ಮಂಗಳವಾರ, ಮೇ 24, 2022
27 °C

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಇಬ್ಬರಿಗೆ 20 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಇಬ್ಬರಿಗೆ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ ತಲಾ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹ 20,000 ದಂಡ ವಿಧಿಸಿದೆ.

ಬೆಳ್ತಂಗಡಿ ತಾಲ್ಲೂಕಿನ ಕೊಯ್ಯೂರು ಕೊಪ್ಪದ ಬೈಲು ನಿವಾಸಿ ಸಚಿನ್‌ಕುಮಾರ್‌ (22) ಮತ್ತು ಲಾಲಾ ಪಟ್ಲಾಡಿ ಅಂಕಜೆ ಮನೆಯ ನಿವಾಸಿ ಕೆ.ಟಿ.ಮ್ಯಾಥ್ಯೂ ಅಲಿಯಾಸ್‌ ಮನು (24) ಶಿಕ್ಷೆಗೊಳಗಾದವರು. 2015ರ ಮಾರ್ಚ್‌ 7ರಂದು ಬೆಳ್ತಂಗಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಇಬ್ಬರೂ ಅಪರಾಧಿಗಳು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ಪೋಕ್ಸೊ ವಿಶೇಷ) ನ್ಯಾಯಾಲಯ ಸಾರಿದೆ.

ಸಂತ್ರಸ್ತೆಯು ಪಿಯುಸಿ ವಿದ್ಯಾರ್ಥಿನಿಯಾಗಿದ್ದರು. ಆಕೆ ಕಾಲೇಜು ಮುಗಿಸಿ ಹಿಂದಿರುಗುತ್ತಿದ್ದಾಗ ಮಾರುತಿ ಆಮ್ನಿ ಕಾರಿನಲ್ಲಿ ಹಿಂಬಾಲಿಸಿ ಬಂದಿದ್ದ ಅಪರಾಧಿಗಳು, ಮನೆಯವರೆಗೂ ಕಾರಿನಲ್ಲಿ ಬರುವಂತೆ ಕರೆದಿದ್ದರು. ವಿದ್ಯಾರ್ಥಿನಿ ನಿರಾಕರಿಸಿದಾಗ ಆಕೆಯನ್ನು ಬಲವಂತವಾಗಿ ಕಾರಿನೊಳಕ್ಕೆ ಹತ್ತಿಸಿಕೊಂಡಿದ್ದರು. ಆಕೆಯ ಮನೆಯ ಬಳಿ ಇಳಿಸುವಂತೆ ಕೂಗಾಡಿದರೂ ಮುಂದಕ್ಕೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇಬ್ಬರೂ ಅತ್ಯಾಚಾರ ನಡೆಸಿದ್ದರು.

ನಿತ್ಯವೂ ಮಧ್ಯಾಹ್ನ 3.30ಕ್ಕೆ ಮನೆಗೆ ಬರುತ್ತಿದ್ದ ಸಂತ್ರಸ್ತೆ ಆ ದಿನ ಬಂದಿರಲಿಲ್ಲ. ಐದು ಗಂಟೆಯಾದರೂ ಮಗಳು ಮನೆಗೆ ಬಾರದಿದ್ದರಿಂದ ಪೋಷಕರು ಗಾಬರಿಗೊಂಡಿದ್ದರು. ಆ ನಂತರ ಬಂದ ಮಗಳನ್ನು ‍ಪ್ರಶ್ನಿಸಿದ್ದರು. ತನ್ನ ಮೇಲೆ ಅತ್ಯಾಚಾರ ನಡೆದಿರುವುದನ್ನು ಸಂತ್ರಸ್ತೆ ತಿಳಿಸಿದ್ದರು. ಬಳಿಕ ಪೋಷಕರು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ್ದ ಬೆಳ್ತಂಗಡಿ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಬಿ.ಆರ್‌.ಲಿಂಗಪ್ಪ ನೇತೃತ್ವದ ತಂಡ ರಿಕ್ಷಾ ಚಾಲಕ ಮ್ಯಾಥ್ಯೂ ಮತ್ತು ಕೂಲಿ ಕಾರ್ಮಿಕ ಸಚಿನ್‌ ಕುಮಾರ್‌ನನ್ನು ಬಂಧಿಸಿತ್ತು. ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್‌ ಸಿ.ವೆಂಕಟರಮಣಸ್ವಾಮಿ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದರು. ದಂಡ ಪಾವತಿಗೆ ತಪ್ಪಿದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು