ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳು ಮಂದಿ ವಿರುದ್ಧ ಆರೋಪಪಟ್ಟಿ

ಶುಕ್ರವಾರ, ಮಾರ್ಚ್ 22, 2019
26 °C
ತಣ್ಣೀರುಬಾವಿ ಸಮೀ‍ಪದ ತೋಟ ಬೆಂಗರೆಯಲ್ಲಿ ನಡೆದಿದ್ದ ಕರಾಳ ಘಟನೆ

ಸಾಮೂಹಿಕ ಅತ್ಯಾಚಾರ ಪ್ರಕರಣ: ಏಳು ಮಂದಿ ವಿರುದ್ಧ ಆರೋಪಪಟ್ಟಿ

Published:
Updated:

ಮಂಗಳೂರು: 2018ರ ನವೆಂಬರ್‌ನಲ್ಲಿ ನಗರದ ಹೊರವಲಯದ ತಣ್ಣೀರುಬಾವಿ ಸಮೀಪದ ತೋಟ ಬೆಂಗರೆಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮಹಿಳಾ ಠಾಣೆ ಪೊಲೀಸರು, ಮೂವರು ಅಪ್ರಾಪ್ತರೂ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ನವೆಂಬರ್‌ ತಿಂಗಳಿನಲ್ಲಿ ಯುವತಿಯೊಬ್ಬಳು ಸ್ನೇಹಿತನೊಂದಿಗೆ ತೋಟ ಬೆಂಗರೆಗೆ ವಿಹಾರಕ್ಕೆ ಬಂದಿದ್ದಳು. ಯುವಕನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ ಆರೋಪಿಗಳು, ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೆಲವು ದಿನಗಳ ಬಳಿಕ ಮಾಹಿತಿ ಆಧರಿಸಿ ಸಂತ್ರಸ್ತೆಯನ್ನು ಪತ್ತೆಮಾಡಿದ್ದ ನಗರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಪ್ರಕರಣ ತನಿಖೆಯನ್ನು ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸರಿಗೆ ಒಪ್ಪಿಸಲಾಗಿತ್ತು. ಕೆಲವು ದಿನಗಳ ಹಿಂದೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಸಾಮೂಹಿಕ ಅತ್ಯಾಚಾರ, ಸಂತ್ರಸ್ತೆಯ ಗುರುತು ಬಹಿರಂಗಪಡಿಸಿರುವುದು, ಹಲ್ಲೆ ನಡೆಸಿ, ಗಾಯಗೊಳಿಸಿರುವುದು, ಮಹಿಳೆಯ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದು, ಅತಿಕ್ರಮ ಪ್ರವೇಶ ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

ಆರೋಪಿಗಳ ಪರವಾಗಿ ವಕಾಲತ್ತು ವಹಿಸದೇ ಇರಲು ಮಂಗಳೂರಿನ ವಕೀಲರು ನಿರ್ಧರಿಸಿದ್ದರು. ಇದರಿಂದಾಗಿ ನಾಲ್ವರು ವಯಸ್ಕ ಾರೋಪಿಗಳು ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ಆರೋಪ ಸಾಬೀತಾದಲ್ಲಿ ಇವರು ಜೀವನದ ಕೊನೆಯವರೆಗೂ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎನ್ನುತ್ತವೆ ಜಿಲ್ಲಾ ನ್ಯಾಯಾಲಯದ ಮೂಲಗಳು.

ಅಪ್ರಾಪ್ತರಿಗೆ ಜಾಮೀನಿಗೆ ವಿರೋಧ

ಈ ನಡುವೆ ಮೂವರು ಅಪ್ರಾಪ್ತರಿಗೆ ಜಿಲ್ಲೆಯ ಬಾಲ ನ್ಯಾಯ ಮಂಡಳಿ ಜಾಮೀನು ಮಂಜೂರು ಮಾಡಿದ್ದು, ಬಂಧನದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಬಾಲ ನ್ಯಾಯ ಮಂಡಳಿಯ ನಿರ್ಧಾರಕ್ಕೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಡಳಿಯ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ ಇಲಾಖೆಯ ಉಪ ನಿರ್ದೇಶಕರ ಮುಖಾಂತರ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಿಲ್ಲ. ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಬಾಲ ನ್ಯಾಯ ಮಂಡಳಿಯು ಅಪ್ರಾಪ್ತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿತರು ಕ್ರಿಮಿನಲ್‌ ಹಿನ್ನೆಲೆಯ ವ್ಯಕ್ತಿಗಳ ಸಂಪರ್ಕಕ್ಕೆ ಬರುವ ಸಾಧ್ಯತೆ ಇದ್ದಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್‌ 12 ಸ್ಪಷ್ಟವಾಗಿ ಹೇಳುತ್ತದೆ. ಅದನ್ನು ಮೀರಿ ನ್ಯಾಯಮಂಡಳಿ ನಿರ್ಧಾರ ಕೈಗೊಂಡಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಆರೋಪಿತರ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನೂ ಗಣನೆಗೆ ತೆಗೆದುಕೊಳ್ಳಬೇಕು (ಈ ಪ್ರಕರಣದಲ್ಲಿ ಆರೋಪಿತರು 16 ವರ್ಷ ಮೇಲಿನವರು) ಎಂದು ಸೆಕ್ಷನ್‌ 15ರಲ್ಲಿ ಹೇಳಲಾಗಿದೆ. ಅವರನ್ನು ಕಾನೂನಿನ ಎದುರು ಸಂಘರ್ಷಕ್ಕೆ ಒಳಗಾದವರು ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಯಲ್ಲಿ ವಿಚಾರಣೆ ನಡೆಸಬೇಕೆ? ಅಥವಾ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಬೇಕೆ? ಎಂಬುದೂ ಇತ್ಯರ್ಥವಾಗಬೇಕಿದೆ’ ಎಂಬುದಾಗಿ ಆಕ್ಷೇಪಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಾಸಿಕ್ಯೂಷನ್‌ ಇಲಾಖೆಯ ನಿರ್ದೇಶಕರ ಮುಂದೆ ಈ ಪ್ರಸ್ತಾವ ಬಾಕಿ ಇದ್ದು, ಮೇಲ್ಮನವಿ ಸಲ್ಲಿಸುವ ಸಂಬಂಧ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !