ಬೂತ್‌ಗೆ ₹5ಲಕ್ಷ, ಕ್ಷೇತ್ರಕ್ಕೆ ₹150ಕೋಟಿ, ಮನೆಗೆ ಮಾಂಸ: ಚೇತನ್‌ಗೌಡ-ರಮೇಶ್ ಮಾತು

ಭಾನುವಾರ, ಏಪ್ರಿಲ್ 21, 2019
32 °C

ಬೂತ್‌ಗೆ ₹5ಲಕ್ಷ, ಕ್ಷೇತ್ರಕ್ಕೆ ₹150ಕೋಟಿ, ಮನೆಗೆ ಮಾಂಸ: ಚೇತನ್‌ಗೌಡ-ರಮೇಶ್ ಮಾತು

Published:
Updated:

ಮಂಡ್ಯ: ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಗೆಲುವಿಗಾಗಿ ಜೆಡಿಎಸ್‌ ಮುಖಂಡರು ಪ್ರತಿ ಬೂತ್‌ಗೆ ₹ 5 ಲಕ್ಷದಂತೆ ಕ್ಷೇತ್ರಕ್ಕೆ ₹ 150 ಕೋಟಿಗೂ ಹೆಚ್ಚು ಹಣದ ಹೊಳೆ ಹರಿಸುತ್ತಿದ್ದಾರೆ, ಮನೆಮನೆಗೆ ಮಾಂಸ ಹಂಚುತ್ತಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಂಸದ ಎಲ್‌.ಆರ್‌.ಶಿವರಾಮೇಗೌಡ ಅವರ ಪುತ್ರ ಚೇತನ್‌ಗೌಡ ಹಾಗೂ ಜೆಡಿಎಸ್‌ ಪಕ್ಷ ತೊರೆದಿರುವ ಬೆಂಗಳೂರು ಮೂಲದ ಪಿ.ರಮೇಶ್‌ ಅವರ ನಡುವೆ ನಡೆದಿರುವ ಸಂಭಾಷಣೆಯ ಎರಡು ತುಣುಕುಗಳು ಹರಿದಾಡುತ್ತಿವೆ. ಸಂಸದರ ಪುತ್ರ ಚೇತನ್‌ಗೌಡ ಮಾತನಾಡುತ್ತಾ, ಕ್ಷೇತ್ರದಲ್ಲಿ 2,800 ಬೂತ್‌ಗಳಿದ್ದು ಪ್ರತಿ ಬೂತ್‌ಗೆ ₹ 5 ಲಕ್ಷ ಹಂಚಲಾಗುತ್ತಿದೆ. ಪ್ರತಿ ಕಿ.ಮೀ.ಗೆ ಒಬ್ಬ ಜೆಡಿಎಸ್‌ ಗುತ್ತಿಗೆದಾರರು ಇದ್ದು ಅವರು ಹಣ ಬಟಾವಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಎಚ್‌.ಡಿ.ದೇವೇಗೌಡರು ತಮ್ಮ ಮನೆಯಿಂದ ಹಣ ಬಿಚ್ಚುತ್ತಿದ್ದಾರೆ. ಇಷ್ಟು ದಿನ ಹಣ ಮನೆಗೆ ಬರುತ್ತಿತ್ತು. ಈಗ ಮನೆಯಿಂದ ಹಣ ಹೊರಗೆ ಹೋಗುತ್ತಿದೆ ಎಂದು ಹೇಳಿದ್ದಾರೆ. ಸುಮಲತಾ ವಿರುದ್ಧ ಮಾತನಾಡಲು ಎಲ್‌.ಆರ್‌.ಶಿವರಾಮೇಗೌಡರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರೇ ಸೂಚನೆ ನೀಡಿದ್ದಾರೆ ಎಂದು ಚೇತನ್‌ಗೌಡ ಬಹಿರಂಗಗೊಳಿಸಿದ್ದಾರೆ.

ಧ್ವನಿ ನನ್ನದಲ್ಲ: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೇತನ್‌ಗೌಡ ‘ಆಡಿಯೊದಲ್ಲಿ ಇರುವ ಧ್ವನಿ ನನ್ನದಲ್ಲ. ಮೊದಲ ಆಡಿಯೋಗೂ, ಎರಡನೇ ಆಡಿಯೋಗೂ ಸಾಕಷ್ಟು ವ್ಯತ್ಯಾಸವಿದೆ. ಸಂಭಾಷಣೆಯಲ್ಲಿ ಇರುವ ವಿಷಯ ಸುಲಭ ಸಾಧ್ಯವಾದುದಲ್ಲ. ಇದು ವಿರೋಧಿಗಳ ತಂತ್ರ’ ಎಂದು ಹೇಳಿದರು.

ನಂಬಬೇಡಿ: ಭಾರತೀನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ‘ನಾವೆಂದೂ ದುಡ್ಡಿನಲ್ಲಿ ರಾಜಕಾರಣ ಮಾಡಿಲ್ಲ. ಅದನ್ನೆಲ್ಲಾ ನಂಬಬೇಡಿ. ಕೀಳುಮಟ್ಟದ ವಿಷಯಗಳಿಗೆ ಕಿವಿ ಕೊಡಬೇಡಿ’ ಎಂದರು.

ಮಳವಳ್ಳಿ ತಾಲ್ಲೂಕು ಗೊಲ್ಲರಹಳ್ಳಿಯಲ್ಲಿ ಮಾತನಾಡಿರುವ ಸುಮಲತಾ ‘ನನಗೆ ಮೊದಲಿನಿಂದಲೂ ಮಾಹಿತಿ ಇತ್ತು. ಈಗ ಅದು ಎಲ್ಲರಿಗೂ ಗೊತ್ತಾಗಿದೆ. ಈ ಕುರಿತು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇನೆ’ ಎಂದರು.

ಆಡಿಯೊದಲ್ಲಿರುವ ಪ್ರಮಖ ಅಂಶಗಳು

ಚೇತನ್‌ಗೌಡ: 2,800 ಬೂತ್‌ಗಳಿವೆ, ಪ್ರತಿ ಬೂತ್‌ಗೆ ₹ 5 ಲಕ್ಷ ಮೀಸಲಿಡಲಾಗಿದೆ

ಪಿ.ರಮೇಶ್‌: ಬೂತ್‌ಗೆ ₹ 5 ಲಕ್ಷ ಎಂದರೆ ಹೆಂಗಯ್ಯಾ, ಜಗತ್ತಿನಲ್ಲಿ ಇಲ್ವಲ್ಲಯ್ಯಾ

ಚೇತನ್‌ಗೌಡ: ನಾನೂ ಶಾಕ್‌ ಆಗಿದ್ದೇನೆ. ಗುತ್ತಿಗೆದಾರರನ್ನು ಕರೆದು ಮಾತನಾಡಿದ್ದಾರೆ. ಸರ್ಕಾರ ಪ್ರತಿ ತಾಲ್ಲೂಕಿಗೆ ತಲಾ ₹ 1 ಸಾವಿರ ಕೋಟಿ ಕೊಟ್ಟಿದೆ. ಕಾಮಗಾರಿ ಕೊಡುವುದಾಗಿ ತಿಳಿಸಿದ್ದು ಕೈಯಿಂದ ಹಣ ಕಾಕಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ. 2,800 ಬೂತ್‌, ಲೆಕ್ಕ ಹಾಕು ಎಷ್ಟು ಆಗುತ್ತೆ.

ಪಿ.ರಮೇಶ್‌: ಬೂತ್‌ಗೆ ₹ 5 ಲಕ್ಷ ಆದರೆ ಎಷ್ಟಾಗುತ್ತೆ, ₹ 150 ಕೋಟಿಗಿಂತ ಹೆಚ್ಚಾಗುತ್ತೆ

ಚೇತನ್‌ಗೌಡ: ಹೌದು, ಕಡೆಗೆ ಮನೆಮನೆಗೆ ಮಾಂಸ ಕೊಡುತ್ತಾರೆ, ಎನು ಗುರು ದುಡ್ಡು. ಅವರ ಮನೆಯಿಂದ ಫಸ್ಟ್‌ ಟೈಂ ಹಣ ಹೊರಗೆ ಬರುತ್ತಿದೆ.

ಪಿ.ರಮೇಶ್‌: ದುಡ್ಡು ಹಂಚಲು ಹೇಗೆ ಬಿಡುತ್ತಾರೆ. ಐಟಿ ಅಧಿಕಾರಿಗಳು ಸೆಂಟರ್‌ ಮಾಡಿದ್ದಾರಂತಲ್ಲ?

ಚೇತನ್‌ಗೌಡ: ಮೋದಿ ಅನುಕೂಲ ಮಾಡಿಕೊಟ್ಟಿದ್ದಾರೆ. ₹ 2 ನೋಟುಗಳಿವೆ, ಒಬ್ಬ ವ್ಯಕ್ತಿ ₹ 10 ಲಕ್ಷ ಇಟ್ಟುಕೊಂಡು ಓಡಾಡಬಹುದು. ಸ್ಥಳೀಯ ಗುತ್ತಿಗೆದಾರರು ಸುಲಭವಾಗಿ ಕೆಲಸ ಮಾಡುತ್ತಾರೆ.

ಪಿ.ರಮೇಶ್‌: ನಿಮ್ಮಪ್ಪನಿಗೆ ಸ್ವಲ್ಪ ಮಾತು ಕಡಿಮೆ ಮಾಡು ಅನ್ನು

ಚೇತನ್‌ಗೌಡ: ಮಾತಾಡು ಎಂದೇ ದೇವೇಗೌಡರು ಹೇಳಿದ್ದಾರೆ. ಬಾರಪ್ಪ ಶಿವರಾಜು ಅಂತ ಕರೆದಿದ್ದಾರೆ

ಪಿ.ರಮೇಶ್‌: ಮಾಯಾಂಗಿನಿ ಎಂದೆಲ್ಲಾ ಮಾತನಾಡಬಾರದು

ಚೇತನ್‌ಗೌಡ: ಅದರಲ್ಲಿ ಏನೂ ತಪ್ಪಿಲ್ಲ. ಕುಮಾರಸ್ವಾಮಿ ಸೋತರ ಅವರ ಲೈಫೆ ಕೊನೆಯಾಗುತ್ತದೆ. ಚುನಾವಣೆ ಬಹಳ ವಿಚಿತ್ರವಾಗಿ ನಡೆಯುತ್ತಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 14

  Angry

Comments:

0 comments

Write the first review for this !