ಮದ್ಯಪಾನ: ನಿರ್ಲಕ್ಷ್ಯವೆಂಬ ವ್ಯಸನ

7
ಪಾನನಿರೋಧದಿಂದ ಕೌಟುಂಬಿಕ ಹಿಂಸೆ ತಡೆಗಟ್ಟಿ, ಆ ಮೂಲಕ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ

ಮದ್ಯಪಾನ: ನಿರ್ಲಕ್ಷ್ಯವೆಂಬ ವ್ಯಸನ

Published:
Updated:
Prajavani

ಮದ್ಯಪಾನದ ಹಾವಳಿಯಿಂದ ನೊಂದು, ಬೆಂದು ಬಸವಳಿದು ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ಪಾದಯಾತ್ರೆಯಲ್ಲಿ ಹೊರಟಿರುವ ಸುಮಾರು 2,500 ಮಹಿಳೆಯರು, ರಾಜಧಾನಿ ಬೆಂಗಳೂರಿಗೆ ಬಂದು ಧರಣಿ ಕೂರಲು ನಿರ್ಧರಿಸಿದ್ದಾರೆ. ಇದು ಒಂದು ವಿಧದಲ್ಲಿ, ಮಹಿಳೆಯರ ಗೋಳಿನ ಬಗ್ಗೆ ಸರ್ಕಾರ ಹೊಂದಿರುವ ತಾತ್ಸಾರ ಮನೋಭಾವವನ್ನು ಎಚ್ಚರಿಸುವ ಯತ್ನ ಎನ್ನಬಹುದು.

ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಮದ್ಯವ್ಯಸನಿಗಳನ್ನು ಆ ಚಟದಿಂದ ಮುಕ್ತಗೊಳಿಸಲು ಸಮಾಜದಲ್ಲಿ ಹಲವಾರು ಸ್ವಯಂ ಸೇವಾ ಸಂಸ್ಥೆಗಳಿವೆ. ಅಷ್ಟೇ ಏಕೆ, ರಾಜ್ಯ ಸರ್ಕಾರದ ಮದ್ಯಪಾನ ಸಂಯಮ ಮಂಡಳಿ ಸಹ ಪಾನನಿರೋಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯ ಮಾಡುತ್ತಿದೆ. ಆದರೂ, ಮದ್ಯವ್ಯಸನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ವಿಪರ್ಯಾಸ ಎಂದರೆ, ಮದ್ಯವ್ಯಸನವು ಸಮಾಜಕ್ಕೆ ಅಂಟಿದ ಸಾಮಾಜಿಕ ಪಿಡುಗು ಎಂದು ತಿಳಿದೂ ಸರ್ಕಾರ ಹೆಚ್ಚು ಹೆಚ್ಚು ಮದ್ಯದಂಗಡಿಗಳನ್ನು ತೆರೆಯುತ್ತಿದೆ. ಅಂಗಡಿ ಮಾಲೀಕರಿಗೆ ಹೆಚ್ಚು ಹೆಚ್ಚು ಮದ್ಯ ಮಾರಬೇಕೆಂಬ ಹುಕುಂ ಬೇರೆ ಹೊರಡಿಸುತ್ತದೆ.

ಮದ್ಯಪಾನಕ್ಕೂ ಕೌಟುಂಬಿಕ ಹಿಂಸೆಗೂ ನಿಕಟವಾದ ಸಂಬಂಧವಿದೆ ಎಂಬುದು ಗಮನಾರ್ಹ. ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ಮದ್ಯವ್ಯಸನಿಗಳದು ಸಿಂಹಪಾಲು ಎಂದು ಹೇಳುತ್ತವೆ ಅಧ್ಯಯನ ವರದಿಗಳು. ಹಿಂಸೆಯೆಂದರೆ ಅದು ಬೈಗುಳ ಆಗಿರಬಹುದು; ದೈಹಿಕ, ಮಾನಸಿಕ ಅಥವಾ ಲೈಂಗಿಕ ಹಿಂಸೆಯಾಗಿರಬಹುದು. ಕೆಲವು ವೇಳೆ ಮದ್ಯವ್ಯಸನಿಗಳು ಇತರರ ಮುಂದೆ ದೂಷಣೆ ಮಾಡುವುದು ಸಹ ಸಾಮಾಜಿಕ ಹಿಂಸೆ ಆಗಿರುತ್ತದೆ.

ಕುಡಿಯುವ ಚಟದಿಂದ ಕೆಲವು ಮದ್ಯವ್ಯಸನಿಗಳ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿ ಅವರು ಮನೋಕ್ಷೋಭೆಯಿಂದ ಬಳಲಬಹುದು. ಆಗ ಪತ್ನಿಯ ಮೇಲೆ ವಿನಾಕಾರಣ ಸಂಶಯ, ಅವಳನ್ನು ಹೊರಹಾಕುವುದು ಅಥವಾ ಕೋಣೆಯೊಳಗೆ ಕೂಡಿ ಬೀಗ ಹಾಕುವುದು, ಇತರರೊಂದಿಗೆ ಅನೈತಿಕ ಸಂಬಂಧ ಕಲ್ಪಿಸುವುದು ಪತ್ನಿಗೆ ಸಹಿಸಲಾಗದ ಹಿಂಸೆಯಾಗಬಹುದು.

ಸಾಮಾನ್ಯವಾಗಿ ಕುಡಿತದ ಚಟ ಪ್ರಾರಂಭವಾಗುವುದು ಹರೆಯದ ಅವಧಿಯಲ್ಲಿ. ಶಾರೀರಿಕ ಬೆಳವಣಿಗೆ, ಮನೋವಿಕಾಸ, ಲೈಂಗಿಕ ಅಂಗಾಂಗಗಳ ವಿಕಾಸದಂತಹ ಬದಲಾವಣೆಗಳು ಹರೆಯದ ಮನಸ್ಸನ್ನು ಅತಿಯಾದ ಒತ್ತಡಕ್ಕೀಡು ಮಾಡುತ್ತವೆ. ವಿಕಾಸಗೊಳ್ಳುತ್ತಿರುವ ಮನಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು ಪುಟಿದೇಳುತ್ತವೆ.

ಮುಖ್ಯವಾಗಿ, ತನ್ನ ಸ್ಥಾನ ಎಲ್ಲಿ, ತಾನು ಹೇಗೆ ತನ್ನ ಭವಿಷ್ಯ ರೂಪಿಸಿಕೊಳ್ಳಬೇಕು, ತಾನು ಯಾರಂತಾಗಬೇಕು ಎನ್ನುವಂತಹ ಪ್ರಶ್ನೆಗಳು. ಅದರೊಂದಿಗೆ ‘ತನ್ನತನ’ವನ್ನು ಕಂಡುಕೊಳ್ಳುವ ತವಕ. ತನ್ನ ಬಾಹ್ಯರೂಪದ ತುಲನೆ, ಓದಿನಲ್ಲಿ ಎದುರಿಸಬೇಕಾದ ಸ್ಪರ್ಧೆ. ಇವುಗಳೊಂದಿಗೆ ಪೋಷಕರ ಅತಿಯಾದ ನಿರೀಕ್ಷೆಗಳು ಬೇರೆ. ಇತರರೊಂದಿಗೆ ಹೋಲಿಸಿ ಮಾಡುವ ಟೀಕೆ ಟಿಪ್ಪಣಿಗಳು. ಎಷ್ಟೋ ವೇಳೆ ಕುಟುಂಬದ ಕಲುಷಿತ ವಾತಾವರಣದಲ್ಲಿ ಅವರ ಈ ಸಂದೇಹಗಳನ್ನು, ಪುಟಿದೇಳುವ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಳ್ಳಲು, ಆಲಿಸಿ ಸ್ಪಂದಿಸುವವರ ಕೊರತೆ ಇರುತ್ತದೆ. ಈ ಎಲ್ಲಾ ಕಾರಣಗಳಿಂದ ಹರೆಯದ ಮನಸ್ಸು ಅತಿಯಾದ ಒತ್ತಡವನ್ನು ನೀಗಿ ಮನಸ್ಸನ್ನು ಹಗುರ ಮಾಡಿಕೊಳ್ಳಲು, ಸ್ನೇಹಿತರ ಸಲಹೆಯಂತೆ ಕುಡಿತದ ರುಚಿ ನೋಡುತ್ತದೆ. ನಂತರ, ಒತ್ತಡದಿಂದ ಹಗುರಾಗಲು ಇದೇ ಒಳ್ಳೆಯ ಮಾರ್ಗ ಎಂದು ಭಾವಿಸಿ ಕ್ರಮೇಣ ಕುಡಿತದ ಚಟಕ್ಕೆ ಅಂಟಿಕೊಳ್ಳುತ್ತದೆ.

ವ್ಯಕ್ತಿತ್ವ ದೋಷವುಳ್ಳ ಕೆಲವರು ಸಹ ತಮ್ಮ ಒತ್ತಡ ನೀಗಿಕೊಳ್ಳಲು ಕುಡಿಯುವ ಚಟಕ್ಕೆ ಬೀಳುತ್ತಾರೆ. ಖಿನ್ನತೆಗೊಳಗಾದವರು ಖಿನ್ನತೆಯಿಂದ ಹೊರಬರಲು ಕುಡಿಯುವುದಕ್ಕೆ ಪ್ರಾರಂಭಿಸುತ್ತಾರೆ. ಇಂಥವರಲ್ಲಿ ಒಂದು ವಿಶೇಷ ಎಂದರೆ, ಇವರು ಕೆಲವು ಅವಧಿಗೆ ಮಾತ್ರ ಕುಡಿದು ನಂತರ ನಿಲ್ಲಿಸುತ್ತಾರೆ. ಪುನಃ ಖಿನ್ನತೆಗೊಳಗಾದಾಗ ಹೆಚ್ಚು ಕುಡಿಯಲು ಪ್ರಾರಂಭಿಸುತ್ತಾರೆ.

ಈ ಬಗೆಯ ಸಮಸ್ಯೆಗಳಿಗೆ ಮದ್ಯ ನಿಷೇಧ ಒಂದು ಮುಖ್ಯವಾದ ಪರಿಹಾರ ಕ್ರಮ. ಆದರೆ, ಹಾಗೆ ಮಾಡಿದಾಗ ವ್ಯಕ್ತಿಗಳು ಬೇರೆ ಬೇರೆ ಮಾದಕ ವಸ್ತುಗಳಿಗೆ ಮೊರೆ ಹೋಗಿ ಅದರಿಂದ ಇನ್ನೂ ಹೆಚ್ಚಿನ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ದಿಸೆಯಲ್ಲಿ, ಪಾನ ನಿಷೇಧ ಕಾನೂನು ಒಂದು ಹೆಜ್ಜೆಯಷ್ಟೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿ ಕುಟುಂಬ ಜೀವನದ ಬಗ್ಗೆ ಅರಿವು ಮೂಡಿಸುವುದು, ಜೀವನ ಕೌಶಲಗಳನ್ನು ಕಲಿಸುವುದು ಒಳ್ಳೆಯದು.

ಹರೆಯದ ಮಕ್ಕಳನ್ನು ಪೋಷಕರು ಸ್ನೇಹಿತರಂತೆ ಕಂಡು, ಅವರ ಸಂದೇಹಗಳಿಗೆ ಸ್ಪಂದಿಸಬೇಕು. ಸಕಾರಾತ್ಮಕ ಮಾರ್ಗದರ್ಶನ ಮಾಡಬೇಕು. ಮಕ್ಕಳಿಗೆ ಮಾನಸಿಕ ಸಮಸ್ಯೆ ಇದೆ ಎಂದು ಕಂಡುಬಂದರೆ ಅಲಕ್ಷಿಸದೆ ಮನೋವೈದ್ಯರಲ್ಲಿ ಸಲಹೆ ಪಡೆಯಬೇಕು. ಕಾನೂನು, ಸ್ವಯಂ ಸೇವಾ ಸಂಸ್ಥೆಗಳ ಪ್ರಯತ್ನದ ಜೊತೆಗೆ, ಪೋಷಕರು ಮಕ್ಕಳನ್ನು ಸೂಕ್ತವಾಗಿ ನಡೆಸಿಕೊಳ್ಳುವ ರೀತಿಯಿಂದ ಮದ್ಯವ್ಯಸನವನ್ನು ದೂರವಿಟ್ಟು, ಕೌಟುಂಬಿಕ ಹಿಂಸೆ ತಡೆಗಟ್ಟಬಹುದು. ಆ ಮೂಲಕ ಉತ್ತಮ ಸಮಾಜ ನಿರ್ಮಾಣವೂ ಸಾಧ್ಯವಾಗುತ್ತದೆ.

ಲೇಖಕ: ಮನೋವಿಜ್ಞಾನಿ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !