ಸೋಮವಾರ, ಮಾರ್ಚ್ 8, 2021
22 °C
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ

ಕನ್ನಡಕ್ಕೆ ನಾಟಕ ನಿಧಿ ನೀಡಿದ ಎಸ್‌ವಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕನ್ನಡದಲ್ಲಿ ನಾಟಕ ಸಾಹಿತ್ಯ ಇನ್ನೂ ಪ್ರವರ್ಧಮಾನಕ್ಕೆ ಬಾರದ ಕಾಲಘಟ್ಟದಲ್ಲೇ ಸಂಸ್ಕೃತದ ಪ್ರಮುಖ ಬರಹಗಾರರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಅಮೂಲ್ಯ ನಿಧಿಯನ್ನು ನೀಡಿದ್ದರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರ, ಪ್ರೊ.ಎಸ್‌.ವಿ.ಪರಮೇಶ್ವರ ಭಟ್ಟ ಶತಮಾನೋತ್ಸವ ಸಂಸ್ಮರಣ ಸಮಿತಿ, ಸೇಂಟ್‌ ಅಲೋಶಿಯಸ್‌ ಕಾಲೇಜಿನ ಕನ್ನಡ ವಿಭಾಗದ ಜಂಟಿ ಸಹಯೋಗದಲ್ಲಿ ಸೇಂಟ್‌ ಅಲೋಶಿಯಸ್‌ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ಎಸ್‌.ವಿ.ಪರಮೇಶ್ವರ ಭಟ್ಟರ ಸಮಗ್ರ ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸಂಸ್ಕೃತದ ಅತ್ಯುನ್ನತ ನಾಟಕಗಳನ್ನು ಅನುವಾದಿಸುವ ಮೂಲಕ ಕನ್ನಡಕ್ಕೆ ಶಾಸ್ತ್ರೀಯ ರಂಗಭೂಮಿಯ ಸ್ವರೂಪವನ್ನು ಪರಿಚಯಿಸಿದ ಕೀರ್ತಿ ಪರಮೇಶ್ವರ ಭಟ್ಟರಿಗೆ ಸಲ್ಲುತ್ತದೆ. ಕನ್ನಡದ ನಾಟಕಕಾರರು ಎಂದಿಗೂ ಅವರನ್ನು ಮರೆಯುವಂತಿಲ್ಲ. ನಾಟಕಗಳ ಮೂಲಕ ಜನರನ್ನು ಬೆಸೆದ ಸಾಹಿತಿ ಅವರು ಎಂದರು.

‘ನಾನು ನೇರವಾಗಿ ಪರಮೇಶ್ವರ ಭಟ್ಟರ ಶಿಷ್ಯನಲ್ಲ. ಆದರೆ, ಅವರ ನಾಟಕಗಳನ್ನು ಓದುತ್ತಲೇ ಮಾನಸಿಕ ಶಿಷ್ಯನಾಗಿದ್ದೆ. ಈಗ ಅತ್ಯಂತ ಚಲನಶೀಲವಾಗಿ ಕೆಲಸ ಮಾಡುತ್ತಿರುವ ಪುಸ್ತಕ ಪ್ರಾಧಿಕಾರವು ಭಟ್ಟರ ಸಾಹಿತ್ಯ ಪ್ರಕಟಣೆ ಮತ್ತು ಪ್ರಸಾರದ ದಿಸೆಯಲ್ಲಿ ಕೈಗೊಂಡಿರುವ ಕಾರ್ಯಗಳು ಶ್ಲಾಘನೀಯ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಮೇಶ್ವರ ಭಟ್ಟರ ಸಮಗ್ರ ಸಂಪುಟಗಳ ಗೌರವ ಸಂಪಾದಕ ಪ್ರೊ.ಬಿ.ಎ.ವಿವೇಕ ರೈ, ‘ಭಾಸ, ಕಾಳಿದಾಸ ಸೇರಿದಂತೆ ಸಂಸ್ಕೃತದ ಮೇರು ಸಾಹಿತಿಗಳ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತಂದ ಪರಮೇಶ್ವರ ಭಟ್ಟರು ಆಧುನಿಕ ಕಾಳಿದಾಸ’ ಎಂದು ಬಣ್ಣಿಸಿದರು.

ಅನುವಾದಕ್ಕೆ ಯೋಜನೆ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ‘ಪರಮೇಶ್ವರ ಭಟ್ಟರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ಕೃತಿಗಳ ಅನುವಾದಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಕಟಿಸಿದರು.

ಈಗ ಭಟ್ಟರ ಸಮಗ್ರ ಸಾಹಿತ್ಯವನ್ನು ಏಳು ಸಂಪುಟಗಳಲ್ಲಿ ಪ್ರಕಟಿಸಿರುವುದು ರಾಜ್ಯ ಸರ್ಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಗೌರವ ತರುವ ಸಂಗತಿಯಾಗಿದೆ. ಈ ವರ್ಷ ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿ ಪರಮೇಶ್ವರ ಭಟ್ಟರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದೊಂದು ಕಾರ್ಯಕ್ರಮ ಆಯೋಜಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಂಪಾದಕ ಮಂಡಳಿಯ ಸದಸ್ಯರೂ ಆಗಿರುವ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿದರು. ಸೇಂಟ್‌ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟಿಸ್‌, ಎಸ್‌.ವಿ.ಪರಮೇಶ್ವರ ಭಟ್ಟರ ಮಗ ಎಸ್‌.ಪಿ.ರಾಮಚಂದ್ರ ಮತ್ತು ಅವರ ಪತ್ನಿ ಉಷಾ ರಾಮಚಂದ್ರ ಉಪಸ್ಥಿತರಿದ್ದರು. ಸಂಪಾದಕ ಮಂಡಳಿಯ ಸದಸ್ಯರಾದ ನಾ.ದಾಮೋದರ ಶೆಟ್ಟಿ, ಚಂದ್ರಕಲಾ ನಂದಾವರ, ಶಿವಾಜಿ ಜೋಯಿಸ್‌, ಡಾ.ನರಸಿಂಹಮೂರ್ತಿ ಆರ್‌. ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.