ಸೋಮವಾರ, ಸೆಪ್ಟೆಂಬರ್ 20, 2021
22 °C
ಪ್ರಜಾವಾಣಿ ವರದಿಗೆ ಸ್ಪಂದನೆ

ರಸ್ತೆಗೆ ಕೊನೆಗೂ ಕೆಂಪು ಮಣ್ಣು

ತೋಟೇಂದ್ರ ಎಸ್ ಮಾಕಲ್ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ರಾಷ್ಟ್ರೀಯ ಹೆದ್ದಾರಿ 150 ರಿಂದ ಸಂಪರ್ಕ ಕಲಿಸುವ ಯರಗೋಳ–ಯಾಗಾಪುರ ರಸ್ತೆಯ ಕುರಿತು ’ಪ್ರಜಾವಾಣಿ‘ಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹದಗೆಟ್ಟ ರಸ್ತೆಗಳಿಗೆ ಗುರುವಾರ ರಸ್ತೆ ಮೇಲಿನ ತಗ್ಗುಗಳನ್ನು ಮುಚ್ಚಿ, ಚರಂಡಿಯನ್ನ ಸ್ವಚ್ಛಗೊಳಿಸಿದ್ದಾರೆ.

ಕೆಸರಾಗಿರುವ ರಸ್ತೆಯ ಮೇಲೆ ಕೆಂಪು ಮಣ್ಣು ಹಾಕಿ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಪ್ರಜಾವಾಣಿ ವರದಿ ಸ್ಪಂದನೆ: ಏಪ್ರಿಲ್ 27ರಂದು 'ಕೆಸರು ಗದ್ದೆಗಳಲ್ಲ ಇವು, ಗ್ರಾಮದ ರಸ್ತೆಗಳು!' ಎನ್ನುವ ತಲೆಬರಹದಲ್ಲಿ ’ಪ್ರಜಾವಾಣಿ‘ ವರದಿ ಪ್ರಕಟಿಸಿ ಸಮಸ್ಯೆಯ ಭೀಕರತೆಯ ಬಗ್ಗೆ ಗಮನ ಸೆಳೆದಿತ್ತು.

ದಿಢೀರ್ ರಸ್ತೆ ತಡೆ ಪ್ರತಿಭಟನೆ ಜೀವ ಕಂಟಕವಾದ ರಸ್ತೆಯ ಕುರಿತು, ಗ್ರಾಮದ ಸಾರ್ವಜನಿಕರು, ವ್ಯಾಪಾರಿಗಳು ಯುವಕರು, ಮಹಿಳೆಯರು, ಮಕ್ಕಳು ಏಪ್ರಿಲ್ 29ರಂದು ದಿಢೀರ್ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು.

ಈ ಕುರಿತು ಪ್ರಜಾವಾಣಿ 'ರಸ್ತೆ ಸುಧಾರಣೆ ನಿರ್ಲಕ್ಷ್ಯ: ದಿಢೀರ್ ಪ್ರತಿಭಟನೆ' ತಲೆ ಬರಹದಡಿ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ತನ್ನ ಆರ್ಥಿಕ ಇತಿ ಮಿತಿಯಲ್ಲಿ ಜೀವ ಕಂಟಕ ರಸ್ತೆಗಳ ಮೇಲೆ ಇದ್ದ ಬೃಹದಾಕಾರದ ಹೊಂಡಗಳನ್ನು ಮುಚ್ಚಿದೆ.

ರಸ್ತೆ ಮೇಲೆ ಕೆಂಪು ಮಣ್ಣು ಹಾಕಿಸುವ ಮೂಲಕ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ಪಾದಚಾರಿಗಳಿಗೆ, ವಾಹನಗಳಿಗೆ, ಸುಗಮ ಸಂಚಾರಕ್ಕೆ ತಾತ್ಕಾಲಿಕ ಅನುಕೂಲ ಮಾಡಿಕೊಟ್ಟಿದೆ.

ನಲ್ಲಿ ನೀರು ನಿಯಂತ್ರಿಸಬೇಕು: ಈ ರಸ್ತೆ ಮೇಲೆ ಸಾರ್ವಜನಿಕ ನಲ್ಲಿಗಳಿದ್ದು ಅವುಗಳಿಂದ ನಿರಂತರ ಹರಿದು ಬರುವ ನೀರು ರಸ್ತೆ ಮೇಲೆ ಸಂಗ್ರಹವಾಗುವುದರಿಂದ ಮಣ್ಣಿನಿಂದ ಕೂಡಿರುವ ರಸ್ತೆ ಸಂಪೂರ್ಣ ಕೆಸರಾಗುತ್ತದೆ. ಕೂಡಲೇ ಗ್ರಾಮ ಪಂಚಾಯಿತಿ ಸಿಬ್ಬಂದಿ ನಲ್ಲಿಗಳನ್ನು ಸಮಯಕ್ಕೆ ಸರಿಯಾಗಿ ನೀರು ಬರುವಂತೆ ನಿಯಂತ್ರಿಸುವುದರಿಂದ ರಸ್ತೆಯ ಮೇಲೆ ಕೆಸರಾಗುವುದನ್ನು ತಡೆಯಬಹುದಾಗಿದೆ.

ತಾತ್ಕಾಲಿಕ ಸುಧಾರಣೆ ಸಾಲದು...
ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸಿಕೊಳ್ಳುವ ಈ ರಸ್ತೆ ಸುಮಾರು ಹತ್ತರಿಂದ ಹದಿನೈದು ಹಳ್ಳಿಗಳಿಗೆ, ಸುತ್ತಮುತ್ತಲಿನ ತಾಂಡಾಗಳಿಗೆ ಸಂಪರ್ಕಿಸುತ್ತದೆ ಸದ್ಯಕ್ಕೆ ಬೇಸಿಗೆ ಕಾಲ ಆಗಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಮುಂದಿನ ಮಳೆಗಾಲದ ಸಮಯದಲ್ಲಿ ಸಂಪೂರ್ಣ ಹದಗೆಡುವ ಲಕ್ಷಣಗಳಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಇತ್ತ ಗಮನ ಹರಿಸಿದರೆ ಒಳಿತು ಎನ್ನುತ್ತಾರೆ ಗ್ರಾಮಸ್ಥರು.

* ಸದ್ಯಕ್ಕೆ ರಸ್ತೆ ಮೇಲಿನ ನೀರು ನಿಂತಿದೆ. ಇದರಿಂದ ಜನರಿಗೆ ಅನುಕೂಲಕರವಾಗಿದೆ. ಇನ್ನು ರಸ್ತೆ ಮೇಲೆ ಡಾಂಬರೀಕರಣ ಮಾಡಬೇಕು

–ಜಗದೀಶ್ ಎಸ್ ಚಿಕ್ಕಬಾನರ
ಯರಗೋಳ ಗ್ರಾಮದ ಮುಖಂಡ

* ಅತಿ ಶೀಘ್ರದಲ್ಲಿಯೇ ರಸ್ತೆ ಡಾಂಬರೀಕರಣ ಅಥವಾ ಕಾಂಕ್ರೀಟೀಕರಣ ಆದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
–ಕರಿಯಪ್ಪ ಅಲ್ಲಿಪೂರ, ಯರಗೋಳ ಗ್ರಾಮದ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.