ಶನಿವಾರ, ಡಿಸೆಂಬರ್ 7, 2019
18 °C
ಜೋಸ್ ಬಟ್ಲರ್ ವಿಕೆಟ್ ಕಿತ್ತ ಅಶ್ವಿನ್

ಐಪಿಎಲ್ ಇತಿಹಾಸದ ಮೊದಲ ‘ಮಂಕಡಿಂಗ್’: ತಾರಕಕ್ಕೇರಿದ ಪರ–ವಿರೋಧ ಚರ್ಚೆ

Published:
Updated:
Prajavani

ನವದೆಹಲಿ: ಸೋಮವಾರ ರಾತ್ರಿ ಜೈಪುರದಲ್ಲಿ ಪಂಜಾಬ್ ಕಿಂಗ್ಸ್ ಇಲೆವನ್ ತಂಡದ ನಾಯಕ, ಆಫ್‌ಸ್ಪಿನ್ನರ್ ಆರ್. ಆಶ್ವಿನ್ ಅವರು ಜಾಸ್ ಬಟ್ಲರ್ ಅವರನ್ನು‘ಮಂಕಡ್‌’ ರೀತಿಯ ರನ್‌ಔಟ್ ಮಾಡಿದ ರೀತಿಯು ಈಗ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ರನ್‌ಔಟ್ ದಾಖಲೆಯಾಗಿದೆ. ಅದೂ ಮಹತ್ವದ ಹಂತದಲ್ಲಿ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡ ರಾಜಸ್ಥಾನ ರಾಯಲ್ಸ್ ತಂಡವು ಪಂದ್ಯವನ್ನೂ 14 ರನ್‌ಗಳಿಂದ ಸೋತಿತು.

13ನೇ ಓವರ್‌ ಬೌಲಿಂಗ್ ಮಾಡುತ್ತಿದ್ದ ಅಶ್ವಿನ್ ಆವರು ಆ್ಯಕ್ಷನ್ ಆರಂಭಿಸುವ ಮುನ್ನವೇ ನಾನ್‌ಸ್ಟ್ರೈಕರ್‌ ತುದಿಯಲ್ಲಿದ್ದ ಬಟ್ಲರ್ ಕ್ರೀಸ್‌ ಬಿಟ್ಟು ಮುಂದೆ ಹೋಗಿದ್ದರು. ಇದನ್ನು ನೋಡಿದ ಅಶ್ವಿನ್ ಎಸೆತದ ಆ್ಯಕ್ಷನ್ ಮಾಡಲಿಲ್ಲ. ಸೀದಾ ಬೇಲ್ಸ್‌ ಎಗರಿಸಿದರು.  ಆದರೆ ಬಟ್ಲರ್ ತಾವು ಔಟಾಗಿದ್ದನ್ನು ಒಪ್ಪಿಕೊಳ್ಳಲಿಲ್ಲ. ಮೂರನೇ ಅಂಪೈರ್ ತೀರ್ಪು ನೀಡಿದ ನಂತರ ಡಗ್‌ಔಟ್‌ಗೆ ಮರಳಿದರು. ಅವರು 43 ಎಸೆತಗಳಲ್ಲಿ 69 ರನ್‌ ಗಳಿಸಿದ್ದರು.

ಹತ್ತು ಬೌಂಡರಿ, ಎರಡು ಸಿಕ್ಸರ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. 185 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ   ಬಟ್ಲರ್ ಆಟದಿಂದ ಗೆಲುವಿನ ಭರವಸೆಯಲ್ಲಿತ್ತು. ಅವರು ಔಟಾದಾಗ ತಂಡವು 12.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 102 ರನ್‌ ಗಳಿಸಿತ್ತು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುವಲ್ಲಿ ಸಫಲರಾಗಲಿಲ್ಲ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಚರ್ಚೆ ನಡೆಯುತ್ತಿದೆ. ಖ್ಯಾತನಾಮ ಕ್ರಿಕೆಟಿಗರ ಪರ–ವಿರೋಧಗಳ ಚರ್ಚೆ ಕಾವೇರಿದೆ.

ಏನಿದು ಮಂಕಡ್ ರನ್‌ಔಟ್?
1947ರ ಡಿಸೆಂಬರ್ 13. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯದಲ್ಲಿ  ‘ಮಂಕಡ್ ರನ್‌ಔಟ್‌’ ದಾಖಲಾಗಿತ್ತು.

ಭಾರತದ ಎಡಗೈ ಸ್ಪಿನ್ನರ್ ವಿನೂ ಮಂಕಡ್ ಅವರು ಬೌಲಿಂಗ್ ಮಾಡುವಾಗ ನಾನ್‌ ಸ್ಟ್ರೈಕರ್‌ ತುದಿಯಲ್ಲಿದ್ದ ಬ್ಯಾಟ್ಸ್‌ಮನ್ ಬಿಲ್ಲಿ ಬ್ರೌನ್ ಕ್ರೀಸ್‌ ಬಿಟ್ಟಿದ್ದರು. ಮಂಕಡ್ ಬೌಲಿಂಗ್ ಆ್ಯಕ್ಷನ್ ಮಾಡದೇ ಬೇಲ್ಸ್‌ ಎಗರಿಸಿದರು. ಆ ಪ್ರವಾಸದ ಸಂದರ್ಭದಲ್ಲಿ ಮಂಕಡ್‌ ಅವರು ಬ್ರೌನ್‌ ಅವರನ್ನು ಎರಡನೇ ಬಾರಿ ಈ ರೀತಿ ಮಾಡಿದ್ದರು.  ಮೊದಲ ಬಾರಿ ಅವರು ಬ್ರೌನ್‌ಗೆ ಎಚ್ಚರಿಕೆ ನೀಡಿದ್ದರು. ಎರಡನೇ ಬಾರಿ ರನ್‌ಔಟ್ ನೀಡಲಾಯಿತು. ಆಗ ಆಸ್ಟ್ರೇಲಿಯಾ ಮಾಧ್ಯಮಗಳು ಮಂಕಡ್ ಅವರನ್ನು ಟೀಕಿಸಿದ್ದವು. ಆದರೆ, ದಿಗ್ಗಜ ಡಾನ್ ಬ್ರಾಡ್ಮನ್ ಬೆಂಬಲಿಸಿದ್ದರು. ಆಗಿನಿಂದಲೂ ಇಂತಹ ರನ್‌ಔಟ್‌ಗೆ ಮಂಕಡಿಂಗ್ ಎಂದು ಕರೆಯಲಾಗುತ್ತದೆ.

ಎಂಸಿಸಿ ನಿಯಮ 41.16ರಲ್ಲಿ  ನಾನ್‌ ಸ್ಟ್ರೈಕರ್ ರನ್‌ಔಟ್ ಕುರಿತು ಉಲ್ಲೇಖವಿದೆ. 2007ರಲ್ಲಿ ಈ ನಿಯಮವನ್ನು ಪರಿಷ್ಕರಿಸಲಾಗಿತ್ತು.

ಟಿವಿ ಅಂಪೈರ್ ತಪ್ಪು: ಸ್ಕಾಟ್
ಈ ವಿಷಯದಲ್ಲಿ ಬಟ್ಲರ್ ಅಥವಾ ಅಶ್ವಿನ್ ಇಬ್ಬರೂ ತಪ್ಪಿತಸ್ಥರಲ್ಲ. ಅಶ್ವಿನ್ ಅಪೀಲ್ ಕೂಡ ಮಾಡಿರಲಿಲ್ಲ. ಆದರೆ ಟಿವಿ ಅಂಪೈರ್ ಅಸಮರ್ಪಕ ತೀರ್ಪು ನೀಡಿದ್ದರು. ಅದನ್ನು ಡೆಡ್ ಬಾಲ್ ಎಂದು ನಿರ್ಣಯ ನೀಡಬೇಕಾಗಿತ್ತು ಎಂದು ನ್ಯೂಜಿಲೆಂಡ್ ಆಟಗಾರ ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

‘ಮಂಕಡ್ ರನ್‌ಔಟ್‌’ ವಿವಾದದ ಹಿನ್ನೆಲೆಯಲ್ಲಿ ಆರ್. ಅಶ್ವಿನ್ ಅವರ ನಡೆಯನ್ನು ಶೇ 72ರಷ್ಟು ಕ್ರಿಕೆಟ್‌ ಅಭಿಮಾನಿಗಳು ಟೀಕಿಸಿದ್ದಾರೆ. ಶೇ 38 ರಷ್ಟು ಜನರು ಬೆಂಬಲಿಸಿದ್ದಾರೆ.

ಸೋಮವಾರದ ಪಂದ್ಯದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿಯು ಟ್ವಿಟರ್‌ನಲ್ಲಿ ಮಾಡಿದ್ದ ಸಮೀಕ್ಷೆಯಲ್ಲಿ ಈ ಫಲಿತಾಂಶ ಹೊರಹೊಮ್ಮಿದೆ.

ಐಸಿಸಿ ಸಮೀಕ್ಷೆ: ‘ಬಟ್ಲರ್–ಮಂಕಡ್ ರನ್‌ಔಟ್, ಇದರಲ್ಲಿ ಅಶ್ವಿನ್ ನಡೆಯು ಸೂಕ್ತವೇ?’ ಎಂದು ಐಸಿಸಿ ಟ್ವೀಟ್  ಮಾಡಿ, ಅಭಿಪ್ರಾಯಗಳನ್ನು ಆಹ್ವಾನಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ 31,417 ಜನರ ಪೈಕಿ ಶೇ 72ರಷ್ಟು ಮಂದಿ ಅಶ್ವಿನ್ ನಡೆ ಸರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅಶ್ವಿನ್‌ ಹೀಗಂದರು..
ಬಟ್ಲರ್ ಅವರನ್ನು ಔಟ್ ಮಾಡಿದ್ದು ಪಂದ್ಯದ ಗತಿಯನ್ನೇ ಬದಲಿಸಿದ ಕ್ಷಣ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ನಾಯಕ ಆರ್. ಅಶ್ವಿನ್ ಹೇಳಿದ್ದಾರೆ.

ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತತ್‌ಕ್ಷಣವೇ ಹೊಳೆದು ಮಾಡಿದ ಕಾರ್ಯ ಅದು. ಪೂರ್ವನಿಯೋಜಿತವಾಗಿರಲಿಲ್ಲ’ ಎಂದರು.

***

ಅಶ್ವಿನ್‌ ಪರವಾಗಿ ಮಾತನಾಡಿದವರು

ನನ್ನ ಪ್ರಕಾರ ಇದು ಮೋಸವೂ ಅಲ್ಲ, ಕ್ರೀಡಾಸ್ಫೂರ್ತಿಯ ಉಲ್ಲಂಘನೆಯೂ ಅಲ್ಲ. ನಿಯಮದ ಚೌಕಟ್ಟಿನಲ್ಲಿಯೇ ಇದು ಇದೆ. ನಾನು ಬೌಲರ್‌ ಆಗಿದ್ದಾಗ ಹೀಗಾಗಿದ್ದರೆ ಬಹುಶಃ ಬ್ಯಾಟ್ಸ್‌ಮನ್‌ಗೆ ಮೊದಲು ಎಚ್ಚರಿಕೆ ಕೊಡುತ್ತಿದ್ದೆ. ಆದರೆ ಬ್ಯಾಟ್ಸ್‌ಮನ್ ಕೂಡ ಎಚ್ಚರಿಕೆಯಿಂದ ಇರಬೇಕಲ್ಲವೇ? ಬೌಲಿಂಗ್ ಆ್ಯಕ್ಷನ್ ಆಗುವವರೆಗೆ ಕ್ರೀಸ್‌ನಲ್ಲಿರಬೇಕಲ್ಲವೇ?
–ಮಿಷೆಲ್ ಜಾನ್ಸನ್, ಆಸ್ಟ್ರೇಲಿಯಾ ಕ್ರಿಕೆಟಿಗ

*

ಅಶ್ವಿನ್ ಅವರನ್ನು ಟೀಕಿಸಬೇಡಿ. ಕ್ರಿಕೆಟ್‌ ನಿಯಮಾವಳಿಯಲ್ಲಿಯೇ  ಈ ತರಹದ  ರನ್‌ಔಟ್ ನೀಡಲು ಅವಕಾಶ ಇದೆ. ಅಂದ ಮೇಲೆ ಕ್ರೀಡಾಸ್ಫೂರ್ತಿಗೆ ವಿರುದ್ಧ ಹೇಗಾಗುತ್ತದೆ. ನಿಯಮ ರೂಪಿಸಿದವರನ್ನು ಬೇಕಾದರೆ ಟೀಕಿಸಬಹುದು.
ಡೀನ್ ಜೋನ್ಸ್‌, ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ

***

ಅಶ್ವಿನ್‌ ವಿರುದ್ಧ ಮಾತನಾಡಿದವರು

ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಕ್ರಿಕೆಟ್ ಕಲಿಯುತ್ತಿರುವ ಮಕ್ಕಳಿಗೆ ಇದೊಂದು ಕೆಟ್ಟ ಉದಾಹರಣೆಯಾಗಿದೆ. ಮುಂದೊಂದು ದಿನ ಅಶ್ವಿನ್‌ ಕೂಡ ಇದಕ್ಕೆ ಪಶ್ಚಾತ್ತಾಪ ಪಡಬಹುದು.
–ಏಯಾನ್ ಮಾರ್ಗನ್, ಇಂಗ್ಲೆಂಡ್ ಆಟಗಾರ (ಕಿಂಗ್ಸ್ ಇಲೆವನ್ ಪಂಜಾಬ್‌ನ ಮಾಜಿ ಆಟಗಾರ)

*

ಇದೊಂದು ಆಘಾತಕಾರಿ ದೃಶ್ಯ. ಬಹಳ ಬೇಸರವಾಗಿದೆ. ಇದು ಸರಿಯಲ್ಲ.
–ಜೇಸನ್ ರಾಯ್, ಇಂಗ್ಲೆಂಡ್ ಆಟಗಾರ

*

ಅಶ್ವಿನ್ ಒಬ್ಬ ನಾಯಕನಾಗಿ ಮತ್ತು ಕ್ರೀಡಾಪಟುವಾಗಿ ಈ ರೀತಿ ಮಾಡಿರುವುದು ಬೇಸರ ಮೂಡಿಸಿದೆ. ಕ್ರೀಡಾ ಸ್ಫೂರ್ತಿಯಿಂದ ಆಡುವುದಾಗಿ #ಐಪಿಎಲ್‌ ಗೋಡೆಯ ಮೇಲೆ ಹಸ್ತಾಕ್ಷರ ಮಾಡಿದ್ದಾರೆ. ಇದನ್ನು ಡೆಡ್ ಬಾಲ್ ಎಂದು ಕರೆಯಬಹುದಾಗಿತ್ತು. ಇದು ಐಪಿಎಲ್‌ ಘನತೆಗೆ ತಕ್ಕುದಲ್ಲ. ಬಿಸಿಸಿಐ ಗಂಭೀರವಾಗಿ ಪರಿಶೀಲಿಸಬೇಕು.
–ಶೇನ್ ವಾರ್ನ್, ರಾಜಸ್ಥಾನ್ ರಾಯಲ್ಸ್‌ ಪ್ರಚಾರ ರಾಯಭಾರಿ

*

ಈ ವರ್ಷ ಅಶ್ವಿನ್ ಅವರು  ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಯನ್ನು ಗೆಲ್ಲುವುದಿಲ್ಲ. ಇನ್ನೆಂದೂ..
–ಡೇಲ್ ಸ್ಟೇಯ್ನ್, ದಕ್ಷಿಣ ಆಫ್ರಿಕಾ ಬೌಲರ್‌

ಅಶ್ವಿನ್‌–ಮಂಕಡಿಂಗ್‌ ಇದೇ ಮೊದಲಲ್ಲ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು