ಸೋಮವಾರ, ಸೆಪ್ಟೆಂಬರ್ 16, 2019
26 °C
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ ರೈತ ಸಂಘದ ಪದಾಧಿಕಾರಿಗಳ ನಿಯೋಗ

ತ್ವರಿತಗತಿಯಲ್ಲಿ ನೀರು ಹರಿಸುವಂತೆ ರೈತ ಸಂಘ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಿ ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಯ ರೈತರರ ಕೃಷಿ ಭೂಮಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ರೈತಸಂಘದ ಜಿಲ್ಲಾ ಘಟಕ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಅವರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸಚಿವರನ್ನು ಕಂಡು ಜಿಲ್ಲೆಗೆ ಶೀಘ್ರ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿತು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಿವಶಂಕರರೆಡ್ಡಿ ಅವರು, ‘ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೈಗಾರಿಕಾ ಪ್ರದೇಶ ಹಾಗೂ ದೇವನಹಳ್ಳಿ ಬಳಿ ಹೆದ್ದಾರಿ ಬದಿ ಎಚ್.ಎನ್.ವ್ಯಾಲಿ ಕಾಮಗಾರಿಗೆ ಅನುಮತಿ ಪಡೆದುಕೊಳ್ಳದ ಕಾರಣ ಕೆಲಸ ವಿಳಂಬವಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದೆ. ಎರಡು ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಂದವಾರ ಕೆರೆಗೆ ನೀರು ಹರಿಸಲಾಗುತ್ತದೆ’ ಎಂದು ಹೇಳಿದರು.

‘ಕೆರೆಗಳಿಗೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆ ಹಾಗೂ ಪೋಷಕ ಕಾಲುವೆಗಳ ಹೂಳೆತ್ತುವ ಕಾಮಗಾರಿ ನಡೆಸುವಂತೆ ಮತ್ತು ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದು ಕೆರೆಗಳಲ್ಲಿನ ಜಾಲಿ ಗಿಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಈಗಾಗಲೇ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಎತ್ತಿನಹೊಳೆ, ಮೇಕೆದಾಟು, ಪಕ್ಕದ ರಾಜ್ಯಕ್ಕೆ ಬಂದಿರುವ ಕೃಷ್ಣಾ ಮತ್ತು ತುಂಗಭದ್ರಾ, ಗೋದಾವರಿ ನೀರಾವರಿ ಯೋಜನೆಗಳ ಸಹಾಯದಿಂದ ತ್ವರಿತಗತಿಯಲ್ಲಿ ಜಿಲ್ಲೆಗೆ ನೀರು ತರಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಿಯೋಗದಲ್ಲಿ ಹೋಗಿ ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ರೈತ ಸಂಘದ ಪದಾಧಿಕಾರಿಗಳಾದ ಶಿಡ್ಲಘಟ್ಟದ ತಾದೂರು ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ, ಹಿತ್ತಲಹಳ್ಳಿ ರಮೇಶ್, ಮುನಿನಂಜಪ್ಪ, ಟಿ.ಕೃಷ್ಣಪ್ಪ, ಬಚ್ಚೇಗೌಡ, ಚನ್ನಕೃಷ್ಣಪ್ಪ, ರಾಮಕೃಷ್ಣಪ್ಪ, ರವಿ, ರಮೇಶ್, ಚಿಕ್ಕಬಳ್ಳಾಪುರದ ರಾಮಾಂಜಿನಪ್ಪ, ಗುಡಿಬಂಡೆಯ ರಾಮನಾಥ್, ಚಿಂತಾಮಣಿ ರಮಣಾರೆಡ್ಡಿ, ಬಾಗೇಪಲ್ಲಿ ಲಕ್ಷಣ್ ರೆಡ್ಡಿ, ಗೌರಿಬಿದನೂರಿನ ನರಸಿಂಹರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.

Post Comments (+)