ಪೊಲೀಸ್ ಶ್ವಾನದಳಕ್ಕೆ ಮುಧೋಳ ತಳಿ?

ಬಾಗಲಕೋಟೆ: ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆಗಳಿಗೆ ಸೇರ್ಪಡೆಯಾದ ನಂತರ, ಇದೀಗ ಮುಧೋಳ ತಳಿಯ ನಾಯಿ ರಾಜ್ಯ ಪೊಲೀಸ್ ಇಲಾಖೆಯಲ್ಲೂ ತನ್ನ ಛಾಪು ಮೂಡಿಸಲಿದೆ.
ಸೇನೆಯಲ್ಲಿ ಯಶಸ್ವಿ ಸೇವೆಯನ್ನು ಗಮನಿಸಿರುವ ಪೊಲೀಸ್ ಇಲಾಖೆ ತನ್ನ ಶ್ವಾನದಳದಲ್ಲಿ ಮುಧೋಳ ತಳಿ ನಾಯಿಗೆ ಸ್ಥಾನ ನೀಡಲು ಮುಂದಾಗಿದೆ. ಆ ನಿಟ್ಟಿನಲ್ಲಿ ಗೃಹ ಇಲಾಖೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಂದ ವರದಿ ತರಿಸಿಕೊಂಡಿದೆ.
‘ಮೊದಲ ಹಂತದಲ್ಲಿ ಮುಧೋಳ ತಳಿಯ ನಾಲ್ಕು ನಾಯಿಗಳನ್ನು ಬೆಂಗಳೂರಿನ ಶ್ವಾನದಳ ತರಬೇತಿ ಕೇಂದ್ರಕ್ಕೆ ಒಯ್ಯಲು ನಿರ್ಧರಿಸಲಾಗಿದೆ. ಇದಕ್ಕೆ ಮೌಖಿಕ ಒಪ್ಪಿಗೆಯೂ ದೊರೆತಿದೆ. ಅಪರಾಧ ಹಾಗೂ ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಎ.ಎಂ.ಸಲೀಂ ರಜೆಯ ಮೇಲಿದ್ದಾರೆ. ಫೆಬ್ರುವರಿ 8ರಂದು ಕರ್ತವ್ಯಕ್ಕೆ ಮರಳಲಿದ್ದಾರೆ. ನಂತರ ಆ ಬಗ್ಗೆ ಅಧಿಕೃತ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ರಿಷ್ಯಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ದಾಳಿ ಕಾರ್ಯಾಚರಣೆಗೆ ಬಳಕೆ
ಪೊಲೀಸ್ ಇಲಾಖೆಯ ಶ್ವಾನದಳದಲ್ಲಿ ಈಗ ಲ್ಯಾಬ್ರೆಡಾರ್ ರೆಟ್ರಿವರ್, ಡಾಬರ್ಮನ್ ಹಾಗೂ ಆಲ್ಸೆಷನ್ ತಳಿಯ ನಾಯಿಗಳು ಬಳಕೆಯಾಗುತ್ತಿವೆ. ವಾಸನ ಗ್ರಹಿಕೆಯಲ್ಲಿ ತೀಕ್ಷ್ಣತೆ ಹೊಂದಿರುವ ಲ್ಯಾಬ್ರೆಡರ್ ತಳಿಯನ್ನು ಸ್ಫೋಟಕ ಪತ್ತೆಗೆ ಬಳಸಲಾಗುತ್ತಿದೆ. ಆಲ್ಸೆಷನ್ ಮಾದಕ ವಸ್ತು ಪತ್ತೆ ತಪಾಸಣೆಗೆ ಹಾಗೂ ಡಾಬರ್ಮನ್ ಅಪರಾಧ ಪತ್ತೆ ಪ್ರಕರಣದಲ್ಲಿ ಬಳಕೆಯಾಗುತ್ತಿವೆ. ಮುಧೋಳ ತಳಿಯನ್ನು ದಾಳಿ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ವರದಿಯಲ್ಲಿ ತಿಳಿಸಿದ್ದೇನೆ’ ಎಂದು ರಿಷ್ಯಂತ್ ಹೇಳುತ್ತಾರೆ.
‘ಈಗಿರುವ ಮೂರು ಶ್ವಾನಗಳು ವಿದೇಶಿ ತಳಿಗಳಾಗಿವೆ. ಇದೇ ಮೊದಲ ಬಾರಿಗೆ ನಮ್ಮದೇ ದೇಸಿ ತಳಿಗೆ ಮನ್ನಣೆ ದೊರೆಯುತ್ತಿದೆ. ಹಾಗಾಗಿ ಮೊದಲ ನಾಲ್ಕು ನಾಯಿಗಳ ಪೈಕಿ ಒಂದನ್ನು ಬಾಗಲಕೋಟೆ ಜಿಲ್ಲೆಯ ಶ್ವಾನ ದಳಕ್ಕೆ ಕೊಡುವಂತೆ ಕೇಳಿದ್ದೇನೆ’ ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.