ಗಾಂಜಾ ಮಾರಾಟಕ್ಕೆ ಯತ್ನ:ಎಂಟು ವಿದ್ಯಾರ್ಥಿಗಳ ಬಂಧನ

7

ಗಾಂಜಾ ಮಾರಾಟಕ್ಕೆ ಯತ್ನ:ಎಂಟು ವಿದ್ಯಾರ್ಥಿಗಳ ಬಂಧನ

Published:
Updated:
Prajavani

ಮಂಗಳೂರು: ನಗರದ ಮೋರ್ಗನ್‌ ಗೇಟ್‌ ಬಳಿಯ ಮೈದಾನದಲ್ಲಿ ಶನಿವಾರ ಗಾಂಜಾ ಸೇವಿಸುತ್ತಲೇ ಸಾರ್ವಜನಿಕರಿಗೆ ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಟು ವಿದ್ಯಾರ್ಥಿಗಳನ್ನು ನಗರ ಅಪರಾಧ ಘಟಕ (ಸಿಸಿಬಿ) ಹಾಗೂ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ (ಇ ಅಂಡ್‌ ಎನ್‌) ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಏಳು ಮಂದಿ ಕೇರಳದ ವಿದ್ಯಾರ್ಥಿಗಳು.

‘ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಕೆರೆ ಕರಿಪ್ರ ನಿವಾಸಿ ಅಕ್ಷಯ್‌ ಕೆ.ಪ್ರಸಾದ್ (22), ಮಂಗಳೂರಿನ ಕಣ್ಣೂರು ಬೋರುಗುಡ್ಡೆ ನಿವಾಸಿ ಜಾಫರ್ (22), ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಸಮೀಪದ ಶ್ರೀಕಂಠಪುರಂ ಗ್ರಾಮದ ಕೋಟ್ಟೂರು ತರಯಿಲ್‌ ನಿವಾಸಿ ನಿಮಿಲ್‌ (21), ಕಣ್ಣೂರು ಜಿಲ್ಲೆಯ ಎಡಕ್ಕಾಡ್ ಗ್ರಾಮದ ಮಾವಿಲಾಯ್‌ ನಿವಾಸಿ ಅಮಿತ್ ಶ್ರೀವತ್ಸನ್‌ (21), ಕಣ್ಣೂರು ಜಿಲ್ಲೆಯ ಕಪ್ಪಾಡ್ ಗ್ರಾಮದ ಚೆಲೂರಾ ನಿವಾಸಿ ಅಶ್ವಿನ್‌ (21), ಕೋಯಿಕ್ಕೋಡ್‌ ಜಿಲ್ಲೆಯ ಪುದಿಯಂಘಾಡಿ ಸಮೀಪದ ಮರಕ್ಕಾರಗಂಪರಂಬ್ ನಿವಾಸಿ ಮೊಹಮ್ಮದ್ ಅಮೀರ್‌, ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲ ಗ್ರಾಮದ ನಾಲ್ಕಲಿಕ್ಕಲ್‌ ನಿವಾಸಿ ಆಕಾಶ್ ಎಸ್‌.ನಾಯರ್‌ ಮತ್ತು ಕಣ್ಣೂರು ಜಿಲ್ಲೆಯ ಪಯ್ಯಂಬಲ ನಿವಾಸಿ ಅಕ್ಷಯ್‌ ಎಂಬುವವರನ್ನು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್ ತಿಳಿಸಿದ್ದಾರೆ.

ಆರೋಪಿಗಳಿಂದ ₹ 12,000 ಮೌಲ್ಯದ 500 ಗ್ರಾಂ. ಗಾಂಜಾ, 8 ಮೊಬೈಲ್‌ ಫೋನ್‌, ₹ 4,050 ನಗದು ಮತ್ತು ಎರಡು ಬೈಕ್‌ ಸೇರಿದಂತೆ ₹ 1.69 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೇರಳದಿಂದ ಗಾಂಜಾ ಖರೀದಿಸಿ ತಂದು ಮಂಗಳೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಲ್ಲಿ ಏಳು ಮಂದಿ ಕೇರಳದವರಾಗಿದ್ದು ನಗರದ ಎರಡು ಎಂಜಿನಿಯರಿಂಗ್‌ ಕಾಲೇಜು ಮತ್ತು ಒಂದು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಎಂದು ಕಮಿಷನರ್‌ ಮಾಹಿತಿ ನೀಡಿದ್ದಾರೆ.

ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಶಾಂತಾರಾಮ, ಇ ಅಂಡ್‌ ಎನ್‌ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಡಿ.ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !