‘ದಿಗ್ಭಂಧನ’ಕ್ಕೊಳಗಾಗಿದ್ದ ಶಿವಕುಮಾರ್‌ಗೆ ಎರಡು ಹುದ್ದೆ

7
ಒಂಬತ್ತು ಮುಖ್ಯ ಎಂಜಿನಿಯರ್‌ಗಳ ವರ್ಗಾಯಿಸಿದ ಲೋಕೋಪಯೋಗಿ ಇಲಾಖೆ

‘ದಿಗ್ಭಂಧನ’ಕ್ಕೊಳಗಾಗಿದ್ದ ಶಿವಕುಮಾರ್‌ಗೆ ಎರಡು ಹುದ್ದೆ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ಆಯುಕ್ತ ರಾಕೇಶ್‌ ಸಿಂಗ್‌ ಜತೆಗಿನ ಶೀತಲ ಸಮರದಿಂದ ಸುದ್ದಿಯಾಗಿದ್ದ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆ ಸೋಮವಾರ ವರ್ಗಾವಣೆ ಮಾಡಿದ್ದು, ಅವರಿಗೆ ಎರಡು ಹುದ್ದೆಗಳನ್ನು ನೀಡಿ ‘ಸಮಾಧಾನ’ಪಡಿಸಿದೆ.

ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್‌ ಪಾವತಿ ವಿಚಾರದಲ್ಲಿ ರಾಕೇಶ್ ಸಿಂಗ್‌ ಹಾಗೂ ಶಿವಕುಮಾರ್‌ ನಡುವೆ ವೈಮನಸ್ಸು ಉಂಟಾಗಿತ್ತು. ಆಯುಕ್ತರು ಶಿಫಾರಸು ಮಾಡಿದರೂ ಕೆಲವು ಗುತ್ತಿಗೆದಾರರಿಗೆ ಬಿಲ್‌ ಮೊತ್ತವನ್ನು ಬಿಡುಗಡೆ ಮಾಡಲು ಶಿವಕುಮಾರ್‌ ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆಯುಕ್ತರು ಎಂಜಿನಿಯರಿಂಗ್‌ ಸದಸ್ಯರ ಕಚೇರಿಗೆ ಬೀಗ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಎಂಜಿನಿಯರಿಂಗ್‌ ಸದಸ್ಯರ ಕಚೇರಿಗೆ ಬೀಗ ಹಾಕುವುದರೊಂದಿಗೆ ಅವರಿಬ್ಬರ ಜಗಳ ಪರ್ಯಾವಸಾನಗೊಂಡಿತ್ತು.

ಶಿವಕುಮಾರ್ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ಮುಖ್ಯ ಎಂಜಿನಿಯರ್‌ ಹುದ್ದೆಯ ಜತೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್ಚುವರಿ ಹೊಣೆಯನ್ನೂ ವಹಿಸಲಾಗಿದೆ. ಈ ನಿಗಮದ ಮೇಲ್ವಿಚಾರಣೆಯಲ್ಲೇ ₹25 ಸಾವಿರ ಕೋಟಿ ಮೊತ್ತದ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ನಡೆಯಲಿದೆ. ಶಿವಕುಮಾರ್ ಅವರು ಮುಖ್ಯ ಎಂಜಿನಿಯರ್‌ ಹುದ್ದೆಗೆ ಬಡ್ತಿ ಹೊಂದಿ ಐದು ತಿಂಗಳುಗಳಷ್ಟೇ ಆಗಿವೆ. ಈವರೆಗೆ ಎಂ. ಗಣೇಶ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರಿಗೆ ರಾಷ್ಟ್ರೀಯ ಹೆದ್ದಾರಿ ವಲಯದ ಮುಖ್ಯ ಎಂಜಿನಿಯರ್‌ ಹೊಣೆ ಮಾತ್ರ ಇರಲಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ನಿರ್ದೇಶಕರಾಗಿದ್ದ ಟಿ.ಶಿವಶಂಕರ್ ಅವರನ್ನು ಬಿಡಿಎ ಎಂಜಿನಿಯರಿಂಗ್‌ ಸದಸ್ಯರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಏಳು ತಿಂಗಳ ಬಳಿಕ ಹುದ್ದೆ ತೋರಿಸಿದ ಇಲಾಖೆ: ನಾಲ್ವರು ಮುಖ್ಯ ಎಂಜಿನಿಯರ್‌ಗಳಿಗೆ ಏಳು ತಿಂಗಳುಗಳಿಂದ ಹುದ್ದೆ ತೋರಿಸಿರಲಿಲ್ಲ. ಅವರಿಗೆ ಸೋಮವಾರ ಹುದ್ದೆ ನೀಡಲಾಗಿದೆ.

ಲಕ್ಷ್ಮಣ ರಾವ್‌ ಪೇಶ್ವೆ ಅವರನ್ನು ಕರ್ನಾಟಕ ನೀರಾವರಿ ನಿಗಮಕ್ಕೆ (ಮಲಪ್ರಭಾ), ಬಿ.ಆರ್‌. ಅನಿಲ್‌ ಕುಮಾರ್ ಅವರನ್ನು ಕಾಡಾ ಸಂಸ್ಥೆಗೆ, ಆರ್‌.‍ಪಿ.ಕುಲಕರ್ಣಿ ಅವರನ್ನು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ (ಆಲಮಟ್ಟಿ), ಶಾಂತರಾಜಣ್ಣ ಅವರನ್ನು ತುಮಕೂರು ಸ್ಮಾರ್ಟ್ ಸಿಟಿಗೆ ಮುಖ್ಯ ಎಂಜಿನಿಯರ್ ಆಗಿ ವರ್ಗಾವಣೆ ಮಾಡಲಾಗಿದೆ.

ರಾಜೇಶ್ ಅವರನ್ನು ಸಂಪರ್ಕ ಮತ್ತು ಕಟ್ಟಡಗಳು (ಉತ್ತರ ವಲಯ), ಮುಜಾಹರ್‌ ಜಾವಿದ್‌ ಅವರನ್ನು ಕರ್ನಾಟಕ ನೀರಾವರಿ ನಿಗಮದ (ಕಲಬುರ್ಗಿ) ಮುಖ್ಯ ಎಂಜಿನಿಯರ್‌ ಹುದ್ದೆಗೆ ವರ್ಗಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !