ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ

ಗುರುವಾರ , ಏಪ್ರಿಲ್ 25, 2019
21 °C
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪರ ಬಿಜೆಪಿ ಮುಖಂಡರ ಮತ ಯಾಚನೆ

ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಶದ ಉನ್ನತಿಗಾಗಿ ಮತ್ತು ಐಕ್ಯತೆಗಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಿ.ವಿ ಮಂಜುನಾಥ್ ತಿಳಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಪರವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರಚಾರ ನಡೆಸಿದ ಅವರು, ‘ಮೋದಿ ಅವರ ಉತ್ತಮ ಆಡಳಿತದಿಂದ ದೇಶದಾದ್ಯಂತ ಬಿಜೆಪಿ ಪರವಾದ ಅಲೆ ಮೂಡಿದೆ. ಹೀಗಾಗಿ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಗೆಲುವುದು ಖಚಿತ. ಬಿಜೆಪಿಯ ಪಾರದರ್ಶಕ ಆಡಳಿತಕ್ಕೆ ಜನ ಬೆಂಬಲ ನೀಡಲಿದ್ದಾರೆ’ ಎಂದು ಹೇಳಿದರು.

‘ಈವರೆಗೆ ಎತ್ತಿನಹೊಳೆ ಜಪ ಮಾಡುತ್ತಿದ್ದವರು ಚುನಾವಣೆ ಬರುತ್ತಿದ್ದಂತೆ ಇದೀಗ ಏಕಾಏಕಿ ನೆರೆಯ ಆಂಧ್ರಪ್ರದೇಶದಿಂದ ಕೃಷ್ಣಾ ನದಿ ನೀರು ತರುತ್ತೇನೆ ಎಂದು ಹೊಸ ವರಸೆ ಆರಂಭಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಇರುವ ನೀರೇ ತಂದು ಕೊಡದವರು ಪಕ್ಕದ ರಾಜ್ಯದಿಂದ ನೀರು ತರಲು ಹೇಗೆ ಸಾಧ್ಯ. ಇದೆಲ್ಲ ಸುಳ್ಳಿನ ಕಂತೆ. ಸಂಸದರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿ ಹಣ ಬಳಕೆಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ’ ಎಂದು ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

‘ಮೋದಿ ಅವರು ನದಿ ಜೋಡಣೆಗಾಗಿ ₹28 ಸಾವಿರ ಕೋಟಿ ಬಿಡುಗಡೆ ಮಾಡಿದ್ದಾರೆ. ಇನ್ನು 10 ವರ್ಷಗಳ ಒಳಗೆ ನಮ್ಮ ಜಿಲ್ಲೆಗೂ ನೀರು ಬರುತ್ತದೆ. ನೀರಾವರಿ ಬಗ್ಗೆ ಎಂ. ವೀರಪ್ಪ ಮೊಯಿಲಿ ಅವರು ಯಾವುದೇ ಹೋರಾಟ ಮಾಡಿಲ್ಲ. ಮೇಕೆದಾಟು ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಬಿಟ್ಟು ಹೋದಾಗ ಈ ಜಿಲ್ಲೆಗಳ ಬಗ್ಗೆ ಯಾಕೆ ಧ್ವನಿ ಎತ್ತಲಿಲ್ಲ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ. 3.60 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ ನೆಟ್ ಸೇವೆಯನ್ನು ಕಲ್ಪಿಸಿದೆ. ಬಡಜನರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ವಿತರಿಸಿದೆ. ಸ್ವಚ್ಛ ಭಾರತ ಕಾರ್ಯಕ್ರಮಗಳಂತಹ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದೆ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಿನಾರಾಯಣ ಗುಪ್ತಾ, ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಯುವ ಮೋರ್ಚಾ ಮಂಡಲ ಅಧ್ಯಕ್ಷ ಮಂಜುನಾಥ್, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಜಿಲ್ಲಾ ವಕ್ತಾರ ಎಚ್.ಕೆ.ಲಕ್ಷ್ಮೀಪತಿ, ಯುವ ಮೋರ್ಚಾ ನಗರ ಅಧ್ಯಕ್ಷ ಮಧುಚಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎನ್.ಮಂಜುನಾಥ್ ಮುಖಂಡರಾದ ಪವನ್, ಬಾಲು, ರಾಜು, ಪ್ರಜ್ವಲ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !