ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಸಿಬ್ಬಂದಿಗೆ ತಪಾಸಣೆ

ಪೊಲೀಸರು ಆರೋಗ್ಯದ ಕಡೆ ಗಮನ ಹರಿಸಲಿ: ಶಿವಪ್ರಕಾಶ್‌ ದೇವರಾಜ್‌ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಆರೋಗ್ಯದ ಕಡೆಗೂ ಗಮನ ಹರಿಸಬೇಕು. 40 ವರ್ಷ ಮೀರಿದ ಪ್ರತಿಯೊಬ್ಬ ಸಿಬ್ಬಂದಿ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಾಲ್ಕು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮನೋ ಚೈತನ್ಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯಾವುದೇ ವ್ಯಕ್ತಿಗೆ 40 ವರ್ಷ ಮೀರಿದರೆ ಅವರ ದೇಹ ರೋಗಗಳ ಆಗರವಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯ ಭಾಗ್ಯ ಪಡೆಯಬೇಕು. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚಿನ ಆರೋಗ್ಯ ಸೌಲಭ್ಯ ನೀಡಲಾಗಿದೆ. ಇಷ್ಟೆಲ್ಲಾ ಆರೋಗ್ಯ ತಪಾಸಣೆಗೆ ಅವಕಾಶಗಳಿದ್ದರೂ, ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ನಿರ್ಲಕ್ಷ್ಯ ಬಿಟ್ಟು ಆರೋಗ್ಯ ಕಾಳಜಿ ಮಾಡಬೇಕು’ ಎಂದರು.

‘ನಮ್ಮ ದೈನಂದಿನ ಜೀವನದಲ್ಲಿ ಚಟುವಟಿಕೆಯಿಂದ ಇರಲು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾದರೆ ಮೆಡಿಕಲ್ ಅಂಗಡಿಗಳಿಗೆ ಹೋಗಿ ಅವರ ಕೊಡುವ ಮಾತ್ರೆಗಳಿಗೆ ಸೀಮಿತವಾಗದೆ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಆಗಾಗ ವೈದ್ಯರ ಸಲಹೆ ಪಡೆದು ಅದರಂತೆ ಶಿಸ್ತಿನ ಜೀವನ ನಡೆಸಬೇಕು’ ಎಂದರು.

ಎಸ್‌ಎಸ್ಎನ್ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯ ಡಾ.ಎನ್.ಸೋಮಶೇಖರ್ ಮಾತನಾಡಿ ‘ಹೃದ್ರೋಗ ಸಮಸ್ಯೆ ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚು ಜನರು ಇದರಿಂದ ಸಾವಿಗೀಡಾಗುತ್ತಿದ್ದಾರೆ. ಪೊಲೀಸ್ ಹಾಗೂ ವೈದ್ಯ ವೃತ್ತಿಗಳು ಬಿಡುವಿಲ್ಲದ ವೃತ್ತಿಗಳಾಗಿವೆ. ಹಗಲು ರಾತ್ರಿ ಎನ್ನದೇ ಜನರ ಸೇವೆಯನ್ನು ಮಾಡುವ ಶ್ರೇಷ್ಠ ಹಾಗೂ ಒತ್ತಡದ ಕೆಲಸವಾಗಿದೆ. ಹೀಗಾಗಿ ನಾವು ವೃತ್ತಿಯ ಬದ್ಧತೆ ಜೊತೆಗೆ ಆರೋಗ್ಯದ ಕಡೆಗೆ ಗಮನ ಹರಿಸಿದಾಗ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ’ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ, ಡಿವೈಎಸ್‌ಪಿ ಗಂಗಾಧರಸ್ವಾಮಿ, ವೈದ್ಯಾಧಿಕಾರಿಗಳಾದ ಡಾ.ಪ್ರಸಾದ್, ಡಾ.ವೇಣು, ಕಾರ್ಯಕ್ರಮ ಸಂಯೋಜಕ ವಿಶ್ವನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.