ಗುರುವಾರ , ಮಾರ್ಚ್ 4, 2021
26 °C
ಮಡಿವಾಳ ಮಾಚಿದೇವ ಜಯಂತಿ ಆಚರಣೆ

‘ಸಮುದಾಯದ ಒಗ್ಗಟ್ಟು ಮುಖ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದಂತ ಮಹತ್ವ ಮತ್ತೊಂದು ಇಲ್ಲವಾಗಿದೆ. ಒಗ್ಗಟ್ಟಿನ ಸಂದೇಶ ಸಾರುವ ಮೂಲಕ ಸಮುದಾಯ ತನ್ನ ಬಲ ವೃದ್ಧಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಡಿವಾಳ ಜನಾಂಗ ಕೊಳೆಯಾದ ಬಟ್ಟೆ ಶುಚಿಗೊಳಿಸಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದೆ. ಕಾಲಕ್ಕೆ ಅನುಗುಣವಾಗಿ ಬದುಕಿನಲ್ಲಿ ಹೊಸತನ ರೂಪಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

ಪೂರ್ವಜರು ಹಾಕಿಕೊಟ್ಟ ಹಾದಿಯಲ್ಲಿ ನಾವು ಕೂಡಾ ನಡೆಯಬೇಕು. ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ಆಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಬಸವಾದಿ ಪ್ರಮಥರ ಸಾಲಿನಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯ ಸ್ಥಾನ ಪಡೆದಿದ್ದು, ಅವರ ಆದರ್ಶ ಮತ್ತು ತತ್ವಗಳನ್ನು ಪಾಲಿಸಲು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ಸಮಾಜದಲ್ಲಿ ಕಾಲ ಕಾಲಕ್ಕೆ ಮಹಾಪುರುಷರು ನೀಡಿದ ಸಂದೇಶ ಹಾಗೂ ಅವರ ಮಾರ್ಗದರ್ಶನವನ್ನು ಸದಾ ಕಾಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ನಮ್ಮಿಂದ ಸಾಧ್ಯವಿದ್ದಲ್ಲಿ ಮತ್ತೊಬ್ಬರಿಗೆ ಸಹಕಾರ ನೀಡಬೇಕು ಎಂದರು.

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜಿಂಜವಾಡದ ಬಸವರಾಜೇಂದ್ರ ಶರಣರು ಮಾತನಾಡಿ, ‘ಸತ್ಯ ಕಾಯವುಳ್ಳ ಶರಣರಾದ ಮಡಿವಾಳ ಮಾಚಿದೇವ ಕೇವಲ ಕಾಯಕ ಮಾಡುವವರ ಕೊಳಕ ಬಟ್ಟೆಯನ್ನು ಮಾತ್ರ ಮಡಿಮಾಡಿಕೊಡುತ್ತಿದ್ದನು. ಕಾಯಕ ಮಾಡದಿರುವವರ ಬಟ್ಟೆಯನ್ನು ಮಡಿಮಾಡುತ್ತಿರಲಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಕಂದಾಯ ಇಲಾಖೆಯ ಶಿರಸ್ತೇದಾರ ಎಂ.ಬಿ.ಗುಡೂರ ಉಪಸ್ಥಿತರಿದ್ದರು.

ಕಾರ್ಯಕ್ರಮ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.

ಮೆರವಣಿಗೆ ಜಿಲ್ಲಾಡಳಿತ ಭವನದಿಂದ  ಆರಂಭವಾಗಿ ನಗರದ ನಾನಾ ಕಡೆ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ ಭವನಕ್ಕೆ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಕೇಂದ್ರ ಬಿಂದು ಆಗಿದ್ದರು.

ಅವಧಿ ವಿಸ್ತರಣೆ
ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ ಸಮಿತಿಗೆ ಆಯ್ಕೆಗಾಗಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 12 ರಂದು ಸಂಜೆ 5.30 ರವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.karnatakapubliclibrary.gov.in ಸಂಪರ್ಕಿಸಬಹುದಾಗಿದೆ.

ವಿದ್ಯುತ್ ಪೂರೈಕೆ: ವಿವಿಧೆಡೆ ವ್ಯತ್ಯಯ

ಕುಳಗೇರಿ ಕ್ರಾಸ್‌ನಲ್ಲಿರುವ 110 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್ ಮಾರ್ಗದಲ್ಲಿ ಕಾಮಗಾರಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 2 ರಂದು ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಕುಳಗೇರಿ ಕ್ರಾಸ್ ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್ ಎಫ್-1 ಮಮಟಗೇರಿ, ಎಫ್-2 ಸಪ್ಪನಾಳ, ಎಫ್-3 ಮಮಟಗೇರಿ ಐ.ಪಿ, ಎಫ್-4 ಕುಳಗೇರಿ ಐ.ಪಿ, ಎಫ್-5 ತಿಮ್ಮನಕಟ್ಟಿ ಐ.ಪಿ, ಎಫ್-6 ಕಾಕನೂರ, ಎಫ್-7 ಬಂಕನಿ, ಎಫ್-8 ಬೆಳಲಕೊಪ್ಪ, ಎಫ್-9 ನಿಲಗುಂದ ಐ.ಪಿ, ಎಫ್-10 ಎನ್.ಜೆ.ವೈ. ಕುಳಗೇರಿ, ಎಫ್-11 ನವೋದಯ ಸೆಮಿ ಅರ್ಬನ್ ಮಾರ್ಗದಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸುವಂತೆ ಬಾಗಲಕೋಟೆ ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಗಮನ ಸೆಳೆದ ವಸ್ತು ಪ್ರದರ್ಶನ ಮಳಿಗೆ

ವಾರ್ತಾ ಇಲಾಖೆ ವತಿಯಿಂದ ಬಾದಾಮಿಯ ಬನಶಂಕರಿ ಜಾತ್ರೆಯಲ್ಲಿ ವಸ್ತು ಪ್ರದರ್ಶನ ಮಳಿಗೆ ಜಾತ್ರೆಗೆ ಬಂದವರ ಗಮನ ಸೆಳೆಯಿತು.
ವಸ್ತು ಪ್ರದರ್ಶನ ಮಳಿಗೆಯನ್ನು ಶಾಲಾ ಮಕ್ಕಳು, ರೈತರು, ಸಾರ್ವಜನಿಕರು ವೀಕ್ಷಿಸಿದರು. ಈ ಪ್ರದರ್ಶನ ಫೆಬ್ರವರಿ 4 ವರೆಗೆ ನಡೆಯಲಿದೆ.

ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕಗಳನ್ನೊಳಗೊಂಡ ವಸ್ತು ಪ್ರದರ್ಶನ ಮಳಿಗೆಯನ್ನು ಚೊಳಚಗುಡ್ಡದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ಬಡಿಗೇರ  ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಎಂ.ಎಚ್.ಪೂಜಾರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.