ರೈ ಸೇರಿ 6 ಮಂದಿ ವಿರುದ್ಧ ಪ್ರಕರಣ

ಸೋಮವಾರ, ಮಾರ್ಚ್ 25, 2019
24 °C
ವಿಧಾನಸಭೆ ಚುನಾವಣೆ ವೇಳೆ ಹಣ ಸಂಗ್ರಹ ಆರೋಪ

ರೈ ಸೇರಿ 6 ಮಂದಿ ವಿರುದ್ಧ ಪ್ರಕರಣ

Published:
Updated:
Prajavani

ಮಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಂಚುವ ಉದ್ದೇಶದಿಂದ ₹ 62 ಲಕ್ಷ ನಗದನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಮಾಜಿ ಸಚಿವ ಬಿ.ರಮಾನಾಥ ರೈ ಸೇರಿದಂತೆ ಆರು ಮಂದಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಆಧರಿಸಿ ಬಂಟ್ವಾಳ ತಹಶೀಲ್ದಾರ್‌ ಸಣ್ಣರಂಗಯ್ಯ ಪೊಲೀಸ್‌ ಠಾಣೆಗ ದೂರು ನೀಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾ ಪ್ರತಿನಿಧಿ ಕಾಯ್ದೆ–1951ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಬಾಬು ತಿಳಿಸಿದ್ದಾರೆ.

ಗುತ್ತಿಗೆದಾರರಾದ ಬೆಂಗಳೂರಿನ ನಿರ್ಮಾಣ್‌ ಕನ್‌ಸ್ಟ್ರಕ್ಷನ್ಸ್‌ನ ಉದಯ ಹೆಗ್ಡೆ, ಮಂಗಳೂರಿನ ಪದವಿನಂಗಡಿಯ ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಸುಧಾಕರ ಶೆಟ್ಟಿ, ಮುಗರೋಡಿ ಕನ್‌ಸ್ಟ್ರಕ್ಷನ್ಸ್‌ನ ಅಕೌಂಟೆಂಟ್‌ ವರುಣ, ನೌಕರ ಪ್ರೀತೇಶ್‌, ರಮಾನಾಥ ರೈ ಅವರ ಆಪ್ತ ಸಹಾಯಕರಾಗಿದ್ದ ಡೆಂಝಿಲ್‌ ಹರ್ಮನ್‌ ಮತ್ತು ರಮಾನಾಥ ರೈ ಅವರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.

ಮಾರ್ಚ್‌ 3ರಂದು ಸುಧಾಕರ ಶೆಟ್ಟಿ ಅವರ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ₹ 22 ಲಕ್ಷ ನಗದು ವಶಪಡಿಸಿಕೊಂಡಿದ್ದರು. ಬಿ.ಸಿ.ರೋಡ್‌ನಲ್ಲಿರುವ ಶ್ರೀನಿವಾಸ ಲಾಡ್ಜ್‌ ಮೇಲೆ ದಾಳಿ ಮಾಡಿದ್ದ ಇನ್ನೊಂದು ತಂಡ ಡೆಂಝಿಲ್‌ ಹರ್ಮನ್‌ ಬಳಿ ₹ 40 ಲಕ್ಷ ನಗದು ವಶಪಡಿಸಿಕೊಂಡಿತ್ತು.

‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಲ್ಲರ ವಿಚಾರಣೆ ನಡೆಸಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಹಂಚಲು ಹಣ ಸಂಗ್ರಹಿಸಿಟ್ಟುಕೊಂಡಿದ್ದರು ಎಂಬುದು ಕಂಡುಬಂದಿದೆ. ಈ ಎಲ್ಲರೂ ಚುನಾವಣಾ ಅಕ್ರಮ ನಡೆಸಿರುತ್ತಾರೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದರು. ಅದರೊಂದಿಗೆ ವಶಕ್ಕೆ ಪಡೆದಿದ್ದ ನಗದು ಮತ್ತು ದಾಖಲೆಗಳನ್ನು ಹಸ್ತಾಂತರಿಸಿದ್ದರು’ ಎಂದು ಎಸ್‌ಪಿ ತಿಳಿಸಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು. ಆ ಬಳಿಕ ಬಂಟ್ವಾಳ ತಹಶೀಲ್ದಾರ್‌ ಸಣ್ಣರಂಗಯ್ಯ ಅವರು ಬಂಟ್ವಾಳ ಜೆಎಂಎಫ್‌ ನ್ಯಾಯಾಲಯದಿಂದ ಅನುಮತಿ ಪಡೆದು ಮಂಗಳವಾರ ದೂರು ಸಲ್ಲಿಸಿದ್ದರು. ನಂತರ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !