ಮಂಗಳವಾರ, ಸೆಪ್ಟೆಂಬರ್ 28, 2021
25 °C
ಸುತ್ತಮುತ್ತ ಬಡಾವಣೆ, ರಾಜಕಾಲುವೆ ಒತ್ತುವರಿ–ಮಳೆ ನೀರು ಬರಲು ಜಾಗವೇ ಇಲ್ಲ

ಬರಡಾಯಿತು ಲಿಂಗಾಂಬುಧಿ ಒಡಲು

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗಾಂಬುಧಿ ಕೆರೆ ಒಡಲು ಸಂಪೂರ್ಣ ಬತ್ತಿ ಹೋಗಿದ್ದು, ಸುತ್ತಮುತ್ತಲಿನ ಜೀವರಾಶಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ.

ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಈ ಕೆರೆಗೆ ಹಲವಾರು ವರ್ಷಗಳ ಬಳಿಕ ಈ ಪರಿಸ್ಥಿತಿ ಬಂದಿದೆ. ಮಳೆಯ ಅಭಾವ ಹಾಗೂ ಹೆಚ್ಚಿರುವ ಬಿಸಿಲಿನ ತಾಪದ ಜೊತೆಗೆ ಕಳೆದ ವರ್ಷ ಕೆರೆಯ ಏರಿ ಒಡೆದು ಹಾಕಿದ್ದು ಇದಕ್ಕೆ ಕಾರಣ. ಕೆರೆ ಬರಿದಾಗಿರುವುದರಿಂದ ಹೂಳೆತ್ತಿ ಹೆಚ್ಚು ನೀರು ಸಂಗ್ರಹಕ್ಕೆ ಈಗಲೇ ವ್ಯವಸ್ಥೆ ಮಾಡಬೇಕೆಂಬುದು ನಾಗರಿಕರ ಆಗ್ರಹ.

ಇಲಾಖೆಯು ಕೆರೆಗೆ ಬೇಲಿ ನಿರ್ಮಿಸಿ ಒತ್ತುವರಿ ಆಗುವುದನ್ನು ತಪ್ಪಿಸಿದೆ. ಜೊತೆಗೆ ಉದ್ಯಾನವನ್ನು ಸುಂದರವಾಗಿ ಅಭಿವೃದ್ಧಿಪಡಿಸಿದೆ. ಆದರೆ, ಕೆರೆ ತುಂಬಿಸಲು ನಿರ್ವಹಿಸಬೇಕಿದ್ದ ಜವಾಬ್ದಾರಿಯನ್ನು ಮರೆತಿದೆ ಎಂಬುದು ನಾಗರಿಕರ ದೂರು.

ಮಳೆ ನೀರು ಹರಿದು ಬರುವ ಮಾರ್ಗಗಳು ಮುಚ್ಚಿ ಹೋಗಿರುವ ಕಾರಣ ಕೆರೆಗೆ ಜಲಮೂಲಗಳೇ ಇಲ್ಲವಾಗಿದೆ. ಕುಕ್ಕರಹಳ್ಳಿ ಕೆರೆಗಿಂತಲೂ ಹೆಚ್ಚಿನ ನೈಸರ್ಗಿಕ ನೀರಿನ ಮೂಲಗಳು ಹಿಂದೆ ಇಲ್ಲಿದ್ದವು. ಆದರೆ, ಸುತ್ತಮುತ್ತ ಬಡಾವಣೆಗಳು ನಿರ್ಮಾಣವಾಗಿದ್ದು, ಕೆರೆಗೆ ನೀರು ಪೂರೈಸುವ ರಾಜಕಾಲುವೆಗಳು ಒತ್ತುವರಿ ಆಗಿವೆ. ಬೋಗಾದಿಯ ಮರಿಯಪ್ಪನಕಟ್ಟೆಯಿಂದ ಕೆರೆಗೆ ಸಂಪರ್ಕ ಕಲ್ಪಿಸುವ ಕೋಡಿ ಕಾಲುವೆ ಬಹುತೇಕ ಮುಚ್ಚಿದೆ.

ಕೆರೆಯ ಹಿಂಭಾಗದಲ್ಲಿ ಇದ್ದ ಗದ್ದೆಗಳನ್ನು ಕೆಲವೇ ವರ್ಷಗಳ ಹಿಂದೆ ಪ್ರೀತಿ ಬಡಾವಣೆಯನ್ನಾಗಿ ಪರಿವರ್ತಿಸಲಾಯಿತು. ಈ ಭಾಗದಿಂದಲೇ ಕೆರೆಗೆ ಅತಿ ಹೆಚ್ಚು ನೀರು ಪೂರೈಕೆ ಆಗುತ್ತಿತ್ತು. ಬಡಾವಣೆಯಾದ ಬಳಿಕ ಕೆರೆಯ ನೀರು ತಗ್ಗಲಾರಂಭಿಸಿತು.

‘ಕುಕ್ಕರಹಳ್ಳಿ ಕೆರೆಗೆ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದಿಂದ ಬ್ಯಾಕ್‌ವಾಷ್‌ ನೀರು ಬರುತ್ತದೆ. ಆದರೆ, ಈ ಸೌಲಭ್ಯ ಲಿಂಗಾಂಬುಧಿ ಕೆರೆಗೆ ಇಲ್ಲ. ಜೊತೆಗೆ ಜಲಮೂಲಗಳೂ ಇಲ್ಲ. ಮಳೆಗಾಲದಲ್ಲಿ ಬಿದ್ದ ನೀರು ಕಾಲುವೆಗಳಲ್ಲಿ ಹರಿದು ಕೆರೆಗೆ ಬರುವ ವ್ಯವಸ್ಥೆ ಇರಬೇಕು. ಸುತ್ತಮುತ್ತ ತಲೆಎತ್ತುತ್ತಿರುವ ಬಡಾವಣೆಗಳಿಂದ ರಾಜಕಾಲುವೆಗಳು ಮುಚ್ಚಿ ಹೋಗಿವೆ. ಕೊಳವೆಗಳು ಹಾಳಾಗಿ ನೀರು ಸೋರಿಕೆ ಆಗುತ್ತಿದೆ. ಇದನ್ನು ದುರಸ್ತಿ ಮಾಡಬೇಕು’ ಎಂದು ರಾಜ್ಯ ಕೆರೆ ಸಂರಕ್ಷಣೆ–ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಪ್ರೊ.ಕೆ.ಎಂ.ಜಯರಾಮಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವಿವೇಕಾನಂದ ನಗರ, ಬೋಗಾದಿ, ರಾಮಕೃಷ್ಣನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಂದ ಹರಿದು ಬರುವ ಒಳಚರಂಡಿ ನೀರು ಕೆರೆ ಸೇರುತ್ತದೆ. ‌ಹೀಗಾಗಿ, ಕೆರೆ ಕಲುಷಿತಗೊಂಡಿತ್ತು. ನೀರಿದ್ದಾಗ ಕೆಲವೆಡೆ ಹಸಿರು ಪಾಚಿ ಬೆಳೆದಿತ್ತು. ಇದರಿಂದಲೂ ಕೆರೆಯ ನೀರಿನ ಪ್ರಮಾಣ ತಗ್ಗಿರುವ ಸಾಧ್ಯತೆಗಳಿವೆ. ಒಳಚರಂಡಿ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲು ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆ ಜಾರಿಗೆ ಬರಲೇ ಇಲ್ಲ. ಈ ವಿಚಾರದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಲಕ್ಷ್ಯ ವಹಿಸಿವೆ.

‘ಸದ್ಯದಲ್ಲೇ ಪಾಲಿಕೆ, ಮುಡಾ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಸಭೆ ನಡೆಸಲಾಗವುದು. ಕೆರೆಗೆ ನೀರು ತುಂಬಿಸುವ ವಿಧಾನ ಹಾಗೂ ಅಭಿವೃದ್ಧಿ ಸಂಬಂಧ ಸಮಾಲೋಚನೆ ನಡೆಸಲಾಗುವುದು’ ಎಂದು ಡಿಸಿಎಫ್‌ ಪ್ರಶಾಂತ್‌ ಕುಮಾರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.