ಶುಕ್ರವಾರ, ಮೇ 29, 2020
27 °C

215: ಹೆಣ್ಣಿನ ಕಾಮಪ್ರಜ್ಞೆ-11

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಂಗಿಕ ದೌರ್ಜನ್ಯಕ್ಕೆ ನಲುಗಿದ ಹೆಂಗಸರಿಗೂ ತಮ್ಮ ಶರೀರದ ಮೇಲೆ ಮರುಹಕ್ಕು ಪಡೆದುಕೊಳ್ಳಲು ಸಾಧ್ಯವಿದೆ, ಹಾಗೂ ಇದಕ್ಕೆ ಮನೋಲೈಂಗಿಕ ಚಿಕಿತ್ಸೆಯಿದೆ ಎಂದು ಹೋದಸಲ ಹೇಳುತ್ತಿದ್ದೆ.

ಇದನ್ನೆಲ್ಲ ಓದುತ್ತಿರುವವರಿಗೆ ಒಂದು ಸಂದೇಹ ಮೂಡಬಹುದು: ಹೆಣ್ಣು ಕಾಮಪ್ರಜ್ಞೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಇಷ್ಟೊಂದು ಅರಿವು ಮೂಡಿಸಿಕೊಳ್ಳುವುದು, ಹಾಗೂ ಕಾಮಕೂಟದಲ್ಲಿ ಇಷ್ಟೊಂದು ಜಾಗೃತ ಸ್ಥಿತಿಯನ್ನು ಮುಟ್ಟುವುದು ಸಾಧ್ಯವೆ? ಅಥವಾ ಇದೊಂದು ಆಶಾವಾದದ ಹುಚ್ಚು ಕಲ್ಪನೆಯೆ? ಇದನ್ನು ಸ್ಪಷ್ಟೀಕರಿಸಲು ಪ್ರತ್ಯಕ್ಷವಾಗಿ ಕೈಗೂಡಿಸಿಕೊಂಡ ದಂಪತಿಯ ದೃಷ್ಟಾಂತವನ್ನು ನಿಮ್ಮ ಮುಂದಿಡುತ್ತಿದ್ದೇನೆ:

ಚುಕ್ಕಿ ಹಾಗೂ ಚಂದ್ರಮ (ನಿಜವಾದ ಹೆಸರುಗಳಲ್ಲ) ಬದ್ಧಸಂಬಂಧದಲ್ಲಿದ್ದು ಸುಮಾರು ವರ್ಷಗಳಾಗಿವೆ. ಚುಕ್ಕಿಗೆ ಕಾಮಕೂಟವೆಂದರೆ ಗೊತ್ತೇ ಇರಲಿಲ್ಲ. ಚಂದ್ರಮನಿಂದ ತಿಳಿದುಕೊಂಡು ಯೋನಿಕೂಟದಲ್ಲಿ ನೋವಾದರೂ ಸಹಕರಿಸುತ್ತ ಬಂದಿದ್ದಾಳೆ. ಹಸ್ತಮೈಥುನ ಮಾಡಿ(ಸಿ)ಕೊಂಡು ತೃಪ್ತಿಪಡುತ್ತಾಳೆ. ಬರಬರುತ್ತ ಇವರಲ್ಲಿ ಏಕತಾನೀಯತೆ ಮೂಡಿದೆ. ತೃಪ್ತಿಯಾಗುತ್ತಿಲ್ಲವೆಂದು ಇಬ್ಬರೂ ಸಾಕಷ್ಟು ಸಲ ಜಗಳ ಮಾಡಿದ್ದಾರೆ. ಚುಕ್ಕಿಗೆ ಯೋನಿಸಂಪರ್ಕದಲ್ಲಿ ಕಿರಿಕಿರಿ ಎಂದು ಗೊತ್ತಾದಾಗ ಅದನ್ನು ಬಿಟ್ಟುಕೊಟ್ಟು ಪರಸ್ಪರ ಹಸ್ತಮೈಥುನದಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೊಮ್ಮೆ ಆಕೆ ನೀರಸವೆನಿಸಿ ಕೈಸೋತು ನಿಲ್ಲಿಸಿದಾಗ ಚಂದ್ರಮನಿಗೆ ತೃಪ್ತಿಯಾಗದೆ, ಸರಿಯಾಗಿ ಬಯ್ದಿದ್ದಾನೆ. ಇಬ್ಬರೂ ಬೇಸತ್ತು ಕಾಮಕೂಟದಿಂದ ಸುಮಾರು ಕಾಲ ದೂರವಿದ್ದಾರೆ. ಸಂಬಂಧ ಮುರಿದುಕೊಳ್ಳುವ ಯೋಚನೆ ಮಾಡಿದ್ದಾರೆ. ಅದು ಸಲ್ಲದೆಂದು ನನ್ನಲ್ಲಿ ಬಂದಿದ್ದಾರೆ.

ಇವರ ನಡುವೆ ಏನು ನಡೆಯುತ್ತಿದೆ? ಇಬ್ಬರೂ, ‘ಲೈಂಗಿಕ ಕ್ರಿಯೆ ಎಂದರೆ ಹೀಗೆ’ ಎಂದು ಬಳಕೆಯಲ್ಲಿರುವ ಸರ್ವಸಾಮಾನ್ಯ ಮಾದರಿಯನ್ನು ಅನುಸರಿಸುತ್ತಿದ್ದಾರೆ, ಹಾಗೂ ಇದು ಪುರುಷ ಪ್ರಧಾನವಾಗಿದೆ– ಅಂದರೆ ಶಿಶ್ನದ ಉದ್ರೇಕದ ಸಂಭವ ಇದ್ದರೆ ಮಾತ್ರ ಅವರ ಕೂಟ ಶುರುವಾಗುತ್ತದೆ. ಯೋನಿ–ಶಿಶ್ನದ ಕೂಟದ ಸಾಮರ್ಥ್ಯ ಹಾಗೂ ಸಾಧ್ಯತೆಯೇ ಇದರ ಜೀವಾಳ. ಹಾಗೂ ಇದೇ ಅವರ ಸಮಸ್ಯೆಯ ಮೂಲ ಕೂಡ! ಅದು ಹೇಗೆಂದರೆ, ಅವರಿಬ್ಬರೂ ತಮಗಾಗಿ ಅಥವಾ ಸಂಗಾತಿಗಾಗಿ ಹೇಗೆಯೇ ನಡೆದುಕೊಂಡರೂ ಅದು ಶಿಶ್ನ–ಯೋನಿಯ ಕೂಟಕ್ಕೆ ಪರ್ಯಾಯವಾಗಿದ್ದು, ಸಂಭೋಗದಷ್ಟು ತೃಪ್ತಿ ಕೊಡಲು ಸಾಧ್ಯವಿಲ್ಲ ಎಂದು ಚಂದ್ರಮನ ತಲೆಯಲ್ಲಿದೆ. ಶಿಶ್ನ ಪ್ರವೇಶ ಬಿಲ್ಕುಲ್ ಬೇಡವೆಂಬುದು ಚುಕ್ಕಿಯ ತಲೆಯಲ್ಲಿದೆ. ಹಾಗಾಗಿ ಕಾಮಕೂಟದಲ್ಲಿ ತನಗೆ ಬೇಕಾದದ್ದನ್ನು ಬಿಟ್ಟುಕೊಟ್ಟಂತೆ ಅವನಿಗೆ ಅನ್ನಿಸಿದರೆ, ಬೇಡವಾದದ್ದನ್ನು ಒಪ್ಪಿಕೊಂಡಂತೆ ಆಕೆಗೆ ಅನ್ನಿಸುತ್ತಿದೆ. ಇದರ ನಡುವೆ ಆಕೆಯ ಭಗಾಂಕುರವು ಕಳೆದು ಹೋಗುತ್ತ ಸ್ವತಂತ್ರ ಕಾಮಪ್ರಜ್ಞೆ ಅರಳಲು ಆಗುತ್ತಿಲ್ಲ.

ಮನೋಲೈಂಗಿಕ ಚಿಕಿತ್ಸೆಯಲ್ಲಿ ಅವರಿಬ್ಬರ ನಿಲುವನ್ನೂ ಒಳಾರ್ಥವನ್ನೂ ಅರ್ಥಮಾಡಿಸಿಕೊಟ್ಟೆ. ಪುರುಷ ಸಂಕೇತವಾದ ‘ಯೋನಿಯೊಳಗೆ ವೀರ್ಯಸ್ಖಲನ’ ಎನ್ನುವ ಪರಿಕಲ್ಪನೆಯನ್ನು ಆಧರಿಸಿರುವ ತನಕ ಏಕತಾನೀಯತೆಯಿಂದ ಹೊರಬರಲು ಸಾಧ್ಯವಿಲ್ಲ– ಯಾಕೆಂದರೆ ಸಂಭೋಗದಲ್ಲಿರುವ ಈ ಯಾಂತ್ರಿಕತೆಯು ಗರ್ಭಧಾರಣೆಯನ್ನು ಖಾತರಿ ಮಾಡುತ್ತದೆ. ಹಾಗಾಗಿಯೇ ಏಕತಾನೀಯತೆಯು ಅನೂಚಾನವಾಗಿ ನಡೆದುಕೊಂಡು ಬಂದಿದೆ, ದುರದೃಷ್ಟ ಏನೆಂದರೆ, ಇದರಲ್ಲಿ ಹೆಣ್ಣಿನ ಕಾಮತೃಪ್ತಿ ಲೆಕ್ಕಕ್ಕಿಲ್ಲ! ಮೈ ಜುಮ್ಮೆನಿಸುವ ಕಾಮಸುಖ ಬೇಕಾದರೆ ನಿಶ್ಚಿತತೆಯಿಂದ ಹೊರಬಂದು ಅನಿಶ್ಚಿತತೆಯನ್ನು ಅಪ್ಪಿಕೊಳ್ಳಬೇಕು. ಹೊಸದನ್ನು ಕಂಡುಕೊಳ್ಳಬೇಕಾದರೆ ಹಳೆಯ ಯಾಂತ್ರಿಕ ರೂಢಿಯಿಂದ ಹೊರಬರಬೇಕು. ಅದು ಹೇಗೆಂದರೆ, ಒಬ್ಬರು ತನ್ನ ಕಾಮಪ್ರಜ್ಞೆಯನ್ನು ಕಂಡುಕೊಳ್ಳುತ್ತಿರುವಾಗ ಸಂಗಾತಿಯು ನೆರವು ನೀಡಬೇಕು, ಆ ಸಮಯದಲ್ಲಿ ತನ್ನ ಬಯಕೆಯನ್ನು ಸ್ವಲ್ಪಕಾಲ ದೂರವಿಡಬೇಕು. ಇದು ಹೇಗೆಂದು ಮೂವರೂ ವಿಶದವಾಗಿ ಚರ್ಚಿಸಿದೆವು. ನಂತರ ನಾನಾ ದಾರಿಗಳ ಮೂಲಕ ಸಾಗುತ್ತ ಅವರ ಕಾಮಪ್ರಜ್ಞೆ ಹೀಗೆ ಅರಳಿದೆ:
ಚುಕ್ಕಿ ತನಗೆ ಬೇಕಾದಾಗ ಚಂದ್ರಮನನ್ನು ಆಹ್ವಾನಿಸುತ್ತಾಳೆ. ಬೆನ್ನುಮೇಲಾಗಿ ಮಲಗಿ ಮಾಲೀಶು ಮಾಡಿಸಿಕೊಳ್ಳುತ್ತಾಳೆ. ನಿಧಾನವಾಗಿ ಆಕೆಯ ಮೈ ಅರಳುತ್ತದೆ. ಮುಖ ಮೇಲಾಗಿ ಮಲಗಿ ತೋಳುಗಳನ್ನು ತಲೆಯ ಎರಡೂ ಕಡೆಗೆ ಹರಡಿ ಇಟ್ಟುಕೊಳ್ಳುತ್ತ ಮೈಯನ್ನು ಒಪ್ಪಿಸುತ್ತಾಳೆ. ಅವನು ಅವಳ ಮೈಯನ್ನು ಸವರುತ್ತ, ಮುತ್ತಿಡುತ್ತ ಸ್ತನಗಳನ್ನು ಸ್ಪರ್ಶಿಸುತ್ತಾನೆ. ನಂತರ ಆಕೆಯ ಭಗಾಂಕುರವನ್ನು (ಆಕೆ ಕಲಿಸಿ ಕೊಟ್ಟಂತೆ) ನಿಧಾನವಾಗಿ ನವಿರಾಗಿ, ಬಹಳ ನವಿರಾಗಿ ಸ್ಪರ್ಶಿಸುತ್ತಾನೆ. ಅದರಲ್ಲಿ ರಭಸವಿಲ್ಲ. ತಾಳಬದ್ಧವಾದ ಕ್ರಮವಿದೆ. ಆಕೆ ಅದನ್ನು ಗ್ರಹಿಸಿಕೊಳ್ಳುತ್ತ ನಿಶ್ಚಲಳಾಗಿರುತ್ತಾಳೆ. ಅದೊಂದು ಹಂತಕ್ಕೆ ಬಂದಾಗ ಆಕೆಯ ಮೈಯಲ್ಲಿ ಚೈತನ್ಯ ಸಂಚಾರವಾಗುತ್ತದೆ. ಅವನ ಕೈಯನ್ನು ಬದಿಗೆ ಸರಿಸುತ್ತ ತಾನೇ ಭಗಾಂಕುರವನ್ನು ರಭಸವಾಗಿ ಉಜ್ಜಿಕೊಳ್ಳುತ್ತಾಳೆ. ಅವನು ಆಕೆಯ ಸ್ತನ–ತುಟಿಗಳ ಜೊತೆಗೆ ಪ್ರತಿಕ್ರಿಯಿಸುವಾಗ ಆಕೆ ಭಾವಪ್ರಾಪ್ತಿ ಹೊಂದುತ್ತಾಳೆ. ಹಾಗೆಯೇ ಮುಂದುವರಿದು ಎರಡನೆಯ, ಕೆಲವೊಮ್ಮೆ ಮೂರನೆಯ ಸಲ ಹೊಂದುತ್ತಾಳೆ. ಅವಳು ನಿಶ್ಚಲಳಾದಾಗ ಅವನು ತಬ್ಬಿಕೊಳ್ಳುತ್ತಾನೆ. ಆಕೆಯು ಅವನ ಮೈಮೇಲೆ ಹರಡಿಕೊಂಡು ಅವನ ತೋಳುಗಳಲ್ಲಿ ಮಲಗುತ್ತಾಳೆ.

ಇದಲ್ಲದೆ ಇನ್ನೂ ಕೆಲವು ವಿಷಯಗಳನ್ನು ಇಬ್ಬರೂ ಕಲಿತುಕೊಂಡಿದ್ದಾರೆ. ಚುಕ್ಕಿಯ ಕಾಮವು ಕೆರಳುವುದು ಆಕೆಯ ಮನಸ್ಥಿತಿಯನ್ನು ಅವಲಂಬಿಸಿದೆಯೇ ಹೊರತು ಚಂದ್ರಮನು ಆಕೆಯನ್ನು ತಯಾರು ಮಾಡುವುದರ ಮೇಲಲ್ಲ; ಹಾಗಾಗಿ ಅವನೀಗ ಅದರ ಹೊಣೆ ಹೊರುವುದನ್ನು ಬಿಟ್ಟಿದ್ದಾನೆ. ಅವನ ಆಕ್ರಮಣಕಾರಿ ಮುತ್ತುಗಳಿಂದ ಆಕೆಗೆ ಉಸಿರುಗಟ್ಟುತ್ತದೆ. ಮುತ್ತುಗಳಿಂದ ಉದ್ರೇಕವಾಗುವುದೂ ಇದೆ– ಆಗಾಕೆ ಬಾಯಿಯನ್ನು ಅಗಲವಾಗಿ ತೆರೆದು ಸ್ವೀಕರಿಸುತ್ತಾಳೆ. ಆಕೆ ಬಾಯಿ ತೆರೆಯದಿದ್ದರೆ ಆತ ತನ್ನ ಮಿತಿಯನ್ನು ಅರಿತುಕೊಳ್ಳಬೇಕು. ಆಕೆಗೆ ಉದ್ವೇಗ ಹೆಚ್ಚಾಗಿ ಉಸಿರಾಟದ ತೀವ್ರವಾದಾಗ ಅವನ ಮೇಲೆ ಬರುವುದೂ ಉಂಟು. ಹಾಗೆಂದು ಅದು ಯೋನಿಕೂಟವೆಂದು ಆತ ತಪ್ಪು ತಿಳಿಯಕೂಡದು– ಅವನದನ್ನು ಕೈಯಲ್ಲಿ ಹಿಡಿದು ಭಗಾಂಕುರದ ಸಂಪರ್ಕಕ್ಕೆ ತರುವ ವಿಧಾನವಷ್ಟೆ. ಇತ್ಯಾದಿ. ಇನ್ನು, ಆಕೆಗೆ ಇಲ್ಲಿಯ ತನಕ ಅತ್ಯಂತ ಹೆಚ್ಚು ಸುಖ ಸಿಕ್ಕಿರುವುದು ಯಾವಾಗ ಗೊತ್ತೆ? ಅವನೊಮ್ಮೆ ಅವಳನ್ನು ಆಹ್ವಾನಿಸಿ ಮುಖಮೈಥುನ ಮಾಡುತ್ತ, ಈಕೆ ಸಾಕೆನ್ನುತ್ತಿದ್ದರೂ ನಿಲ್ಲಿಸದೆ ಮುಂದುವರಿಸಿದಾಗ. ಇನ್ನು, ಕೆಲವೊಮ್ಮೆ ಅವಳ ಬೆನ್ನಿಗೆ ಅಂಟಿಕೊಂಡು (spooning) ಗಂಟೆಗಟ್ಟಲೆ ಒರಗಿರುವುದು ಬಲುಖುಷಿಯೆಂದು ಅವನಿಗೆ ಅರ್ಥವಾಗಿದೆ. ಭಗಾಂಕುರವನ್ನು ನಾಲಿಗೆಯಿಂದ ಮಥಿಸುವಾಗ ಒಂದುಸಲ ಯೋನಿಯೊಳಗೆ ಬೆರಳಿಟ್ಟು ತೀಡಲು ನೋಡಿದ. ಆಕೆ ಅಸಮ್ಮತಿ ಸೂಚಿಸಿದಳು. ಹೀಗೆ ಚುಕ್ಕಿ ತನ್ನ ಕಾಮಪ್ರಜ್ಞೆಯನ್ನು ಚಂದ್ರಮನಿಂದ ಪ್ರತ್ಯೇಕವಾಗಿ ಇರಿಸಿಕೊಂಡು, ತನಗೆ ಬೇಕಾದಾದ ಬೇಕಾದ ಭಾಗಗಳನ್ನು ಅವನಿಗೆ ಒಪ್ಪಿಸಿ ಸುಖಪಡೆಯುತ್ತಾಳೆ. ಅವರೀಗ ವಿಮುಖತೆ ಮರೆತು ಸಮೀಪವಾಗಿದ್ದಾರೆ. ಹೊಸ ಭಾಷೆಯಲ್ಲಿ ಸಂಪರ್ಕಿಸುವುದನ್ನು ಕಲಿತಿದ್ದಾರೆ.
ಇನ್ನು ಚಂದ್ರಮನ ಕಾಮಪ್ರಜ್ಞೆ? ಅದಕ್ಕೂ ಮುಕ್ತ ಅವಕಾಶವಿದೆ. ಆತ ತನ್ನಿಷ್ಟದಂತೆ ಮೇಲೆಬಂದು ಯೋನಿಸಂಭೋಗ ನಡೆಸುವಾಗ ಆಕೆ ಬರಮಾಡಿಕೊಳ್ಳುತ್ತ ಉತ್ಸುಕತೆಯಿಂದ ಭಾಗಿಯಾಗುತ್ತಾಳೆ. ಇದರಲ್ಲಿ ಅವಳಿಗೂ ಸುಖವಿದೆ - ಆದರೆ ಭಗಾಂಕುರದ ಸ್ಪರ್ಶದಿಂದ ಸಿಗುವ ಭಾವಪ್ರಾಪ್ತಿ ಅಲ್ಲ. (ಒಂದುವೇಳೆ ಅದು ಬೇಕಾದರೆ ನಿತಂಬವನ್ನು ಚಲಿಸುತ್ತಾಳೆ.) ತನ್ನನ್ನು ಅರ್ಥಮಾಡಿಕೊಳ್ಳುವ ಗಂಡು ತನ್ನಲ್ಲಿ ಸೇರಿಹೋಗಿರುವ, ಅವನನ್ನು ತನ್ನೊಳಗೂ ಹೊರಗೂ ಹೊಂದಿರುವ, ಪರಸ್ಪರ ಲೀನವಾಗಿರುವ ಭಾವವಷ್ಟೆ. ಮೈಗೆ ಮೈ ಬೆಸೆಯುವಾಗ ಮೈತುಂಬ ಸಿಗುವ ಬೆಚ್ಚನೆಯ ಸ್ಪರ್ಶವಂತೂ ಮತ್ತೆಬ್ಬಿಸುತ್ತದೆ. ಒಟ್ಟಿನಲ್ಲಿ, ಗಂಡಿನೊಡನೆ ಪೂರ್ತಿ ಬೆಸೆದುಕೊಂಡರೂ ತನ್ನತನವನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯೇ ಕಾಮಪ್ರಜ್ಞೆಯ ಜೀವಾಳ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.