ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ: ವೀರಪ್ಪ ಮೊಯಿಲಿ

ಬುಧವಾರ, ಏಪ್ರಿಲ್ 24, 2019
32 °C
ಪೇರಸಂದ್ರ ಹಾಗೂ ಮಂಚನಬೆಲೆಯಲ್ಲಿ ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ಪ್ರಚಾರ ಸಭೆ

ಮನೆ ಮನೆಗೆ ಅಡುಗೆ ಅನಿಲ ಸಂಪರ್ಕ: ವೀರಪ್ಪ ಮೊಯಿಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ದಾಬೋಲ್‌ನಿಂದ ಬೆಂಗಳೂರು ತಲುಪಿರುವ ಅಡುಗೆ ಅನಿಲ ಕೊಳವೆ ಮಾರ್ಗವನ್ನು ಈ ಭಾಗಕ್ಕೂ ವಿಸ್ತರಿಸಿ ಮನೆ ಮನೆಗೆ ಸಂಪರ್ಕ ಕಲ್ಪಿಸಲಾಗುತ್ತದೆ’ ಎಂದು ಮೈತ್ರಿ ಅಭ್ಯರ್ಥಿ, ಸಂಸದ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪೇರೇಸಂದ್ರ ಹಾಗೂ ಮಂಚನಬೆಲೆಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಯುಪಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಗ್ಯಾಸ್ ಸಿಲಿಂಡರ್ ಬೆಲೆ ₹300  ರಿಂದ ₹350 ಕ್ಕೆ ಇಳಿಸಲಾಗುವುದು. ಯುಪಿಎ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಅಧಿಕವಾಗಿದ್ದರೂ ಬಡವರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ತೈಲ ಕಂಪನಿಗಳಿಗೆ ₹3 ಲಕ್ಷ ಕೋಟಿ ರೂಪಾಯಿ ಸಬ್ಸಿಡಿ ಹಣ ನೀಡುತ್ತಿದ್ದೆವು’ ಎಂದು ಹೇಳಿದರು.

‘ಹೊಲ ಹೊಲಕ್ಕೆ ನೀರು, ಮನೆ ಮನೆಗೆ ಉದ್ಯೋಗ ನೀಡುವ ಗುರಿ ಹೊಂದಿದ್ದೇನೆ. ಚಿಕ್ಕಬಳ್ಳಾಪುರ ಭಾಗದಲ್ಲಿ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಕ್ಷೇತ್ರದ ಕೈಗಾರಿಕೆ ಸ್ಥಾಪನೆಗೆ ಈಗಾಗಲೇ ನಿರ್ಧರಿಸಿದ್ದು ಅದಕ್ಕಾಗಿ ಸಾವಿರ ಎಕರೆ ಭೂಮಿ ಮೀಸಲಿಡಲಾಗಿದೆ. ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗಿದೆ. ಆದರೆ ಅದಕ್ಕೆ ಕೆಲವರು ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವವನಲ್ಲ’ ಎಂದರು.

‘ಬಿಜೆಪಿಯವರ ಅಧಿಕಾರ ಅವಧಿಯಲ್ಲಿ ಕೆಲವರು ಜೈಲಿನಲ್ಲಿ, ಹಲವರು ಜಾಮೀನಿನ ಮೇಲೆ ಇದ್ದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರೂ ಜೈಲಿಗೂ ಹೋಗಿಲ್ಲ, ಜಾಮೀನು ತೆಗೆದುಕೊಂಡಿಲ್ಲ. ನಾನು ಮುಖ್ಯಮಂತ್ರಿ ಇರುವಾಗ ಬಲಿಜ ಸಮುದಾಯದವರಿಗೆ ಮೀಸಲಾತಿ ಒದಗಿಸಿ, ಹಿಂದುಳಿದ ವರ್ಗಕ್ಕೆ ಸೇರಿಸಿದ್ದೆ. ವಾಲ್ಮೀಕಿ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಶ್ರಮಿಸಿರುವೆ’ ಎಂದು ಹೇಳಿದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರದ ಕಾರಣಕ್ಕೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಜೆಡಿಎಸ್‌ ಜತೆ ಹೊಂದಾಣಿಕೆಗೆ ಮುಂದಾಗಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಿದೆವು. ಕಾಂಗ್ರೆಸ್ ತ್ಯಾಗ ಮಾಡುವುದರಲ್ಲಿ ಯಾವಾಗಲೂ ಮುಂದೆ ಇರುತ್ತದೆ’ ಎಂದು ತಿಳಿಸಿದರು.

‘ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಕೊಟ್ಟ ಯಾವೊಂದು ಭರವಸೆ ಈಡೇರಿಸಿಲ್ಲ. ಈ ಭಾಗದ ನೀರಾವರಿ ಸಮಸ್ಯೆ ಬಗೆಹರಿಸಲು ಬಿಜೆಪಿಯವರು ನಯಾಪೈಸೆ ಕೊಟ್ಟಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರ ಎತ್ತಿನಹೊಳೆ ಯೋಜನೆಗೆ ₹13 ಸಾವಿರ ಕೋಟಿ ಅನುದಾನ ನೀಡಿದೆ. ಆ ಯೋಜನೆಗೆ ವರ್ಷಕ್ಕೆ ₹500 ಕೋಟಿ ನೀಡಿದರೆ ಸಾಲದು, ವರ್ಷಕ್ಕೆ ಐದು ಸಾವಿರ ಕೋಟಿ ನೀಡಬೇಕು ಎಂದು ನೀರಾವರಿ ಸಚಿವರಿಗೆ ಆಗ್ರಹಿಸಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಮಾಜಿ ಶಾಸಕರಾದ ಅನಸೂಯಮ್ಮ, ಎಸ್.ಎಂ.ಮುನಿಯಪ್ಪ, ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಕೆಪಿಸಿಸಿ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಟಿಎಪಿಎಂಎಸ್ ಅಧ್ಯಕ್ಷ ಆವುಲರೆಡ್ಡಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !