ಶುಕ್ರವಾರ, ಡಿಸೆಂಬರ್ 6, 2019
18 °C
ಶಿಖರ್ ಧವನ್ ಅರ್ಧಶತಕ: ಸಾಧಾರಣ ಮೊತ್ತ ಪೇರಿಸಿದ ಡೆಲ್ಲಿ ಕ್ಯಾಪಿಟಲ್

ಕೋಟ್ಲಾದಲ್ಲಿ ಡ್ವೆನ್ ಬ್ರಾವೊ ಮಿಂಚು

Published:
Updated:
Prajavani

ನವದೆಹಲಿ: ಡ್ವೆನ್ ಬ್ರಾವೊ ಮಂಗಳವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ತಮ್ಮ ‘ಡಿಜೆ’ ಡ್ಯಾನ್ಸ್‌ ತೋರಿಸಲಿಲ್ಲ. ಆದರೆ ಡೆಲ್ಲಿ ಕ್ಯಾಪಿಟಲ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದರು!

ವೆಸ್ಟ್ ಇಂಡೀಸ್‌ನ ಮಧ್ಯಮವೇಗಿ ಬ್ರಾವೊ (4–0–33–3) ದಾಳಿಯ ಮುಂದೆ ಆತಿಥೇಯ ಡೆಲ್ಲಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 147 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡಕ್ಕೆ ಉತ್ತಮ  ಆರಂಭ ಲಭಿಸಿತು. ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಮತ್ತು  ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಬ್ಬರದ ಆರಂಭ ನೀಡಿದರು. ಆದರೆ, ಐದನೇ ಓವರ್‌ನಲ್ಲಿ ದೀಪಕ್ ಚಾಹರ್ ಎಸೆತವನ್ನು  ಬೌಂಡರಿಗೆ ಎತ್ತುವ ಪ್ರಯತ್ನದಲ್ಲಿ ಪೃಥ್ವಿ ಎಡವಿದರು. ಶೇನ್ ವಾಟ್ಸನ್‌ ಪಡೆದ ಕ್ಯಾಚ್‌ಗೆ ಪೃಥ್ವಿ ಡಗ್‌ಔಟ್ ಹಾದಿ ಹಿಡಿದರು. ಆದರೆ, ಶಿಖರ್ ಗಟ್ಟಿಯಾಗಿ ನಿಂತರು. ತಂಡದ ಮೊತ್ತವನ್ನು ಹೆಚ್ಚಿಸುವ ಪ್ರಯತ್ನವನ್ನು ಮುಂದುವರಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಒಂದಿಷ್ಟು ರನ್‌ ಗಳಿಸುವ ಪ್ರಯತ್ನ ಮಾಡಿದರು. ಆದರೆ, ಸ್ಪಿನ್ನರ್ ಇಮ್ರಾನ್ ತಾಹೀರ್ ಅವರ ಎಸೆತದ ತಿರುವನ್ನು ಗುರುತಿಸುವಲ್ಲಿ ವಿಫಲರಾದರು. ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಕ್ರೀಸ್‌ಗೆ ಬಂದ ರಿಷಭ್ ಪಂತ್ ಬೀಸಾಟವಾಡಿದರು. ಶಿಖರ್ ಜೊತೆಗೂಡಿ ಮೂರನೇ ವಿಕೆಟ್‌ಗೆ 41 ರನ್‌ ಸೇರಿಸಿದರು. ರನ್‌ಗಳಿಕೆಗೆ ವೇಗ ನೀಡಿದರು. ಈ ನಡುವೆ ಶಿಖರ್ ಅರ್ಧಶತಕ ಪೂರೈಸಿದರು.

16ನೇ ಓವರ್‌ನಲ್ಲಿ ಬ್ರಾವೊ ಆಟ ಕಳೆಗಟ್ಟಿತು. ರಿಷಭ್ ಪಂತ್ ಅವರ ವಿಕೆಟ್ ಕಬಳಿಸುವ ಮೂಲಕ ಬೇಟೆ ಆರಂಭಿಸಿದರು. ಅದೇ ಓವರ್‌ನಲ್ಲಿ ಕಾಲಿನ್ ಇನ್‌ಗ್ರಾಂ ಅವರಿಗೂ ಡಗ್‌ಔಟ್ ದಾರಿ ತೋರಿಸಿದರು. ತಮ್ಮ ನಂತರದ ಓವರ್‌ನಲ್ಲಿ (18) ಶಿಖರ್ ವಿಕೆಟ್ ಕಬಳಿಸಿ ಸಂಭ್ರಮಿಸಿದರು. ಇದರಿಂದಾಗಿ ಡೆಲ್ಲಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಗುರಿ ಬೆನ್ನತ್ತಿರುವ ಚೆನ್ನೈ ತಂಡವು  ಪತ್ರಿಕೆಯು ಮುದ್ರಣಕ್ಕೆ ಹೋಗುವ ವೇಳೆಗೆ 2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್‌ ಗಳಿಸಿತು.

ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಜಯಿಸಿತ್ತು.  ಆ ಪಂದ್ಯದಲ್ಲಿ ಮಿಂಚಿದ್ದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಅವರಿಗೆ ಇಲ್ಲಿ ವಿಕೆಟ್‌ ಲಭಿಸಲಿಲ್ಲ. ರವೀಂದ್ರ ಜಡೇಜ ಒಂದು ವಿಕೆಟ್ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು