ಅಜ್ಞಾತ ಸ್ಥಳಕ್ಕೆ ಕಲ್ಲಡ್ಕ ಪ್ರಭಾಕರ ಭಟ್‌: ಗುಪ್ತಚರ ಇಲಾಖೆ ಮಾಹಿತಿ

7
ಪೊಲೀಸರ ಸಲಹೆ ಮೇರೆಗೆ ಬೆಂಗಳೂರಿಗೆ

ಅಜ್ಞಾತ ಸ್ಥಳಕ್ಕೆ ಕಲ್ಲಡ್ಕ ಪ್ರಭಾಕರ ಭಟ್‌: ಗುಪ್ತಚರ ಇಲಾಖೆ ಮಾಹಿತಿ

Published:
Updated:
Prajavani

ಮಂಗಳೂರು: ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಪೊಲೀಸರು ನೀಡಿದ ಸಲಹೆಯಂತೆ ಆರ್‌ಎಸ್‌ಎಸ್‌ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ಪ್ರಭಾಕರ ಭಟ್‌ ಅವರನ್ನು ಕೊಲೆ ಮಾಡುವ ಸಂಬಂಧ ವಿದೇಶದಲ್ಲಿರುವ ಕೆಲವು ವ್ಯಕ್ತಿಗಳ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ದಕ್ಷಿಣ ಕನ್ನಡ ಪೊಲೀಸರೊಂದಿಗೆ ಹಂಚಿಕೊಂಡಿದೆ. ಆ ಬಳಿಕ ಭಟ್‌ ಅವರಿಗೆ ಭದ್ರತೆ ಹೆಚ್ಚಿಸಲಾಗಿತ್ತು. ಮರುದಿನವೇ ಅವರನ್ನು ಪೊಲೀಸ್ ಬೆಂಗಳೂರಿಗೆ ಕಳುಹಿಸಲಾಗಿದೆ.

ಪೊಲೀಸ್ ಭದ್ರತೆಯಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿ ಅಜ್ಞಾತ ಸ್ಥಳವೊಂದರಲ್ಲಿ ವಾಸ್ತವ್ಯ ಮಾಡಿದ್ದಾರೆ. ಅಲ್ಲಿಯೂ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ.

ಬೆಂಗಳೂರಿಗೆ ತೆರಳಿರುವುದನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ ಪ್ರಭಾಕರ ಭಟ್‌, ‘ಪೊಲೀಸರ ಸಲಹೆಯಂತೆ ನಾನು ಬೆಂಗಳೂರಿಗೆ ಬಂದಿದ್ದೇನೆ. ಹೆಚ್ಚಿನ ವಿವರಗಳನ್ನು ಈಗ ನೀಡಲು ಸಾಧ್ಯವಿಲ್ಲ’ ಎಂದರು.

ಮನೆಗೂ ಭದ್ರತೆ: ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿರುವ ಪ್ರಭಾಕರ ಭಟ್‌ ಅವರ ಮನೆ ಹಾಗೂ ಅವರೇ ಮುಖ್ಯಸ್ಥರಾಗಿರುವ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಪೊಲೀಸರು ಆಗಾಗ ಅವರ ಮನೆಯ ಬಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನಲಾದ ವ್ಯಕ್ತಿಗಳ ಕುರಿತು ರಹಸ್ಯ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !