ಭಾನುವಾರ, ಮಾರ್ಚ್ 29, 2020
19 °C

ಮುಂಬೈಗೆ ಹೀಗೊಂದು ಪ್ರೇಮಪತ್ರ...

ವಿಶಾಖ ಎನ್.   Updated:

ಅಕ್ಷರ ಗಾತ್ರ : | |

Prajavani

ಚಿತ್ರ: ಫೋಟೊಗ್ರಾಫ್ (ಹಿಂದಿ)
ನಿರ್ಮಾಣ: ರಿತೇಶ್ ಬಾತ್ರಾ, ರಾನಿ ಸ್ಕ್ರೂವಾಲಾ ಮತ್ತು ಇತರರು
ನಿರ್ದೇಶನ: ರಿತೇಶ್ ಬಾತ್ರಾ
ತಾರಾಗಣ: ನವಾಜುದ್ದೀನ್ ಸಿದ್ದಿಕಿ, ಸಾನ್ಯಾ ಮಲ್ಹೋತ್ರ, ಫರೂಕ್ ಜಫರ್, ಗೀತಾಂಜಲಿ ಕುಲಕರ್ಣಿ

‘ಲಂಚ್ ಬಾಕ್ಸ್’ ಹಿಂದಿ ಸಿನಿಮಾ ಮೂಲಕ ಪರಸ್ಪರ ನೋಡದ ಎರಡು ಜೀವಗಳ ಕಕ್ಕುಲಾತಿಯ ಕಥೆಯನ್ನು ಹೇಳಿದ್ದ ರಿತೇಶ್ ಬಾತ್ರಾ, ‘ಫೋಟೊಗ್ರಾಫ್‌’ನಲ್ಲಿ ಅಂಥದ್ದೇ ಜಾಯಮಾನದ ಇನ್ನೊಂದು ಭಾವಾನುರಾಗ ತುಳುಕಿಸಿದ್ದಾರೆ. ಇಲ್ಲಿ ಮುಂಬೈಗೆ ಒಂದು ಪ್ರೇಮಪತ್ರ ಬರೆವಂಥ ಮಾರ್ಗವಿದೆ. ಹೆಸರಿಗೆ ತಕ್ಕಂತೆ ಒಂದಿಷ್ಟು ಫೋಟೊಗಳನ್ನು ಹರಡಿಬಿಟ್ಟರೆ, ನೋಡುಗರಲ್ಲಿ ಮೂಡಬಹುದಾದ ಭಾವಗಳನ್ನೇ ಈ ಚಲನಚಿತ್ರ ಮೂಡಿಸುತ್ತದೆ; ಅದೂ ಬಿಡಿಬಿಡಿಯಾಗಿ.

ಅತಿ ಸೂಕ್ಷ್ಮ, ಕನಿಷ್ಠತಾವಾದಿ (ಮಿನಿಮಲಿಸ್ಟಿಕ್) ಧೋರಣೆಯ ಈ ರೀತಿಯ ಚಿತ್ರಗಳಿಗೆ ಮಿತಿಯೂ ಇರುತ್ತದೆ. ಅದು ಸಿನಿಮಾದ ಗತಿಗೆ ಸಂಬಂಧಿಸಿದ್ದು. ಚೆಲ್ಲಾಪಿಲ್ಲಿ ದೃಶ್ಯಗಳ ನೇಯ್ಗೆಯ ಮೂಲಕ ಭಾವಮುಚ್ಚಟೆಯಲ್ಲಿ ತೊಡಗುವುದು ನಿರ್ದೇಶಕರ ಉಮೇದು.

ನಾಯಕ ರಫಿ ಗೇಟ್‌ವೇ ಆಫ್‌ ಇಂಡಿಯಾ ಎದುರು ಜನರ ಫೋಟೊ ತೆಗೆಯುವ ಫೋಟೊಗ್ರಾಫರ್. ಒಂದು ದಿನ ನಾಯಕಿಯ ಫೋಟೊ ತೆಗೆಯುತ್ತಾನೆ. ಅದನ್ನು ಇಸಿದುಕೊಳ್ಳದೆ ನಾಯಕಿ ಮನೆಯವರ ಜತೆ ಹೊರಟುಬಿಡುತ್ತಾಳೆ.

ಮದುವೆಗೆ ಒಪ್ಪದೇ ಇದ್ದರೆ ಗುಳಿಗೆ ತೆಗೆದುಕೊಳ್ಳುವುದನ್ನು ನಿಲ್ಲಿಸುವುದಾಗಿ ದೂರದ ಹಳ್ಳಿಯಲ್ಲಿರುವ ರಫಿಯ ಅಜ್ಜಿ ಅವತ್ತೇ ಧಮಕಿ ಹಾಕುತ್ತಾಳೆ. ಅಜ್ಜಿಯನ್ನೂ ತೃಪ್ತಪಡಿಸಿ, ತಾನು ಮದುವೆಯ ಬೀಸುದೊಣ್ಣೆಯಿಂದ ಪಾರಾಗಲೆಂದು ನಾಯಕ ತನ್ನ ಬಳಿಯೇ ಉಳಿದ ನಾಯಕಿಯ ಫೋಟೊವನ್ನೇ ಅಜ್ಜಿಗೆ ಕಳುಹಿಸಿ, ಅದರೊಟ್ಟಿಗೆ ಮದುವೆಯಾಗಲು ತಾನು ಮುಂದಾಗಿರುವ ಕುರಿತು ಒಂದು ಪತ್ರವನ್ನೂ ಬರೆಯುತ್ತಾನೆ. ಅಷ್ಟು ಚೆಂದದ ಹುಡುಗಿ ಸೊಸೆಯಾಗಲಿದ್ದಾಳೆ ಎಂದು ತಿಳಿದ ಅಜ್ಜಿಯ ಜೀವ ನಿಲ್ಲುವುದಿಲ್ಲ. ಮುಂಬೈಗೆ ಹೊರಡುತ್ತಾಳೆ. ನಾಯಕನು ವಿಧಿಯಿಲ್ಲದೆ ತನ್ನ ಅಜ್ಜಿಯನ್ನು ಭೇಟಿಯಾಗುವಂತೆ ನಾಯಕಿಯನ್ನು ಒಪ್ಪಿಸುತ್ತಾನೆ. ಚಾರ್ಟರ್ಡ್‌ ಅಕೌಂಟೆಂಟ್ ಆಗಲು ಹೊರಟಿರುವ ನಾಯಕಿ ಪೂರ್ವಭಾವಿ ಪರೀಕ್ಷೆಯಲ್ಲಿ ಟಾಪರ್. ಮನೆಯಲ್ಲಿ ಅಪ್ಪ–ಅಮ್ಮ ಹೆಚ್ಚೇ ಆರೈಕೆಯಿಂದ ಮುದ್ದು ಮಾಡಿ ಬೆಳೆಸಿದ ಕೂಸು. ಹೀಗೆ, ಒಂದೇ ನಗರದ ಎರಡು ಭಿನ್ನ ಸಾಮಾಜಿಕ ಬಿಂದುಗಳ ನಡುವೆ ನಿರ್ದೇಶಕರು ಕಕ್ಕುಲಾತಿಯ ಗೆರೆಯೊಂದನ್ನು ಎಳೆಯುತ್ತಾರೆ.

ಸಿನಿಮಾದಲ್ಲಿ ಕೆಟ್ಟ ಪಾತ್ರಗಳೇ ಇಲ್ಲ. ನಾಯಕನ ಸ್ನೇಹಿತರು ತಮಾಷೆ ಮಾಡಿದರೂ, ರುಟೀನಿನಲ್ಲೇ ಕಳೆದುಹೋದವರಾದರೂ ಅವರ ಸಣ್ಣ ಸಣ್ಣ ಖುಷಿ, ಪ್ರಾಮಾಣಿಕತೆಗಳೇ ಚಿತ್ರಭಿತ್ತಿಯನ್ನು ಸಿಂಗರಿಸುತ್ತವೆ. ನಾಯಕ ಹಾಗೂ ಆತನ ಅಜ್ಜಿಯ ನಡುವಿನ ಸಹಜ ಬಾಂಧವ್ಯ, ತನಗೆ ಹೊಸತೇ ಆದ ಜಗತ್ತನ್ನು ಕಂಡು ಕಣ್ಣರಳಿಸುವ ನಾಯಕಿಯ ಮುಗ್ಧತೆ, ಹಳ್ಳಿ ಬದುಕಿಗೆ ತುಡಿಯುವ ಅವಳ ಮನದ ಅನಾವರಣ ಎಲ್ಲವನ್ನೂ ತಣ್ಣಗಿನ ಭಾವತೀವ್ರತೆಯಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ಬೆನ್‌ ಕುಚಿನ್ಸ್, ಟಿಮ್‌ ಗಿಲ್ಲೀಸ್ ಕ್ಯಾಮೆರಾ ಕಣ್ಣುಗಳು ಸಿನಿಮಾಗೆ ಶೀರ್ಷಿಕೆಯ ಅನ್ವಯಾರ್ಥ ದಕ್ಕಿಸಿಕೊಡುವಂತೆ ಕೆಲಸ ಮಾಡಿವೆ. ಒಂದೊಂದೂ ದೃಶ್ಯ ಫೋಟೊಗ್ರಾಫ್‌ನಂತೆಯೇ ಭಾಸವಾಗುತ್ತದೆ. ಪೀಟರ್ ರೇಬರ್ನ್‌ ಹಿನ್ನೆಲೆ ಸಂಗೀತ ಇರದೇ ಹೋಗಿದ್ದರೆ ಸಿನಿಮಾದ ಗತಿ ಇನ್ನೂ ಮಂದವಾಗಿರುತ್ತಿತ್ತು.

ಅಜ್ಜಿ ಪಾತ್ರಧಾರಿ ಫರೂಕ್ ಜಫರ್ ಹಾಗೂ ಕೆಲಸವಳಾಗಿ ಗೀತಾಂಜಲಿ ಕುಲಕರ್ಣಿ ಅಭಿನಯ ಹೆಚ್ಚು ಸಹಜವಾಗಿದೆ. ಅಳೆದು ತೂಗಿದಂತೆ ಭಾವಾಭಿನಯ ಮಾಡಬೇಕಾದ ಸವಾಲನ್ನು ಸಾನ್ಯಾ ಮಲ್ಹೋತ್ರ ಚೆನ್ನಾಗಿ ನಿಭಾಯಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ತಮ್ಮದೇ ಶೈಲಿಯ ‘ಜಡಭರತ’ನಂತೆ ಇಲ್ಲಿಯೂ ಕಾಣುತ್ತಾರೆ. ಈ ಪಾತ್ರಕ್ಕೆ ಇನ್ನಷ್ಟು ಜೀವಂತಿಕೆ ಬೇಕಿತ್ತು.

ನಗರವೊಂದರ ಎರಡು ಸಾಮಾಜಿಕ ಸ್ತರಗಳ ಜನರ ಮನೋವ್ಯಾಪಾರವನ್ನು ಬಿಡಿ ಬಿಡಿ ಚಿತ್ರಿಕೆಗಳ ಮೂಲಕ ಹರಡುವ ನಿರ್ದೇಶಕರು ಯಾವುದೇ ತೀರ್ಮಾನ ಕೊಡಲು ಹೋಗುವುದಿಲ್ಲ. ಹೀಗಾಗಿ ಅಂತ್ಯವೇ ಇಲ್ಲದ ಅವರ ಕಥನ ಹೇಳುವ ಕ್ರಮ ನಮ್ಮ ತಲೆಯೊಳಗೆ ಹುಳು ಬಿಟ್ಟು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು