ಭಾನುವಾರ, ಸೆಪ್ಟೆಂಬರ್ 22, 2019
23 °C

ಬಂದಿದೋ ಮಾವಿನ ಸುಗ್ಗಿ

Published:
Updated:

ರಸ್ತೆಗಳ ಬದಿ ಅರಳಿ ನಿಂತ ಕೆಂಪು ಬಣ್ಣದ ಮೇ ಫ್ಲವರ್‌ಗಳ ಜತೆ ಮಾವು ಕೂಡ ಮಾರುಕಟ್ಟೆಗೆ ಕಾಲಿಟ್ಟಿದೆ. ನಗರದಲ್ಲಿ ಏರುತ್ತಿರುವ ಬಿಸಿಲಿನ ಧಗೆಯ ಜತೆ ಮಾವಿನ ಹಣ್ಣಿನ ಸುವಾಸನೆ ಎಲ್ಲೆಡೆ ಹರಡಿದೆ.        

ಕಲಾಸಿಪಾಳ್ಯ, ಯಶವಂತಪುರ ಮತ್ತು ಮಲ್ಲೇಶ್ವರ ಮಾರುಕಟ್ಟೆ ಹಾಗೂ ಹಾಪ್‌ಕಾಪ್ಸ್‌ ಮಳಿಗೆಗಳನ್ನು ಬಗೆಬಗೆಯ ಮಾವಿನ ಹಣ್ಣುಗಳು ಅಲಂಕರಿಸಿವೆ. ದೂರದರ್ಶನ ಕೇಂದ್ರದ ಎದುರಿನ ರಸ್ತೆಯಲ್ಲಿ ತಲೆ ಎತ್ತಿರುವ ನೂರಾರು ತಾತ್ಕಾಲಿಕ ಮಳಿಗೆಗಳಲ್ಲಿ 60ಕ್ಕೂ ಹೆಚ್ಚು ತಳಿಯ ಮಾವುಗಳು ದೊರೆಯುತ್ತವೆ. 

ತೋತಾಪುರಿ, ನೀಲಂ,ಮಲ್ಲಿಕಾ,ಬಾದಾಮಿ, ಕಸ್ತೂರಿ, ಕೇಸರಿ, ರತ್ನಗಿರಿ, ಅಲ್ಫಾನ್ಸೊ, ಆಪೂಸ್, ಕೇಸರ್‌, ಬೈಗನಪಲ್ಲಿ, ಮಲಗೋವಾ, ಕಾಲಾಪಾಡ್‌, ಹಿಮಾಯತ್‌, ಶುಗರ್‌ ಬೇಬಿ, ದಸ್ಸೇರಿ, ಲಂಗ್ಡಾ, ರಸಾಯಿ, ಇಶಾಡಿ ಹೀಗೆ ತಹರೇವಾರಿ ಹೆಸರು, ತಳಿ, ಬಣ್ಣ ಮತ್ತು ಆಕಾರದ ಹಣ್ಣುಗಳು ಇಲ್ಲಿ ಸಿಗುತ್ತವೆ.

ಮಾರುಕಟ್ಟೆ ಹೋಲಿಸಿದರೆ ಇಲ್ಲಿ ತುಸು ಅಗ್ಗದ ಬೆಲೆಯಲ್ಲಿ ವಿಭಿನ್ನ ಬಗೆಯ ಮಾವು ದೊರೆಯುತ್ತವೆ. ಸಿಂಧೂರ ತಳಿಯ ಮಾವಿನ ಹಣ್ಣು ಅತ್ಯಂತ ಕಡಿಮೆ ಬೆಲೆಗೆ (ಕೆ.ಜಿ. ₹50) ದೊರೆತರೆ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶದ ಇಮಾಮ್‌ ಪಸಂದ್‌ ಸಿಹಿ ಮಾವು (ಕೆ.ಜಿ.₹250) ಅತ್ಯಂತ ದುಬಾರಿಯಾಗಿದೆ.

ಉತ್ತರ ಪ್ರದೇಶದ ದಸ್ಸೇರಿ, ಗುಜರಾತ್‌ನ ಕೇಸರಿ, ಬನಾರಸ್‌ನ ಲಂಗ್ಡಾ, ಮಹಾರಾಷ್ಟ್ರದ ಆಪೂಸ್‌ ಮತ್ತು ರತ್ನಗಿರಿ ಮತ್ತು ಗೋವಾದ ಅಲ್ಫಾನ್ಸೊ ಹೊರತುಪಡಿಸಿದರೆ ಹೆಚ್ಚಿನ ಹಣ್ಣುಗಳು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಿಂದಲೇ ಇಲ್ಲಿಗೆ ಬರುತ್ತವೆ. ಆ ಪೈಕಿ ನೀಲಂ ಮತ್ತು ತೋತಾಪುರಿ ಸೇರಿದಂತೆ ಕೆಲವು ಹಣ್ಣಿನ ತಳಿಗಳು ಬೇಗ ಕೆಡುತ್ತವೆ.  

ಮಾರ್ಚ್‌ಗೆ ಮಾರುಕಟ್ಟೆ ಪ್ರವೇಶಿಸಲು ಆರಂಭಿಸುವ ಹಣ್ಣುಗಳು ಆಗಸ್ಟ್‌ ಮಧ್ಯ ಭಾಗದವರೆಗೂ ಇರುತ್ತವೆ. ಏಪ್ರಿಲ್‌ 15ರ ನಂತರವಷ್ಟೇ ಎಲ್ಲ ತಳಿಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಭರ್ಜರಿ ವ್ಯಾಪಾರವಾಗುವುದು ಮೇ ತಿಂಗಳಲ್ಲಿ. ಲಾಭ,ನಷ್ಟ ನಿರ್ಣಯವಾಗುವುದು ಕೂಡ ಇದೇ ತಿಂಗಳಲ್ಲಿ. ಸದ್ಯ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಹಣ್ಣುಗಳು ಮಾತ್ರ ಮಾರುಕಟ್ಟೆಗೆ ಬಂದಿವೆ. ಕರ್ನಾಟಕದ ರಾಮನಗರ, ಕೋಲಾರ, ಚಿಂತಾಮಣಿ, ಚಿಕ್ಕಬಳ್ಳಾಪುರ ಭಾಗದ ಹಣ್ಣು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ತಡವಾಗಿ ಅಂದರೆ ಜೂನ್‌ ಕೊನೆಯ ವಾರ ನೀಲಂ ಮಾರುಕಟ್ಟೆ ಪ್ರವೇಶಿಸುತ್ತದೆ. ಅದರೊಂದಿಗೆ ಮಾವಿ ಹಣ್ಣಿನ ಋತು ಕೊನೆಗೊಳ್ಳುತ್ತದೆ.

ತಮಿಳುನಾಡಿನ ತಿರುವಣ್ಣಾಮಲೈ ಸುತ್ತಮುತ್ತಲಿನ ಗ್ರಾಮದ ನೂರಕ್ಕೂ ಹೆಚ್ಚು ಕುಟುಂಬಗಳು ಮಾರ್ಚ್‌ ಆರಂಭದಲ್ಲಿಯೇ ಇಲ್ಲಿ ಬಿಡಾರ ಹೂಡಿದ್ದು ಮೂರ‍್ನಾಲ್ಕು ತಿಂಗಳು ವ್ಯಾಪಾರ ಮುಗಿಸಿ ಮರಳುತ್ತವೆ. ಈ ಪೈಕಿ ಹೆಚ್ಚಿನವರು ಸಂಬಂಧಿಗಳು. ಕೆಲವರು ಬೆಂಗಳೂರಿನಲ್ಲಿಯೇ ಬೇರೆ ಹಣ್ಣುಗಳ ವ್ಯಾಪಾರದಲ್ಲಿ ತೊಡಗಿದರೆ, ಉಳಿದವರು ತಮಿಳುನಾಡಿಗೆ ಮರಳಿ ಕುಲಕಸುಬಿನಲ್ಲಿ ತೊಡಗುತ್ತಾರೆ. ಮಾವಿನ ಹಣ್ಣಿನ ಋತು ಆರಂಭವಾದರೆ ಮತ್ತೆ ಬೆಂಗಳೂರಿನ ಹಾದಿ ಹಿಡಿಯುತ್ತಾರೆ. 

‘ಕಳೆದ 25–30 ವರ್ಷಗಳಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಡಿ ಹಾಕಿ ವ್ಯಾಪಾರ ಮಾಡುತ್ತಿದ್ದೆವು. ಹತ್ತು ವರ್ಷಗಳ ಹಿಂದೆ ಮಂಡಿಗೆ ಬೆಂಕಿ ಕಾರಣ ಅರಮನೆ ಮೈದಾನದಲ್ಲಿ ಮಂಡಿ ಹಾಕಲು ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ರಸ್ತೆ ಬದಿ ಟೆಂಟ್‌ ಹಾಕಿ ವ್ಯಾಪಾರ ಮಾಡುತ್ತೇವೆ’ ಎನ್ನುತ್ತಾರೆ ತಿರುವಣ್ಣಾಮಲೈನ ರವಿ. 

ಕಳೆದ ವರ್ಷ ಭಾರಿ ಮಾವಿನ ಫಸಲು ಬಂದ ಕಾರಣ ನಷ್ಟ ಅನುಭವಿಸಬೇಕಾಯಿತು. ಈ ಬಾರಿ ಮಳೆ ಕಡಿಮೆಯಾದ ಕಾರಣ ಫಸಲು ಇಳಿಮುಖವಾಗಿದ್ದು ಮಾರುಕಟ್ಟೆಗೆ ಕಡಿಮೆ ಹಣ್ಣು ಬರುವ ನಿರೀಕ್ಷೆ ಇದೆ. ಇದರಿಂದ ಸ್ವಲ್ಪ ಲಾಭವಾಗಬಹುದು ಎನ್ನುತ್ತಾರೆ ಪಕ್ಕದ ಅಂಗಡಿಗಳಲ್ಲಿದ್ದ ವಿಷ್ಣು ಮತ್ತು ಸೈಯ್ಯದ್‌ ಸುಲೇಮಾನ್‌. 

ಬೆಳಿಗ್ಗೆ ಏಳರಿಂದಲೇ ವ್ಯಾಪಾರ ಶುರುವಾಗುತ್ತದೆ. ರಾತ್ರಿ 10.30ರವರೆಗೂ ಗ್ರಾಹಕರು ಬರುತ್ತಾರೆ. ಇಡೀ ಕುಟುಂಬದ ಸದಸ್ಯರು ಇಲ್ಲಿಯೇ ಇದ್ದೇವೆ. ಮೂರ್ನಾಲ್ಕು ತಿಂಗಳು ಇಲ್ಲಿಯೇ ಅಡುಗೆ, ಊಟ ಮತ್ತು ನಿದ್ದೆ ಎಂದು ವಾಸಂತಿ ಮತ್ತು ಪಾಂಡ್ಯನ್‌ ಹೇಳುತ್ತಾರೆ.

ರಾಜ್ಯದ ವಿವಿಧ ಮೂಲೆಗಳಲ್ಲಿ ಬೆಳೆಯುವ ವೈವಿಧ್ಯಮಯ ಮಾವಿನ ಹಣ್ಣುಗಳ ರುಚಿಯನ್ನು ಗ್ರಾಹಕರಿಗೆ ಪರಿಚಯಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಕೂಡ ಲಾಲ್‌ಬಾಗ್‌ನಲ್ಲಿ ಮಾವು ಮೇಳ ಮಾಡಲು ತಯಾರಿ ಆರಂಭಿಸಿದೆ.   

ಇಲ್ಲಿ ನೈಸರ್ಗಿಕವಾಗಿ ಮಾಗುವ ಮಾವು 

ತಾತ್ಕಾಲಿಕ ಟೆಂಟ್‌ಗಳಲ್ಲಿಯೇ ಹಣ್ಣುಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಯಾವುದೇ ರಾಸಾಯನಿಕ ಅಥವಾ ಕಾರ್ಬೈಡ್‌ ಬಳಸಿ ಹಣ್ಣುಗಳನ್ನು ಮಾಗಿಸುವುದಿಲ್ಲ. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳು ಅಗ್ಗದ ಬೆಲೆಗೆ ಸಿಗುವುದು ಇಲ್ಲಿಯ ವೈಶಿಷ್ಟ್ಯಎನ್ನುತ್ತಾರೆ ಇಳಯರಾಜ ಮತ್ತು ವಿಜಯ್‌.  

ಇಳಯರಾಜ ವೃತ್ತಿಯಿಂದ ಮೆಕ್ಯಾನಿಕಲ್‌ ಎಂಜಿನಿಯರ್‌. ಪೀಣ್ಯದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾ ತಂದೆಗೆ ನೆರವಾಗುತ್ತಾರೆ. ಅವರ ಸಹೋದರ ವಿಜಯ್‌ ಕೂಡ ಬಿ.ಎಸ್‌ಸ್ಸಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವೀಧರರಾದರೂ ವ್ಯಾಪಾರದಲ್ಲಿಯೇ ತೊಡಗಿಕೊಂಡಿದ್ದಾರೆ. ‘ಮಾವು ಮಾರಾಟ ಮಾಡಿ ಬಂದ ಹಣದಿಂದ ನಾವು ವಿದ್ಯಾವಂತರಾಗಿದ್ದೇವೆ. ಈ ವೃತ್ತಿಯನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎನ್ನುವ ಈ ಸಹೋದರರು ತಮಿಳನಂತೆಯೇ ಕನ್ನಡವನ್ನೂ ನಿರರ್ಗಳವಾಗಿ ಮಾತನಾಡಬಲ್ಲರು. 

ಒಂದೇ ಸೂರಿನಡಿ ಗುಣಮಟ್ಟದ, ನೈಸರ್ಗಿಕವಾಗಿ ಮಾಗಿಸಿದ ಹಲವು ಜಾತಿಯ ಸ್ವಾದಿಷ್ಟ ಮಾವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಹೀಗಾಗಿ ಗ್ರಾಹಕರು ತಮ್ಮನ್ನು ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ ಎನ್ನುವುದು ವಿಜಯ್‌ ಅಭಿಪ್ರಾಯ.

ಪ್ರಮುಖಾಂಶ

* ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಾವು ಬೆಳೆಯುತ್ತಿರುವ ರಾಷ್ಟ್ರ ಭಾರತ

* ವಿಶ್ವದ ಒಟ್ಟು ಮಾವು ಉತ್ಪಾ­ದನೆಯಲ್ಲಿ ಭಾರತದ ಪಾಲು ಅರ್ಧ­ದಷ್ಟಿದೆ

* ದೇಶದಲ್ಲಿ ಸುಮಾರು 15.2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 95 ಲಕ್ಷ ಟನ್ ಮಾವು ಇಳುವರಿ 

* ದೇಶದ ಒಟ್ಟು ಮಾವು ಉತ್ಪಾದನೆಯಲ್ಲಿ ಮೂರನೇ ಎರಡರಷ್ಟು ಪಾಲು ಆಂಧ್ರಪ್ರದೇಶ, ಉತ್ತರಪ್ರದೇಶ ರಾಜ್ಯಗಳದ್ದು

ಕರ್ನಾಟಕ ಮೂರನೇ ಸ್ಥಾನದಲ್ಲಿದೆ 

* ಪ್ರಪಂಚದ ಒಟ್ಟು 80ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭಾರತದ ಮಾವು ರಫ್ತು ಆಗುತ್ತಿದೆ

* ವಿದೇಶಕ್ಕೆ 60 ಸಾವಿರ ಟನ್‌  ಮಾವು ವಿದೇಶಗಳಿಗೆ ರವಾನೆಯಾಗುತ್ತದೆ 

Post Comments (+)