ಶುಕ್ರವಾರ, ಸೆಪ್ಟೆಂಬರ್ 17, 2021
23 °C
ಬಂಗಾರ ಕೊಳ್ಳೋ ಶುಭ ಘಳಿಗೆ, ಆಭರಣ ಖರೀದಿಸಲು ಮುಗಿಬಿದ್ದ ಹೆಂಗಳೆಯರು

ಅಕ್ಷಯ ತೃತೀಯ, ಚಿನ್ನ ಖರೀದಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಅಕ್ಷಯ ತೃತೀಯ ದಿನವಾದ ಮಂಗಳವಾರ ನಗರದ ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿಯ ಭರಾಟೆ ಜೋರಾಗಿತ್ತು.

ಅಕ್ಷಯ ತೃತೀಯ ದಿನದಂದು ಬಂಗಾರವನ್ನು ಕೊಂಡರೆ ವರ್ಷವಿಡೀ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿಂದ ಜನರು ಚಿನ್ನಾಭರಣ ಮಳಿಗೆಗಳಿಗೆ ಭೇಟಿ ನೀಡಿ ಚಿನ್ನದ ಆಭರಣಗಳನ್ನು ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಬಂಗಾರದ ಓಲೆ, ಉಂಗುರ, ಮೂಗು ನತ್ತು. ಚೈನು, ಬೆಳ್ಳಿಯ ಕಾಲು ಚೈನು, ಲಕ್ಷ್ಮೀ ಮುದ್ರೆಯ ಚಿನ್ನದ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಇತ್ತು.

ಚಿನ್ನದ ಮಳಿಗೆಗಳು ಇರುವ ಗಂಗಮ್ಮಗುಡಿ ರಸ್ತೆಯಲ್ಲಿ ಮಧ್ಯಾಹ್ನದ ನಂತರ ಚಿನ್ನ ಖರೀದಿಗೆ ಬಂದವರ ದಟ್ಟಣೆ ಕಂಡುಬಂತು. ಅನೇಕ ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ಮಂಗಳವಾರ 916 ಹಾಲ್ ಮಾರ್ಕ್ ಇರುವ ಒಂದು ಗ್ರಾಂ ಆಭರಣ ಚಿನ್ನ ₹3,100, ಅಪರಂಜಿ ಚಿನ್ನ ₹3,300ರ ಆಸುಪಾಸು ಮಾರಾಟವಾಯಿತು.

‘ಜನರು ಈ ದಿನ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಚಿನ್ನ ಖರೀದಿಸುತ್ತಾರೆ. ಬಡವರು ಕನಿಷ್ಠ ಮೂಗಿನ ನತ್ತು ಖರೀದಿಸಿದರೆ, ಶ್ರೀಮಂತರು ಚೈನು, ನೆಕ್ಲೆಸ್, ಬಳೆ ಹೊಂದಿರುವ 200 ಗ್ರಾಂ ನ ಸೆಟ್‌ ಖರೀದಿಸುತ್ತಾರೆ‘ ಎಂದು ನವೀನ್‌ ಜೂವೆಲರ್ಸ್‌ ಮಾಲೀಕ ಕಿರಣ್‌ ತಿಳಿಸಿದರು.

‘ಅನೇಕರು ಮೊದಲೇ ಆಭರಣಗಳ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿರುತ್ತಾರೆ. ಅಕ್ಷಯ ತೃತೀಯ ದಿನ ಬಂದು ತೆಗೆದುಕೊಂಡು ಹೋಗುತ್ತಾರೆ. ನಮ್ಮ ವಹಿವಾಟು ಅಕ್ಷಯ ತೃತೀಯ ದಿನ ಸಾಮಾನ್ಯ ದಿನಗಳಿಗಿಂತ ಹೆಚ್ಚು ನಡೆಯುತ್ತದೆ’ ಎಂದರು.

‘ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸಿದರೆ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ. ಆದ್ದರಿಂದ ನಾವು ಪ್ರತಿವರ್ಷ ಏನಾದರೂ ಕೊಳ್ಳುತ್ತೇನೆ. ಈ ಬಾರಿ ಮಗನಿಗೆ ಚಿನ್ನದ ಚೈನು ಖರೀದಿಸಿದೆ’ ಎಂದು ಎಚ್‌.ಎಸ್.ಗಾರ್ಡನ್ ನಿವಾಸಿ ಪ್ರಜ್ವಲ್ ತಿಳಿಸಿದರು.

‘ಚಿನ್ನ ಕೊಳ್ಳಲು ಇವತ್ತು ಒಳ್ಳೆಯ ದಿನ ಎಂದು ನಮ್ಮ ನೆರೆಮನೆಯವರು ಹೇಳಿದ್ದು ಕೇಳಿದ್ದೆ. ತೆಗೆದಿಟ್ಟಿದ್ದ ಚೀಟಿ ದುಡ್ಡಿನಲ್ಲಿ ತಾಳಿ ಚೈನು ಖರೀದಿಸಿದೆವು’ ಎಂದು ಅಗಲಗುರ್ಕಿ ನಿವಾಸಿ ಆಶಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು