ಶನಿವಾರ, ಮೇ 28, 2022
26 °C

ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ವೇದವ್ಯಾಸ ಕಾಮತ್‌ಗೆ ಲೋಬೊ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ನಾನು ಕುಡ್ಸೆಂಪ್‌ ಯೋಜನಾ ನಿರ್ದೇಶಕನಾಗಿದ್ದ ಅವಧಿಯಲ್ಲಿ ಕಳಪೆ ಕಾಮಗಾರಿ ನಡೆಸಿರುವುದನ್ನು ಶಾಸಕ ಡಿ.ವೇದವ್ಯಾಸ ಕಾಮತ್‌ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಧ್ಯವಾಗದಿದ್ದರೆ ಅವರು ರಾಜಕೀಯದಿಂದ ನಿವೃತ್ತಿ ಪಡೆಯಲಿ’ ಎಂದು ಮಾಜಿ ಶಾಸಕ ಜೆ.ಆರ್‌.ಲೋಬೊ ಸವಾಲು ಹಾಕಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಮಹಾನಗರ ಪಾಲಿಕೆ ಆಯುಕ್ತನಾಗಿದ್ದ ಮತ್ತು ಕುಡ್ಸೆಂಪ್‌ ಯೋಜನೆಯ ಯೋಜನಾ ನಿರ್ದೇಶಕನಾಗಿದ್ದ ಅವಧಿಯಲ್ಲಿ ನಿರ್ಮಿಸಿದ ಎಲ್ಲ ನೀರು ಸಂಗ್ರಹಾಗಾರಗಳು, ನೀರು ಸರಬರಾಜು ಮತ್ತು ವಿತರಣಾ ಕೊಳವೆ ಮಾರ್ಗಗಳು ಇವೆ. ತಜ್ಞರಿಂದ ಈಗಲೂ ತಪಾಸಣೆ ನಡೆಸಲಿ. ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪ ಸಾಬೀತಾದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ’ ಎಂದರು.

ವೇದವ್ಯಾಸ ಕಾಮತ್‌ ಶಾಸಕರಾಗಿ ಒಂದು ವರ್ಷ ಕಳೆದಿದೆ. ನಗರದ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಯಾವುದಾದರೂ ಕೆಲಸ ಮಾಡಿದ್ದರೆ ಜನರ ಎದುರು ಹೇಳಲಿ. ಪತ್ರ ಬರೆಯುವುದು, ಮನವಿ ಸಲ್ಲಿಸುವುದರ ಹೊರತಾಗಿ ಏನನ್ನಾದರೂ ಮಾಡಿದ್ದಾರೆಯೇ? ಈ ವಿಚಾರದಲ್ಲಿ ಅವರು ಕೇವಲ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆರೋಪಗಳಲ್ಲಿ ಹುರುಳಿಲ್ಲ:

ಕುಡ್ಸೆಂಪ್‌ ಯೋಜನೆಯಡಿ ನಗರದಲ್ಲಿ ಸಂಪೂರ್ಣವಾಗಿ ನೀರು ವಿತರಣಾ ಜಾಲ ನಿರ್ಮಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಶಾಸಕರು ಹೇಳಿದ್ದಾರೆ. ಆರಂಭದಲ್ಲಿ ಎಡಿಬಿ 1ರ ಅಡಿ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ₹ 170 ಕೋಟಿ ಮತ್ತು ಒಳಚರಂಡಿ ಕಾಮಗಾರಿಗೆ ₹ 41 ಕೋಟಿ ಒದಗಿಸಲಾಗಿತ್ತು. ಆದರೆ, ಸ್ಥಳೀಯ ಸಂಸದರು, ಶಾಸಕರು ಮತ್ತು ಮಹಾನಗರ ಪಾಲಿಕೆ ಸದಸ್ಯರ ಒತ್ತಾಯದ ಮೇರೆಗೆ ಬದಲಾವಣೆ ಮಾಡಲಾಯಿತು. ನೀರು ಪೂರೈಕೆ ₹ 110 ಕೋಟಿ ನೀಡಲಾಯಿತು. ಉಳಿದ ಮೊತ್ತ ಹಾಗೂ ಇತರೆ ಕೆಲವು ಯೋಜನೆಗಳ ಅನುದಾನ ಸೇರಿ ₹ 145 ಕೋಟಿಯನ್ನು ಒಳಚರಂಡಿ ಕಾಮಗಾರಿಗೆ ನೀಡಲಾಗಿತ್ತು. ಈ ಮಾಹಿತಿ ಅರಿಯದೇ ಶಾಸಕರು ಅರೋಪ ಮಾಡುತ್ತಿದ್ದಾರೆ ಎಂದರು.

ಎಡಿಬಿ 1ರ ಅಡಿ ಹಣದ ಕೊರತೆಯ ಕಾರಣದಿಂದ ನೀರು ಪೂರೈಕೆಯ ಮುಖ್ಯ ಕೊಳವೆಗಳನ್ನು ಮಾತ್ರ ಅಳವಡಿಸಲಾಯಿತು. 5,000 ಕಿ.ಮೀ. ಉದ್ದದ ವಿತರಣಾ ಜಾಲ ಬದಲಿಸಲಿಲ್ಲ. ಇದರಿಂದಾಗಿ ಸಮಸ್ಯೆ ಉಂಟಾಗಿದೆ. ವಾಸ್ತವಿಕ ಸಮಸ್ಯೆ ಅರಿಯದೇ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.

‘ತುಂಬೆ ಹೊಸ ಅಣೆಕಟ್ಟೆಗೆ ಮಂಜೂರಾತಿ ನೀಡಿರುವುದು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಂದು ವೇದವ್ಯಾಸ ಕಾಮತ್‌ ಸುಳ್ಳು ಹೇಳಿದ್ದಾರೆ. 2007ರ ಫೆಬ್ರುವರಿ 3ರಂದು ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ₹ 40 ಕೋಟಿ ವೆಚ್ಚದ ಯೋಜನೆಗೆ ಮಂಜೂರಾತಿ ನೀಡಿದ್ದರು. ಆ ನಂತರ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ನಾನು ಶಾಸಕನಾದ ಬಳಿಕ 2014ರ ಏಪ್ರಿಲ್‌ 28ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ₹ 75.50 ಕೋಟಿ ವೆಚ್ಚದ ಪರಿಷ್ಕೃತ ಯೋಜನೆಗೆ ಮಂಜೂರಾತಿ ಕೊಡಿಸಿದೆ. ಆ ಬಳಿಕ ಕಾಮಗಾರಿ ನಡೆದಿದೆ. ಶಾಸಕರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು’ ಎಂದು ಲೋಬೊ ಹೇಳಿದರು.

ತುಂಬೆ ಅಣೆಕಟ್ಟೆಯಿಂದ ನಗರಕ್ಕೆ ನೀರು ಪೂರೈಸುವ ಮಾರ್ಗಮಧ್ಯೆ ಗ್ರಾಮೀಣ ಪ್ರದೇಶದವರ ಬಳಕೆಗಾಗಿ ಶೇಕಡ 20ರಷ್ಟು ನೀರು ಪಡೆಯಲಾಗುತ್ತಿದೆ. ನಗರದಲ್ಲಿ ಶೇ 30ರಷ್ಟು ಸೋರಿಕೆ ಆಗುತ್ತಿದೆ. ಹಳೆಯ 2.5 ಎಂ.ಜಿ.ಡಿ. ಸಾಮರ್ಥ್ಯದ ಕೊಳವೆಯಲ್ಲಿ ಶುದ್ಧೀಕರಿಸಿದ ನೀರನ್ನು ಹಳ್ಳಿಗಳಿಗೆ ಪೂರೈಸಬೇಕು. ನಗರದಲ್ಲಿನ ಸೋರಿಕೆ ತಪ್ಪಿಸಬೇಕು. ಆಗ ನಗರದಲ್ಲಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ತುಂಬೆಯಲ್ಲಿ ಕೆಲವು ವರ್ಷಗಳವರೆಗೆ 7 ಮೀಟರ್‌ವರೆಗೆ ನೀರು ನಿಲ್ಲಿಸದಿದ್ದರೂ ಸಮಸ್ಯೆ ಆಗುವುದಿಲ್ಲ ಎಂದರು.

ಭಾಸ್ಕರ ಮೊಯ್ಲಿ, ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕೆ., ನವೀನ್ ಡಿಸೋಜಾ, ಹರಿನಾಥ್, ವಿನಯ ರಾಜ್, ಕೇಶವ ಮರೋಳಿ, ಟಿ.ಕೆ. ಸುಧೀರ್, ಪ್ರೇಮ್ ಲಾಲ್‍ಬಾಗ್, ನೀರಜ್ ಪಾಲ್, ರಮಾನಂದ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.