ತಿಂಗಳಿನಲ್ಲಿ ಆರನೇ ಬಾರಿ ಸಭೆ ರದ್ದು!

7
ಎಂಆರ್‌ಪಿಎಲ್‌ ಮಾಲಿನ್ಯ ಪರಿಹಾರ ಸಮಿತಿ

ತಿಂಗಳಿನಲ್ಲಿ ಆರನೇ ಬಾರಿ ಸಭೆ ರದ್ದು!

Published:
Updated:

ಮಂಗಳೂರು: ಇಲ್ಲಿನ ಮಂಗಳೂರು ಪೆಟ್ರೋಕೆಮಿಕಲ್ಸ್‌ ಅಂಡ್‌ ರಿಫೈನರಿ ಲಿಮಿಟೆಡ್‌ (ಎಂಆರ್‌ಪಿಎಲ್‌) ಕಂಪೆನಿಯಿಂದ ಆಗುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ಪರಿಹಾರಕ್ಕಾಗಿ ರಚಿಸಲಾಗಿರುವ ಉನ್ನತಮಟ್ಟದ ಸಮಿತಿಯ ಸಭೆ ತಿಂಗಳೊಳಗೆ ಸತತ ಆರನೇ ಬಾರಿ ರದ್ದುಗೊಂಡಿದೆ.

ಜೋಕಟ್ಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಜನರು ಎಂಆರ್‌ಪಿಎಲ್‌ ವಿರುದ್ಧ ಸಲ್ಲಿಸಿರುವ ದೂರುಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕಿತ್ತು. ಎಂಟು ತಿಂಗಳಿನಿಂದ ಈ ಸಮಿತಿ ಸಭೆ ನಡೆಸಿಲ್ಲ. ಸೋಮವಾರ ಸಮಿತಿಯ ಸಭೆ ನಿಗದಿಯಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ ರಾಜಕೀಯ ಕಾರಣಕ್ಕಾಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವುದರಿಂದ ಸಭೆ ರದ್ದುಗೊಂಡಿದೆ.

ಸಂಸದರು, ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳ ಶಾಸಕರು, ಪೊಲೀಸ್ ಕಮಿಷನರ್‌, ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ, ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ವಿಶೇಷ ಆರ್ಥಿಕ ವಲಯದ ವ್ಯವಸ್ಥಾಪಕ ನಿರ್ದೇಶಕರು, ಜೋಕಟ್ಟೆ ನಾಗರಿಕ ಹೋರಾಟ ಸಮಿತಿಯ ಐವರು ಪ್ರತಿನಿಧಿಗಳು ಮತ್ತು ಮಾಲಿನ್ಯದ ಕುರಿತು ಅಧ್ಯಯನ ನಡೆಸಲು ನೇಮಿಸಲಾಗಿರುವ ಎನ್‌ಐಟಿಕೆ ಪ್ರಾಧ್ಯಾಪಕ ಡಾ.ಶ್ರೀನಿಕೇತನ್‌ ಅಧ್ಯಕ್ಷತೆಯ ತಾಂತ್ರಿಕ ಸಮಿತಿಯ ಸದಸ್ಯರು ಈ ಸಮಿತಿಯಲ್ಲಿದ್ದಾರೆ.

‘ಎಂಟು ತಿಂಗಳಿನಿಂದ ಸಮಿತಿಯ ಸಭೆಯೇ ನಡೆದಿಲ್ಲ. ಎಂಆರ್‌ಪಿಎಲ್‌ನಿಂದ ಆಗುತ್ತಿರುವ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಈಗ ಜಿಲ್ಲಾ ಉಸ್ತುವಾರಿ ಸಚಿವರು ರೆಸಾರ್ಟ್‌ನಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ದಿಢೀರ್‌ ಸಭೆ ರದ್ದುಗೊಂಡಿದೆ. ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಜನರಿಗೆ ನ್ಯಾಯ ದೊರಕುತ್ತಿಲ್ಲ’ ಎಂದು ಹೋರಾಟ ಸಮಿತಿಯ ಪ್ರತಿನಿಧಿಯಾಗಿ ಸಮಿತಿಯಲ್ಲಿರುವ ಮುನೀರ್‌ ಕಾಟಿಪಳ್ಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವರು ಸಮಿತಿಯ ಸದಸ್ಯರಲ್ಲ. ಆದರೆ, ಅವರು ಸಚಿವರಾಗಿ ಸಭೆಯಲ್ಲಿ ಹಾಜರಿರಲು ಬಯಸುವುದು ಒಳ್ಳೆಯ ವಿಚಾರ. ಅವರು ಪಾಲ್ಗೊಳ್ಳಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಆರನೇ ಬಾರಿ ಸಭೆಯನ್ನು ರದ್ದು ಮಾಡಲಾಗಿದೆ. ಜಿಲ್ಲಾಧಿಕಾರಿಯವರು ಭಾನುವಾರ ರಾತ್ರಿ ಈ ವಿಚಾರ ಖಚಿತಪಡಿಸಿದ್ದಾರೆ. ಜನರಿಗೆ ನ್ಯಾಯ ಕೊಡುವವರು ಯಾರು’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !