ಸಂವಿಧಾನವೇ ದೇಶದಲ್ಲಿ ಸುಧಾರಣೆಗಳಿಗೆ ಕಾರಣ

7
ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌

ಸಂವಿಧಾನವೇ ದೇಶದಲ್ಲಿ ಸುಧಾರಣೆಗಳಿಗೆ ಕಾರಣ

Published:
Updated:
Prajavani

ಮಂಗಳೂರು: ‘69 ವರ್ಷಗಳಲ್ಲಿ ದೇಶದಲ್ಲಿ ಆಗಿರುವ ಎಲ್ಲ ಸುಧಾರಣೆಗಳಿಗೂ ಸಂವಿಧಾನವೇ ಕಾರಣ. ಪಾಳೆಗಾರಿಕೆ ಪದ್ಧತಿಯನ್ನು ಕಿತ್ತುಹಾಕಿ, ಸಮಾನತೆ ತಂದ ಕೀರ್ತಿಯೂ ನಮ್ಮ ಸಂವಿಧಾನಕ್ಕೆ ಸಲ್ಲಬೇಕು’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಹೇಳಿದರು.

ಸಮುದಾಯ ಕರ್ನಾಟಕ, ಸೇಂಟ್‌ ಅಲೋಶಿಯಸ್‌ ಕಾಲೇಜು, ಸಹಯಾನ ಮತ್ತು ಸಂವಿಧಾನ ಓದು ಅಭಿಯಾನ ಸಮಿತಿಗಳ ಸಹಯೋಗದಲ್ಲಿ ಅಲೋಶಿಯಸ್‌ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಸಂವಿಧಾನ ಓದು ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಿಂದ ಏನೂ ಬದಲಾವಣೆ ಆಗಿಲ್ಲ ಎಂಬ ವಾದವನ್ನು ಒಪ್ಪಲಾಗದು. ಈ 69 ವರ್ಷಗಳಲ್ಲಿ ಜಾರಿಯಾದ ಸುಧಾರಣೆಗಳ ಹಿಂದಿನ ಶಕ್ತಿ ಸಂವಿಧಾನವೇ ಆಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶವು 600ಕ್ಕೂ ಹೆಚ್ಚು ರಾಜರು, ಪಾಳೆಗಾರರ ಕೈಯಲ್ಲಿ ಹಂಚಿಹೋಗಿತ್ತು. ಇಡೀ ದೇಶವನ್ನು ಒಗ್ಗೂಡಿಸಿದ್ದು ಸಂವಿಧಾನ ಎಂದರು.

‘ಹಿಂದೆ ನಮ್ಮ ರಾಷ್ಟ್ರದಲ್ಲಿ ಸಮಾನತೆ ಇರಲಿಲ್ಲ. ದೋಭಿಯ ಮಗ ದೋಭಿಯಾಗಿ, ರೈತನ ಮಗ ರೈತನಾಗಿ, ಪಾಳೆಗಾರನ ಮಗ ಪಾಳೆಗಾರನಾಗಿ ಮುಂದುವರಿಯಬೇಕಿತ್ತು. ಜಾತಿಯೇ ಉದ್ಯೋಗವನ್ನು ನಿರ್ಧರಿಸುತ್ತಿತ್ತು. ಒಂದೇ ಸ್ಮಶಾನದಲ್ಲಿ ಎಲ್ಲ ಜಾತಿಯ ಜನರ ಹೆಣ ಸುಡುವುದಕ್ಕೂ ಅವಕಾಶವಿರಲಿಲ್ಲ. ಚಹಾ ಮಾರುತ್ತಿದ್ದ ಹುಡುಗ ಪ್ರಧಾನಿಯಾಗುವುದಕ್ಕೆ, ನನ್ನಂತಹ ರೈತನ ಮಗ ನ್ಯಾಯಮೂರ್ತಿಯ ಹುದ್ದೆ ತಲುಪುವುದಕ್ಕೆ ಕಾರಣವಾದದ್ದು ನಮ್ಮ ಸಂವಿಧಾನ’ ಎಂದು ಪ್ರತಿಪಾದಿಸಿದರು.

ಕಾನೂನುಗಳ ತಾಯಿ: ದೇಶದಲ್ಲಿರುವ ಎಲ್ಲ ಕಾನೂನುಗಳ ತಾಯಿ ಸಂವಿಧಾನ. ಈ ತಾಯಿಯನ್ನು ರಕ್ಷಿಸಿದರೆ ಮಾತ್ರವೇ ದೇಶ ಸರಿದಾರಿಯಲ್ಲಿ ಇರಲು ಸಾಧ್ಯ. ಆದರೆ, ಸಂವಿಧಾನವನ್ನು ಏಕೆ ಓದಬೇಕು? ಅದನ್ನು ಏಕೆ ಅರ್ಥ ಮಾಡಿಕೊಳ್ಳಬೇಕು ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಸಂವಿಧಾನ ಎಂಬುದು ಕತೆ, ಕಾದಂಬರಿ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿದ ಮತ್ತು ಅದನ್ನು ರಕ್ಷಿಸುತ್ತಿರುವ ಕಾರ್ಯಕ್ರಮ ಎಂದು ನಾಗಮೋಹನ ದಾಸ್ ಹೇಳಿದರು.

‘ಜಗತ್ತಿನ 198 ರಾಷ್ಟ್ರಗಳ ಪೈಕಿ 190 ರಾಷ್ಟ್ರಗಳು ಸಂವಿಧಾನ ಹೊಂದಿವೆ. ಜನರು ಸಂವಿಧಾನಬದ್ಧ ಆಡಳಿತ ಬಯಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಸಂವಿಧಾನ ಏಕೆ ಬೇಕು ಎಂಬ ಪ್ರಶ್ನೆ ಕೇಳುವವರಿಗೆ ಉತ್ತರವೂ ಇಲ್ಲಿದೆ. ಸಂವಿಧಾನವನ್ನು ಅರ್ಥ ಮಾಡಿಸುವ ಕೆಲಸ ಹಿಂದಿನ ದಶಕಗಳಲ್ಲಿ ಆಗಿಲ್ಲ. ಅದರ ಪರಿಣಾಮವೇ ಈ ಪ್ರಶ್ನೆಗಳು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪ್ಲೀಡರ್‌ ಎ.ಉದಯಾನಂದ, ‘ಭಾರತದಲ್ಲಿ ಸಂವಿಧಾನವೇ ನಮಗೆ ಗೀತೆ, ಬೈಬಲ್‌, ಕುರ್‌ ಆನ್‌ ಎಲ್ಲವೂ ಆಗಬೇಕು. ಧರ್ಮ ವೈಯಕ್ತಿಕ ಆಚರಣೆಗೆ ಸೀಮಿತವಾಗಿರಬೇಕು. ಅದು ಪ್ರಚಾರದ ಸ್ವತ್ತಾಗಬಾರದು ಮತ್ತು ಘರ್ಷಣೆಯ ವಸ್ತುವೂ ಆಗಬಾರದು’ ಎಂದರು.

ಸಂವಿಧಾನ ಓದು ಅಭಿಯಾನದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ವಕೀಲ ಯಶವಂತ ಮರೋಳಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಬಲ್ಲಾಳ್, ಚಿಂತಕಿ ವಿಮಲಾ, ಬದ್ರಿಯಾ ಕಾಲೇಜು ಪ್ರಾಂಶುಪಾಲ ಇಸ್ಮಾಯಿಲ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !