ಜನತಾ ನ್ಯಾಯಾಲಯ ಸಶಕ್ತ ಆಯುಧ: ಸಂಜೀವಕುಮಾರ ಹಂಚಾಟೆ ಅಭಿಮತ

ಶುಕ್ರವಾರ, ಏಪ್ರಿಲ್ 26, 2019
35 °C
ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ ಮತ್ತು ಅದರ ದ್ಯೇಯೋದ್ದೇಶಗಳ ಕುರಿತ ವಿಡಿಯೊ ಕಾನ್ಫರೆನ್ಸ್ ಸಭೆ

ಜನತಾ ನ್ಯಾಯಾಲಯ ಸಶಕ್ತ ಆಯುಧ: ಸಂಜೀವಕುಮಾರ ಹಂಚಾಟೆ ಅಭಿಮತ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕಾಯಂ ಜನತಾ ನ್ಯಾಯಾಲಯದ ಅನುಷ್ಠಾನದಿಂದ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ತೀವ್ರ ತರವಲ್ಲದ ಸಾಮಾನ್ಯ ಪ್ರಕರಣಗಳನ್ನು ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಇತ್ಯರ್ಥ ಪಡಿಸಿಕೊಳ್ಳಬಹುದು’ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ ಹಂಚಾಟೆ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮಾಧ್ಯಮದವರಿಗಾಗಿ ಆಯೋಜಿಸಿದ್ದ ಕಾಯಂ ಜನತಾ ನ್ಯಾಯಾಲಯ ಸ್ಥಾಪನೆ ಮತ್ತು ಅದರ ದ್ಯೇಯೋದ್ದೇಶಗಳ ಕುರಿತ ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಅವರು ಮಾತನಾಡಿದರು.

‘ಸಾರಿಗೆ, ಅಂಚೆ, ದೂರವಾಣಿ, ವಿದ್ಯುತ್, ನೀರು ಸರಬರಾಜು, ಆಸ್ಪತ್ರೆ, ಸಾರ್ವಜನಿಕ ಸಂರಕ್ಷಣೆ ಮತ್ತು ನೈರ್ಮಲ್ಯ, ಶಿಕ್ಷಣ, ಬ್ಯಾಂಕಿಂಗ್,ವಸತಿ ಹಾಗೂ ವಿಮಾ ಕ್ಷೇತ್ರ ಸೇರಿದಂತೆ 9 ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಯಾವುದೇ ಶುಲ್ಕ ಇಲ್ಲದೇ ಹಾಗೂ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಬಹುದು. ಈ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ’ ಎಂದು ಹೇಳಿದರು.

‘ಎಲ್ಲರಿಗೂ ತ್ವರಿತಗತಿಯಲ್ಲಿ ನ್ಯಾಯ ದೊರಕಬೇಕು ಹಾಗೂ ನ್ಯಾಯದಾನದ ಬಗ್ಗೆ ಅರಿವು ಮತ್ತು ವಿಶ್ವಾಸವನ್ನು ಮೂಡಿಬೇಕು. ಆ ಕೆಲಸವನ್ನು ಕಾಯಂ ಜನತಾ ನ್ಯಾಯಾಲಯ ಕೆಲಸ ಮಾಡುತ್ತಿದೆ. ಇದರಲ್ಲಿ ಸಾರ್ವಜನಿಕ ಕ್ಷೇತ್ರದ ಪ್ರತಿನಿಧಿಗಳು, ವಕೀಲರು ಹಾಗೂ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಪ್ರಕರಣದ ಬಗ್ಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತದೆ’ ಎಂದರು.

‘ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನ್ಯಾಯಾಧೀಶರೇ ಈ ನ್ಯಾಯಾಲಯದ ಅಧ್ಯಕ್ಷರಾಗಿರುತ್ತಾರೆ. ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಅನುಭವ ಹೊಂದಿರುವ ಇಬ್ಬರು ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ, ಕಲಬುರ್ಗಿ ಸೇರಿದಂತೆ ಆರು ಜಿಲ್ಲೆಗಳಲ್ಲಿ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಕಾಯಂ ಜನತಾ ನ್ಯಾಯಾಲಯದ ಅಧಿನಿಯಮ 22 ಸಿ ಅಡಿ ವಿವಾದ ಹೊಂದಿರುವ ಯಾವುದೇ ವ್ಯಕ್ತಿ ಇತರ ನ್ಯಾಯಾಲಯಗಳ ಮೆಟ್ಟಿಲೇರುವ ಮುನ್ನ ವಿವಾದ ಇತ್ಯರ್ಥಕ್ಕಾಗಿ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಬೇರೆ ನ್ಯಾಯಾಲಯಗಳಿಗೆ ಹೋಗುವಂತಿಲ್ಲ. ಆದರೆ ಕಾನೂನಿನಡಿ ರಾಜೀ ಮಾಡಿಕೊಳ್ಳಲು ಅವಕಾಶವಿರದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಕಾಯಂ ಜನತಾ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ’ ಎಂದು ತಿಳಿಸಿದರು.

‘ಸರ್ವರಿಗೂ ನ್ಯಾಯ ಎಂಬುದು ಭಾರತದ ಕಾನೂನು ಸೇವೆಗಳ ದ್ಯೇಯ. ಉಚಿತ ಕಾನೂನು ಮತ್ತು ಸಲಹಾ ಕೇಂದ್ರಗಳಿಂದ ಗ್ರಾಮೀಣ ಭಾಗದ ಜನರು ಉಚಿತವಾಗಿ ಕಾನೂನು ಅರಿವು ಪಡೆದುಕೊಂಡು, ನ್ಯಾಯಾಲಯಗಳ ಮೆಟ್ಟಿಲೇರಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಳ್ಳದೆ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿಕೊಳ್ಳಬೇಕು. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದರು. ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !