಂಖ್ಯೆಯನ್ನು ಲೆಕ್ಕಹಾಕಿದ್ದು ಇದೆ. ಆದರೆ ಮೀಸಲಾಯಿತಿಯನ್ನು ಪ್ರತಿಪಾದಿಸುವಾಗ ಜಾತಿಯೇ ಮಾನದಂಡವಾಗಿರಲಿಲ್ಲ. ಬದಲಿಗೆ ಇಂಗ್ಲಿಷ್ ಭಾಷೆ, ಶಿಕ್ಷಣ– ಉದ್ಯೋಗದಲ್ಲಿ ಅಸಮರ್ಪಕ ಪ್ರಾತಿನಿಧ್ಯಗಳು ಮಾನದಂಡವಾದವು. ಇದು ಹೊಸ ರೂಪದ ಹುಡುಕಾಟ. ಆನಂತರ ಬಂದ ಆಯೋಗಗಳು ಇಂಗ್ಲೀಷ್ ಭಾಷೆಯ ಹೊರತಾಗಿ ಉಳಿದೆಲ್ಲಾ ಅಂಶಗಳನ್ನು ಮಾನದಂಡವಾಗಿ ಉಪಯೋಗಿಸಿದವು. ಮಿಲ್ಲರ್ ಈ ರೂಪದ ಮಾನದಂಡಗಳ ಉಗಮಕ್ಕೆ ಕಾರಣೀಭೂತರಾದರು.

ಜಾತಿಗಳ ನಡುವಿನ ಸಂಘರ್ಷ, ಜಾತಿ ವಿರೋಧಿ ಹೋರಾಟಗಳು ಅಂದಿನ ಸಂದರ್ಭದಲ್ಲಿ ಹೊಸತಾಗಿರಲಿಲ್ಲ. ಫ್ರೆಂಚ್‌ ಮಿಶನರಿ ಅಬ್ಬೇ ದುಬಾಯ್ 1816ರಲ್ಲಿ ಬರೆದ ‘ಹಿಂದೂ ಮ್ಯಾನರ್ಸ್, ಕಸ್ಟಮ್ಸ್ ಆಂಡ್ ಸೆರೆಮೊನಿಸ್’ ಎಂಬ ಗ್ರಂಥದಲ್ಲಿ ಮೈಸೂರು ಹಾಗೂ ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಪಂಚಮರ ನಡುವಿನ ಭಯಂಕರ ಜಗಳಗಳನ್ನು ದಾಖಲಿಸುತ್ತಾನೆ. ಜಾತಿ ವಿರೋಧಿ ಹೋರಾಟವನ್ನು ಮೈಸೂರಿನ ಪ್ರಾಂತ್ಯದಲ್ಲಿ 1830ರ ದಶಕದ ನಗರ ದಂಗೆಯಲ್ಲಿಯೇ ನೋಡಬಹುದು. ಈ ದಂಗೆಗೆ ಶರತ್ ವ್ಯವಸ್ಥೆ ಮೂಲ ಕಾರಣವಾದರೂ, ಅಧಿಕಾರದಲ್ಲಿ ಮೇಲ್ಜಾತಿಯವರ ಹಿಡಿತವೂ ಕಾರಣವಾಗಿತ್ತು. ಮಹಾರಾಷ್ಟ್ರದಲ್ಲಿ ಜ್ಯೋತಿಭಾ ಫುಲೆಯವರ ಜಾತಿ ವಿರೋಧಿ ಹೋರಾಟ ಕೂಡ ಅಷ್ಟೇ ಮುಖ್ಯವಾಗುತ್ತದೆ. ಅವರು ಸ್ಥಾಪಿಸಿದ ‘ಸತ್ಯ ಶೋಧಕ ಸಮಾಜ್’ ಬ್ರಾಹ್ಮಣೇತರ ಚಳವಳಿಗೆ ಸಾಕ್ಷಿಯಾಗುತ್ತದೆ. ಇದು ಐಡೆಂಟಿಟಿ ರಾಜಕಾರಣದ ಒಂದು ಮಜಲು.

ಅಂದಿನ ವಸಾಹತು ಭಾರತದ ಸಂದರ್ಭದಲ್ಲಿ ಮೈಸೂರು ಸಂಸ್ಥಾನವೇ ಎಲ್ಲರಿಗಿಂತ ಮೊದಲು ಮೀಸಲಾತಿಯನ್ನು ಅಳವಡಿಸಿತ್ತು ಎಂಬ ವಾದ ಇದೆ. ಮೈಸೂರಿನಲ್ಲಿ ಮೀಸಲಾತಿನ್ನು ಜಾರಿಗೊಳಿಸಿದ ವರ್ಷವೇ ಹೈದರಾಬಾದ್ ಸಂಸ್ಥಾನವೂ ಮೂಲ್ಕಿ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಸ್ಥಳೀಯರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ಮೂಲ್ಕಿ ವ್ಯವಸ್ಥೆ ನಿಗದಿಪಡಿಸಿತ್ತು. ಕೇರಳದ ಟ್ರಿವಾಂಕೂರು ಸಂಸ್ಥಾನದಲ್ಲಿ 1891ರಲ್ಲೀಯೇ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕುರಿತಂತೆ ಬೇಡಿಕೆಗಳು ಬಂದಿದ್ದವು. ಪ್ರಮುಖವಾಗಿ ಸಂಸ್ಥಾನದಲ್ಲಿ ತಮಿಳು ಬ್ರಾಹ್ಮಣರ ಪ್ರಾಬಲ್ಯದ ವಿರುದ್ಧ ಚಳವಳಿಗಳು ನಡೆದವು. ಮಿಲ್ಲರ್ ಸಮಿತಿಯ ಶಿಫಾರಸಿನ ಎರಡು ವರ್ಷ ತರುವಾಯ ಮದ್ರಾಸ್ ಪ್ರೆಸಿಡೆನ್ಸಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿತು. ಇವುಗಳ ನಡುವೆ ಬಹಳ ಮಹತ್ವವೆನಿಸುವುದು ಕೊಲ್ಹಾಪುರ ಸಂಸ್ಥಾನದ ಸಾಹು ಮಹಾರಾಜರ ಮೀಸಲಾತಿ ನೀತಿ.

1902ರಲ್ಲಿ ಜಾರಿಗೆ ತಂದ ಮೀಸಲಾತಿ ನೀತಿಯಲ್ಲಿ ಶೇ 50ರಷ್ಟು ಉದ್ಯೋಗಗಳನ್ನ ಹಿಂದುಳಿದ ವರ್ಗಗಳಿಗೆ ಮೀಸಲಾಗಿಡಲಾಗಿತ್ತು. ಒಂದಂತೂ ಸತ್ಯ, ಉತ್ತರ ಭಾರತಕ್ಕಿಂತಲೂ ಮೊದಲೇ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಕಟದಲ್ಲಿ ಸಾಮಾಜಿಕ ಮತ್ತು ರಾಜಕೀಯ ನ್ಯಾಯ, ವೈರುಧ್ಯಗಳ ನಡುವೆಯೂ ವಾಸ್ತವ ಸಂಗತಿಯಾಗಿತ್ತು. ಮಿಲ್ಲರ್ ಆಯೋಗದ ಒಂದು ಪರಿಣಾಮವೆಂದರೆ, ಸಾಕಷ್ಟು ಹಿಂದಳಿದ ವರ್ಗಗಳು ಸ್ವಾತಂತ್ಯಪೂರ್ವದಲ್ಲಿಯೇ ವ್ಯವಸ್ಥೆಯ ಭಾಗವಾದವು. ಆದ ಕಾರಣ ಮಂಡಲ್ ಆಯೋಗದ ಶಿಫಾರಸುಗಳಿಗೆ ಉತ್ತರ ಭಾರತ ಹಿಂಸೆ ರೂಪದಲ್ಲಿ ಉತ್ತರಿಸಿದರೆ, ಕರ್ನಾಟಕ ಶಾಂತವಾಗಿತ್ತು. ಇದರಲ್ಲಿಯೇ ಐಡೆಂಟಿಟಿ ಮತ್ತು ಗುರುತಿಸುವಿಕೆ ರಾಜಕಾರಣದ ಗಟ್ಟಿತನ ಅಡಕವಾಗಿದೆ. ಯಾಕೆಂದರೆ ಸರ್ಕಾರಗಳು ಎಲ್ಲಾ ಜಾತಿಗಳನ್ನೂ ಶೇಕಡಾವಾರು ಮೀಸಲಾತಿ ಮೂಲಕ ಗುರುತಿಸುತ್ತಾ ಹೋಯಿತು. ಅಷ್ಟೇ ತೀವ್ರವಾಗಿ ಜಾತಿಗಳು ಐಡೆಂಟಿಟಿ ರಾಜಕಾರಣವನ್ನು ಮಾಡಿದವು. ಇವುಗಳು ಬೇರೆ ಸಂದರ್ಭದಲ್ಲಿ ವ್ಯಕ್ತವಾಗುತ್ತಾ ಹೋದವು. ಜಾತಿಗಳಿಗೆ ನೀಡುವ ಶೇಕಡಾವಾರು ಮೀಸಲಾತಿ ಬೇಡಿಕೆಯಲ್ಲಿ, ಜಾತಿಗಳು ಹಿಂದುಳಿದ ಪಟ್ಟಿಯಲ್ಲಿರಲು ಸದಾ ಇರಲು ಬಯಸುವ ಬೇಡಿಕೆಯಲ್ಲಿ, ಮೀಸಲಾತಿ ಪಟ್ಟಿಯಿಂದ ಹೊರಗಿಟ್ಟಾಗ ಪ್ರತಿಭಟಿಸುವುದರಲ್ಲಿ, ಹೊಸ ಜಾತಿಯ ಪಟ್ಟಿಗೆ ಸೇರಲು ಬಯಸುವ ಸಂದರ್ಭದಲ್ಲಿ... ಮಿಲ್ಲರ್ ಈ ರಾಜಾರಣಕ್ಕೆ ನಾಂದಿ ಹಾಡಿದ್ದರು. ವಾಸ್ತವವೆಂದರೆ ಈ ಐಡೆಂಟಿಟಿ ರಾಜಕಾರಣ ಯಾವತ್ತೂ ಹಿಂಸೆಯ ಭಾಗವಾಲಿಲ್ಲ.

ಇಲ್ಲಿ ಒಂದು ಚಿಕ್ಕ ವಾದವನ್ನು ಮುಂದಿಡಬಹುದು. ಮಿಲ್ಲರ್ ಸಮಿತಿಯ ತೀರ್ಮಾನಗಳು ಅವಸರದ ತೀರ್ಮಾನಗಳೇ? ಅದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೆಗೆದುಕೊಂಡ ಸಮಯ ಬರೇ ಏಳು ತಿಂಗಳು. ನಡೆಸಿದ ಸಭೆಗಳು ಬರೇ ಐದು. ಆಸಕ್ತಿಯ ವಿಷಯವೆಂದರೆ, ಅದಕ್ಕೆ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಜಾತಿಗಳ ಒಟ್ಟು ಜನಸಂಖ್ಯೆಯನ್ನು ಲೆಕ್ಕ ಹಾಕಲು ಸಾಧ್ಯವಾಯಿತು, ಆದರೆ ವಿವಿಧ ಜಾತಿಗಳನ್ನು ಹೆಸರಿಂದ ಗುರುತಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಜನಗಣತಿ ಈ ಮೊದಲೇ ಜಾತಿಗಳನ್ನು ಜನಸಂಖ್ಯಾನುಸಾರವಾಗಿ ಗುರುತಿಸಿತ್ತು. ಮಿಲ್ಲರ್ ಸಮಿತಿ ಎಲ್ಲಾ ಜಾತಿಗಳನ್ನು ಎರಡು ಗುಂಪುಗಳಾಗಿ ಗುರುತಿಸಿತ್ತು- ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಜಾತಿಗಳು. ಅಲ್ಲದೇ, ಸರ್ಕಾರಿ ಯಂತ್ರದಲ್ಲಿ ಬ್ರಾಹಣರ ಪ್ರಾಬಲ್ಯಕ್ಕೆ ಕಾರಣಗಳೇನು? ಅದರಿಂದಾಗುವ ಪರಿಣಾಮಗಳೇನು? ಎಂಬುದನ್ನು ಮಿಲ್ಲರ್ ಸಮಿತಿ ಚರ್ಚಿಸಲಿಲ್ಲ.

ಮಿಲ್ಲರ್ ಸಮಿತಿ ಒಂದೆಡೆ ಬ್ರಾಹ್ಮಣರು, ಆಂಗ್ಲೋ ಇಂಡಿಯನ್ಸ್ , ಮತ್ತು ಐರೋಪ್ಯರನ್ನು ಮೀಸಲಾಯಿತಿಯಿಂದ ಹೊರಗಿಟ್ಟರೆ, ಉಳಿದವರನ್ನು ಅದರಲ್ಲೂ, ಪಂಚಮರು, ಮುಸ್ಲಿಮರು, ಮೊದಲಿಯಾರ್, ಆಂಗ್ಲೋ ಕ್ರಿಶ್ಚಿಯನ್ನರು ಇತ್ಯಾದಿಯವರನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಿತ್ತು. ಇದು ಮುಂದೆ ಮುಸ್ಲಿಂ ಧರ್ಮದೊಳಗಿನ ವಿವಿಧ ಜಾತಿಗಳ ಹುಡುಕಾಟಕ್ಕೆ ಕಾರಣವಾಯಿತು. ಹಾವನೂರು ಆಯೋಗ ಇದನ್ನು ಪುಷ್ಟೀಕರಿಸಿತ್ತು, ದೇವೇಗೌಡರ ಕಾಲದಲ್ಲಿ ಧರ್ಮಗಳು ಪ್ರವರ್ಗದೊಳಗಿನ ಭಾಗಗಳಾದವು.

ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯೊಂದಿಗೆ ಅದರ ಇತರ ಶಿಫಾರಸುಗಳು ಕರ್ನಾಟಕದಲ್ಲಿ ಹೊಸ ರೂಪದ ಐಡೆಂಟಿಟಿ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದು ದಿಟ. ಪಂಚಮರಿಗೆ ಶಾಲೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಸ್ಥಾಪನೆ, ಪಾಲಿಟೆಕ್ನಿಕ್ ಮಾದರಿಯ ಕಾಲೇಜ್‍ಗಳು, ವಿದ್ಯಾರ್ಥಿ ವೇತನ, ಮುಸ್ಲಿಮರಿಗೆ ಆಂಗ್ಲೋ- ಹಿಂದುಸ್ಥಾನಿ ಶಾಲೆ, ಎಲ್ಲಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿ ನಿಲಯಗಳು ಇತ್ಯಾದಿ. ಇವುಗಳಿಂದಾಗಿ ಐಡೆಂಟಿಟಿ ರಾಜಕಾರಣವು ವಿವಿಧ ರೂಪಗಳನ್ನು ಪಡೆಯಿತು- ರಾಜಕೀಯ ಸಂಘಟನೆ, ದಲಿತ ಹೋರಾಟ, ಸಾಹಿತ್ಯ ಚಳವಳಿ... ಇತ್ಯಾದಿ.

ಮೀಸಲಾತಿ ಕುರಿತು ಬಹಳಷ್ಟು ಚರ್ಚೆಗಳು ನಡೆದಿವೆ. ಅದು ಹಿಂದಳಿದ ವರ್ಗದವರ ಹಕ್ಕೇ? ಅದು ವಿಶಿಷ್ಟ ನ್ಯಾಯದ ಪರಿಕಲ್ಪನೆಯೇ? ಮೀಸಲಾತಿ ಮುಂದುವರಿಯಬೇಕೇ? ಇತ್ಯಾದಿ. ಅದೇನೆ ಇದ್ದರೂ ಕರ್ನಾಟಕದಲ್ಲಿ ಜಾತಿಗಳ ಐಡೆಂಟಿಟಿ ಮತ್ತು ಗುರುತಿಸುವಿಕೆ ರಾಜಕಾರಣದಲ್ಲಿ ಲೆಸ್ಲಿ ಮಿಲ್ಲರ್‌ನನ್ನು ಹಾಗೂ ನಾಲ್ವಡಿಯವರನ್ನು ಮರೆಯುವಂತಿಲ್ಲ. ಅವರಿಂದ ಆರಂಭಗೊಂಡ ಪ್ರಕ್ರಿಯೆ ಶತಮಾನದ ನಂತರವೂ ನಿರಂತರ ಪ್ರಕ್ರಿಯೆಯಾಗಿ ಉಳಿದಿದೆ.


ಡಾ.ಮುಜಾಪ್ಫರ್ ಅಸ್ಸಾದಿ

ಲೇಖಕ: ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು