ಶೀಘ್ರದಲ್ಲಿಯೇ ಕಾಲೇಜಿಗೆ ಪರ್ಯಾಯ ಜಾಗ

7
ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಿಸಿದ ತೀವ್ರ ನಿಗಾ ಘಟಕ (ಐಸಿಯು) ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ವೀರಪ್ಪ ಮೊಯಿಲಿ ಭರವಸೆ

ಶೀಘ್ರದಲ್ಲಿಯೇ ಕಾಲೇಜಿಗೆ ಪರ್ಯಾಯ ಜಾಗ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮುಂದಿನ 10–15 ದಿನಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಜಾಗ ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಸಂಸದ ವೀರಪ್ಪ ಮೊಯಿಲಿ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ತೀವ್ರ ನಿಗಾ ಘಟಕ (ಐಸಿಯು) ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶದಲ್ಲಿ ಜಾಗ ಮಂಜೂರಾಗಿದೆ. ಆದರೆ ಅದಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿ, ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಕಾಲೇಜು ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ಆದ್ದರಿಂದ ಶೀಘ್ರದಲ್ಲಿಯೇ ಕಾಲೇಜು ನಿರ್ಮಾಣಕ್ಕೆ ಪರ್ಯಾಯ ಜಾಗ ಗುರುತಿಸಲಾಗುತ್ತದೆ’ ಎಂದು ಹೇಳಿದರು.

‘ಜಿಲ್ಲಾ ಆಸ್ಪತ್ರೆ ಮೊದಲು135 ಹಾಸಿಗೆ ಸಾಮರ್ಥ್ಯ ಹೊಂದಿತ್ತು. ನಾನು ಸಂಸದನಾದ ಬಳಿಕ ಅದನ್ನು 365ಕ್ಕೆ ಹೆಚ್ಚಿಸಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಬೇಕಾದರೆ ಜಿಲ್ಲಾ ಆಸ್ಪತ್ರೆ 600 ಹಾಸಿಗೆಗಳನ್ನು ಹೊಂದಿರಬೇಕು. ಅದಕ್ಕಾಗಿ ಮುಂಬರುವ ದಿನಗಳಲ್ಲಿ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನೂ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ’ ಎಂದರು.

‘ಜಿಲ್ಲಾ ಆಸ್ಪತ್ರೆಗೆ ಎಕ್ಸರೆ ಯಂತ್ರ ಸೇರಿದಂತೆ ₨10 ಕೋಟಿಗೂ ಅಧಿಕ ಮೌಲ್ಯದ ಯಂತ್ರೋಪಕರಣಗಳನ್ನು ವಿವಿಧ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆ ಅಡಿ ನೀಡಿವೆ. ಇದೇ ರೀತಿ ಇನ್ನು ಕೆಲ ಕಂಪನಿಗಳ ಜತೆ ಮಾತನಾಡಿ ಎಂಆರ್‌ಐ ಸ್ಕ್ಯಾನ್ ಯಂತ್ರ ಒದಗಿಸಲು ಪ್ರಯತ್ನಿಸಲಾಗುತ್ತದೆ’ ಎಂದು ತಿಳಿಸಿದರು.

‘ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗುವ ನಿಟ್ಟಿನಲ್ಲಿ ಸರ್ಕಾರದ ನೇಮಕಾತಿ ನಿಯಮ ಸಡಿಲಗೊಳಿಸಿ ಶೀಘ್ರವಾಗಿ ಖಾಲಿ ಹುದ್ದೆಗಳ ಭರ್ತಿಗೆ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ–7 ಹಾದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆದ್ದರಿಂದ ಹೆದ್ದಾರಿಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಂದಲೇ ಆಯ್ಕೆ ಮಾಡಿ ತಾಯಿ ಮತ್ತು ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಿ, 15 ದಿನಗಳ ಕಾಲ ಪೌಷ್ಟಿಕ ಆಹಾರ ನೀಡಿ ಸಮರ್ಪಕ ಬೆಳವಣಿಗೆಗೆ ಬೇಕಾದ ಎಲ್ಲಾ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಂತಹ ಯೋಜನೆಗಳ ಪ್ರಯೋಜನವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಂ ರವಿಶಂಕರ್, ಮುಖಂಡರಾದ ಯಲುವಳ್ಳಿ ರಮೇಶ್, ಮರಳುಕುಂಟೆ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !