ಆರ್ಥಿಕ ಬೆಳವಣಿಗೆಗೆ ಆದ್ಯತೆ ಆರ್‌ಬಿಐನ ನಿಲುವು ಬದಲು

7

ಆರ್ಥಿಕ ಬೆಳವಣಿಗೆಗೆ ಆದ್ಯತೆ ಆರ್‌ಬಿಐನ ನಿಲುವು ಬದಲು

Published:
Updated:
Prajavani

ಭಾರತೀಯ ರಿಸರ್ವ್‌ ಬ್ಯಾಂಕ್‌, ನಿರೀಕ್ಷೆಗೆ ವ್ಯತಿರಿಕ್ತವಾಗಿ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸಿ ಅಚ್ಚರಿ ಮೂಡಿಸಿದೆ. ಹದಿನೆಂಟು ತಿಂಗಳಲ್ಲಿ ಮೊದಲ ಬಾರಿಗೆ ತನ್ನ ಆಕ್ರಮಣಕಾರಿ ಧೋರಣೆ ಕೈಬಿಟ್ಟು ಮೃದು ನಿಲುವು ತಳೆದಿದೆ. ಹಣದುಬ್ಬರ ನಿಯಂತ್ರಣಕ್ಕೆ ಮಹತ್ವ ನೀಡುವುದರ ಬದಲಿಗೆ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಸ್ಪಷ್ಟ ಸಂದೇಶ ರವಾನಿಸಿರುವುದು ಹೊಸ ಬೆಳವಣಿಗೆ. ಡಿಸೆಂಬರ್‌ ತಿಂಗಳಲ್ಲಿ ಹಣದುಬ್ಬರವು 18 ತಿಂಗಳ ಹಿಂದಿನ ಕನಿಷ್ಠ ಮಟ್ಟವಾದ ಶೇ 2.2ಕ್ಕೆ ತಗ್ಗಿರುವುದು ಮತ್ತು ಮುಂಬರುವ ದಿನಗಳಲ್ಲಿ ಹಿತಕರ ಮಟ್ಟದಲ್ಲಿಯೇ ಮುಂದುವರಿಯುವ ಸಾಧ್ಯತೆಯ ಕಾರಣಕ್ಕೆ ಬಡ್ಡಿ ದರ ತಗ್ಗಿಸುವ ನ್ಯಾಯೋಚಿತ ನಿರ್ಧಾರಕ್ಕೆ ಬಂದಿದೆ. ಬಡ್ಡಿ ದರ ಹೆಚ್ಚಿಸುವ ಇಲ್ಲವೇ ಗರಿಷ್ಠ ಮಟ್ಟದ ಯಥಾಸ್ಥಿತಿ ಕಾಯ್ದುಕೊಳ್ಳುವ ನಿಲುವಿಗೆ ಅಂಟಿಕೊಳ್ಳುವ ಧೋರಣೆಯನ್ನು ಕೇಂದ್ರೀಯ ಬ್ಯಾಂಕ್‌ ಕೈಬಿಟ್ಟಿದೆ. ವಸ್ತುನಿಷ್ಠ ನಿಲುವು ತಳೆದಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಗೃಹ, ವಾಹನ, ವೈಯಕ್ತಿಕ ಮತ್ತು ಕಾರ್ಪೊರೇಟ್‌ ವಲಯದ ಸಾಲಗಳ ಬಡ್ಡಿ ದರ ಮತ್ತು ತಿಂಗಳ ಸಮಾನ ಕಂತಿನ (ಇಎಂಐ) ಹೊರೆ ಕಡಿಮೆಯಾಗಲಿದೆ. ಸಾಲಗಾರರಿಗೆ ಇದೊಂದು ಶುಭ ಸುದ್ದಿಯಾಗಿದೆ. ಆದರೆ, ಗೃಹ ಸಾಲಕ್ಕೆ ಸಂಬಂಧಿಸಿದಂತೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಕೇವಲ ಶೇ 0.05ರಷ್ಟು ಬಡ್ಡಿ ದರ ಕಡಿತ ಮಾಡಿವೆ. ಇತರ ಬ್ಯಾಂಕ್‌ಗಳೂ ಇದೇ ಧೋರಣೆ ಅನುಸರಿಸಿದರೆ ಅದರಿಂದ ಸಾಲಗಾರರಿಗೆ ಹೆಚ್ಚಿನ ಪ್ರಯೋಜನ ದೊರೆಯದು. ಆರ್‌ಬಿಐನ ಉದಾರ ಧೋರಣೆಯನ್ನು ಇತರ ಬ್ಯಾಂಕ್‌ಗಳು ಅನುಸರಿಸದೇ ಹೋದರೆ, ವಿವಿಧ ಸಾಲಗಳ ಬಡ್ಡಿ ದರ ಅಗ್ಗವಾಗಲು ಇನ್ನೂ ಕೆಲ ದಿನ ಕಾಯಬೇಕಾಗುತ್ತದೆ.

ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರಕಟಿಸಿದ ಮೊದಲ ದ್ವೈಮಾಸಿಕ ಹಣಕಾಸು ನೀತಿ
ಪರಾಮರ್ಶೆಯಲ್ಲಿ ಆರ್ಥಿಕ ಬೆಳವಣಿಗೆಗೆ ನೆರವಾಗುವ ಹಲವು ನಿರ್ಧಾರ ಕೈಗೊಂಡಿದ್ದಾರೆ. ಕಾರ್ಪೊರೇಟ್‌ ವಲಯದ ಸಾಲಕ್ಕೆ ಸಂಬಂಧಿಸಿದಂತೆ ಹಲವಾರು ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ. ಇದರಿಂದ ಉದ್ದಿಮೆ ಸಂಸ್ಥೆಗಳಿಗೆ ಸುಲಭವಾಗಿ ಸಾಲ ಸಿಗಲಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಸಾಲ ಎತ್ತುವುದನ್ನು, ವಿದೇಶಿ ಹೂಡಿಕೆದಾರರು ಕಾರ್ಪೊರೇಟ್‌ ರಂಗದ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸಿದೆ. ದೇಶಿ ಬ್ಯಾಂಕಿಂಗ್‌ ಕ್ಷೇತ್ರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಹಣಕಾಸು ಮಾರುಕಟ್ಟೆಯಲ್ಲಿನ ನಗದು ಕೊರತೆ ಭೀತಿ ದೂರ ಮಾಡಲಿದೆ. ಜಾಮೀನುಮುಕ್ತ ಕೃಷಿ ಸಾಲದ ಮಿತಿಯನ್ನು ಸದ್ಯದ ₹ 1 ಲಕ್ಷದಿಂದ ₹ 1.60 ಲಕ್ಷಕ್ಕೆ ಹೆಚ್ಚಿಸಿದೆ. ಸಣ್ಣ ಮತ್ತು ಬಡ ರೈತರನ್ನು ಔಪಚಾರಿಕ ಬ್ಯಾಂಕಿಂಗ್‌ ವ್ಯವಸ್ಥೆಗೆ ತರುವ ಈ ಪ್ರಯತ್ನ ಕೃಷಿ ಆರ್ಥಿಕತೆಯ ಚೇತರಿಕೆಗೆ ಇಂಬು ನೀಡಲಿದೆ. ಮುಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಆರ್ಥಿಕ ವೃದ್ಧಿ ದರ ಕಡಿಮೆಯಾಗಿರಲಿದೆ (ಶೇ 7.2ರಿಂದ ಶೇ 7.4) ಎಂದು ಆರ್‌ಬಿಐ ಅಂದಾಜಿಸಿದೆ. ಹೀಗಾಗಿ ಆರ್ಥಿಕತೆಗೆ ಉತ್ತೇಜನ ನೀಡುವ ಈ ನಿರ್ಧಾರ ಅನಿವಾರ್ಯವಾಗಿತ್ತು. ಜಾಗತಿಕ ಆರ್ಥಿಕ ಬೆಳವಣಿಗೆಯು ಸಾಧಾರಣ ಮಟ್ಟದಲ್ಲಿ ಇರುವುದು, ಬಲಿಷ್ಠ ಆರ್ಥಿಕತೆಗಳ ನಡುವಣ ವಾಣಿಜ್ಯ ಉದ್ವಿಗ್ನತೆಯಂತಹ ಬಾಹ್ಯ ಪ್ರತಿಕೂಲಗಳು, ದೇಶದಲ್ಲಿ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಇರುವುದರಿಂದ ಬಡ್ಡಿ ದರ ಕಡಿತ ಅನಿವಾರ್ಯವಾಗಿತ್ತು. ಸಮಾಜದ ಎಲ್ಲ ವರ್ಗದವರನ್ನು ಓಲೈಸುವ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌ ಬೆನ್ನಲ್ಲೇ ಪ್ರಕಟವಾಗಿರುವ ಬಡ್ಡಿ ದರ ಕಡಿತ ನಿರ್ಧಾರವು ಬಳಲಿರುವ ಆರ್ಥಿಕತೆಯನ್ನು ಬಡಿದೆಬ್ಬಿಸಲು ಖಂಡಿತವಾಗಿಯೂ ನೆರವಾಗಲಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !