ಸಹನೆಯಿಂದ ವ್ಯಕ್ತಿತ್ವಕ್ಕೆ ಘನತೆ: ಸ್ವಾಮೀಜಿ

ಕೆಂಗೇರಿ: ‘ಸಹನೆಯು ವ್ಯಕ್ತಿಯನ್ನು ಗರ್ಭಗುಡಿಯ ಮೂರ್ತಿಯನ್ನಾಗಿಸುತ್ತದೆ. ತಾಳ್ಮೆಗೆಟ್ಟರೆ ದೇವಾಲಯದ ಮೆಟ್ಟಿಲಾಗುವುದೂ ಅಸಾಧ್ಯ’ ಎಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಕನಕ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಲಾಗಿರುವ ಭುವನೇಶ್ವರಿ ಒಕ್ಕಲಿಗ ಮಹಿಳಾ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಹಾಗೂ ಪುರುಷನ ಉನ್ನತಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ತರವಾದುದು. ಅರವಿಂದ ಘೋಷರು, ರಾಮಕೃಷ್ಣ ಪರಮಹಂಸ, ಬುದ್ಧರಂತ ದೇವ ಸ್ವರೂಪಿಗಳ ಸಾಧನೆಯ ಹಿಂದೆ ಮಹಿಳೆಯರ ಕೊಡುಗೆ ಅಪಾರ. ಸಮಾಜದ ಬೆಂಬಲದೊಂದಿಗೆ ಏಳಿಗೆ ಹೊಂದಿದವರು ಸಮಾಜಕ್ಕೆ ಮರು ಕಾಣಿಕೆ ನೀಡಬೇಕು. ಆಗ ಮಾತ್ರ ನಮ್ಮ ಜೀವನಕ್ಕೆ ನಿಜವಾದ ಅರ್ಥ ದೊರೆಯುತ್ತದೆ’ ಎಂದು ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾತನ್ನು ಸ್ಮರಿಸಿದರು.
‘ಮಹಿಳೆಯರು ಮಾನಸಿಕವಾಗಿ ಪುರಷರಿಗಿಂತ ಹೆಚ್ಚು ಸದೃಢರಾಗಿದ್ದಾರೆ. ಒಕ್ಕಲಿಗ ಮಹಿಳಾ ಸಂಘವು ನಿರ್ಮಿಸಿರುವ ಈ ನೂತನ ಕಟ್ಟಡವೇ ಸ್ತೀಯರ ಆತ್ಮವಿಶ್ವಾಸಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ’ ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದರು.
ಮಹಿಳಾ ಸಂಘದ ಅಧ್ಯಕ್ಷೆ ಮಹಾದೇವಮ್ಮ ಮಾತನಾಡಿ, ಸಂಘದ ನಿರ್ಮಾಣದಿಂದ ಮಹಿಳೆಯರು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಕಟ್ಟಡದಲ್ಲಿ ವಾಚನಾಲಯ ಹಾಗೂ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗುವುದು. ಇದರಿಂದ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಹಾಯಕವಾಗುತ್ತದೆ ಎಂದು ಹೇಳಿದರು. ಬಿಬಿಎಂಪಿ ಸದಸ್ಯ ಎಲ್. ಶ್ರೀನಿವಾಸ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.