ಗೌರವ ಕೊಡದಿದ್ದರೆ ಸರ್ಕಾರ ನಡೆಯುವುದು ಕಷ್ಟ: ಶಾಸಕ ಸುಧಾಕರ್‌ ಅಸಮಾಧಾನ

ಸೋಮವಾರ, ಮಾರ್ಚ್ 18, 2019
31 °C

ಗೌರವ ಕೊಡದಿದ್ದರೆ ಸರ್ಕಾರ ನಡೆಯುವುದು ಕಷ್ಟ: ಶಾಸಕ ಸುಧಾಕರ್‌ ಅಸಮಾಧಾನ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಮ್ಮಿಶ್ರ ಸರ್ಕಾರ ಸಮನ್ವಯತೆ, ಸಂಯಮ ಪಾಲಿಸಿಕೊಂಡು ಹೋಗಬೇಕು. 80 ಸ್ಥಾನ ಹೊಂದಿರುವ ಕಾಂಗ್ರೆಸ್‌ ಪಕ್ಷದ ವರಿಷ್ಠರ ಮಾತಿಗೆ ಜೆಡಿಎಸ್‌ನವರೂ ಗೌರವ, ಮನ್ನಣೆ ಕೊಡಬೇಕು. ಇಲ್ಲವಾದರೆ ಸರ್ಕಾರ ನಡೆಯುವುದು ಕಷ್ಟವಾಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಗಂಗರೇಕಾಲುವೆಯಲ್ಲಿ ಶನಿವಾರ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ಥಳೀಯ ಜೆಡಿಎಸ್‌ ನಾಯಕರು ನನಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಅವರಿಗೆ ಒಂದಲ್ಲ ಮೂರು ಬಾರಿ ಮತ ಕೊಟ್ಟು ಮುಖ್ಯಮಂತ್ರಿ ಆಗಿ ಉಳಿಸಿದ್ದೇವೆ. ನಮಗೆ ಏಕೆ ನೈತಿಕತೆ ಇಲ್ಲವೆ? ಮುಖ್ಯಮಂತ್ರಿ ಅವರಿಂದ ನಾನೇನು ಶಾಸಕನಾಗಿಲ್ಲ’ ಎಂದು ತಿಳಿಸಿದರು.

ಇದನ್ನೂ ಓದಿ... ಪುಟಗೋಸಿ ಚೇರ್ಮನ್‌ ಹುದ್ದೆ ಕೇಳಿರಲಿಲ್ಲ

‘ನಾನು ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಕೇಳಿರಲಿಲ್ಲ. ಆದರೂ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪಕ್ಷದ ಮುಖಂಡರು ನನ್ನನ್ನು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷನನ್ನಾಗಿ ಘೋಷಿಸಿದರು. ಅದಾಗಿ ಕಳೆದ 70 ದಿನಗಳಲ್ಲಿ ನಡೆದ ಹಲವಾರು ಸಮನ್ವಯ ಸಮಿತಿ ಸಭೆಗಳಲ್ಲಿ ಕುಮಾರಸ್ವಾಮಿ ಅವರು ನನ್ನನ್ನು ಅಧ್ಯಕ್ಷನನ್ನಾಗಿ ಮಾಡುತ್ತೇವೆ ಎಂದು ಹೇಳಿಯೂ, ಮಾಡಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಹಿ ಮಾಡಿದ ಆದೇಶಕ್ಕೆ ಅವರು ಮಾನ್ಯತೆ ಕೊಡಲಿಲ್ಲ ಎಂದು ನನಗೆ ನೋವಿದೆ’ ಎಂದರು.

‘ಕೇವಲ 37 ಕ್ಷೇತ್ರಗಳಲ್ಲಿ ಜೆಡಿಎಸ್‌ ಗೆದ್ದಿದೆ. ಈ ಫಲಿತಾಂಶ ನೋಡಿದ ಮೇಲೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು. ಆದರೆ ರಾಜ್ಯದಲ್ಲಿ ಕೋಮುಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಕಾರಣಕ್ಕೆ ರಾಹುಲ್‌ ಗಾಂಧಿ ಅವರು ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಟ್ಟರು. ಅಂತಹವರ ಮಾತಿಗೆ ನೀವು ಬೆಲೆ ಕೊಡಲಿಲ್ಲ ಎಂಬುದು ನಮ್ಮ ಖೇದ’ ಎಂದು ಹೇಳಿದರು.

‘ನಾನು ಸುಮ್ಮನೆ ಇರಬಹುದು. ಬೇರೆಯವರು ಸುಮ್ಮನೆ ಇರುವುದಿಲ್ಲ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವ ವಹಿಸಿಕೊಂಡ ಮೇಲೆ ಕೆಲಸ ಮಾಡದೆ ಹೋದರೆ ಕಷ್ಟವಾಗುತ್ತದೆ. ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಈ ಭಾಗದಲ್ಲಿ ಮುಂದಿನ ದಿನಗಳು ಅತ್ಯಂತ ಕ್ರೂರವಾಗಿರುತ್ತವೆ. ಅಲ್ಲಿಯವರೆಗೆ ಹೋಗುವುದು ಸರ್ಕಾರ ತಪ್ಪಿಸಬೇಕು. ಇದನ್ನು ಮನಗಾಣದೆ ಹೋದರೆ ಅವರಿಗೂ ಕಷ್ಟದ ಕಾಲ ಬರುತ್ತದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 21

  Happy
 • 2

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !