ಶುಕ್ರವಾರ, ಮೇ 27, 2022
28 °C
ಮಹಾಕೂಟ: ಐದು ವರ್ಷದಿಂದ ಹಾಳು ಬಿದ್ದಿದೆ ಕಟ್ಟಡ

ಬಾದಾಮಿ: ಯಾತ್ರಿ ನಿವಾಸ ಉದ್ಘಾಟನೆ ಎಂದು?

ಎಸ್.ಎಂ.ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬಾದಾಮಿ: ಚಾಲುಕ್ಯರ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರ ಮಹಾಕೂಟದಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ಐದು ವರ್ಷಗಳ ಹಿಂದೆ ₹2 ಕೋಟಿ ಖರ್ಚು ಮಾಡಿ ಕಟ್ಟಿರುವ ಯಾತ್ರಿ ನಿವಾಸ, ಕಟ್ಟಡ ಇನ್ನೂ ಉದ್ಘಾಟನೆ ಭಾಗ್ಯ ಕಾಣದೇ ಹಾಳು ಬಿದ್ದಿದೆ.

ವಿಶ್ವದ ಪ್ರವಾಸಿ ಭೂಪಟದಲ್ಲಿ ಚಾಲುಕ್ಯರ ನಾಡಿಗೆ ಸಿಗಬೇಕಾದ ಪ್ರಾಶಸ್ತ್ಯ ಇನ್ನೂ ಸಿಕ್ಕಿಲ್ಲ. ಮೂಲ ಸೌಕರ್ಯಗಳ ಕೊರತೆಯೇ ಈ ತಾಣ ಪ್ರವಾಸಿಗರಿಂದ ದೂರವಾಗಲು ಕಾರಣ ಎಂಬ ಆರೋಪಗಳ ನಡುವೆಯೇ ಸರ್ಕಾರದ ದುಡ್ಡು ಹೀಗೆ ಪೋಲಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಾಕೂಟೇಶ್ವರ ದೇವಾಲಯಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಶಾಸಕರ ಅನುದಾನದಡಿ ಯಾತ್ರಿ ನಿವಾಸವನ್ನು ಮಹಾಕೂಟಕ್ಕೆ ಮಂಜೂರು ಮಾಡಿಸಿದ್ದರು. ಹಣ ಬಿಡುಗಡೆಯಾದ ವೇಗದಲ್ಲಿಯೇ ಕಟ್ಟಡ ಕೂಡ ಸಿದ್ಧಗೊಂಡಿತು.

ಆದರೆ ಇಲ್ಲಿಯವರೆಗೂ ಅದು ಉದ್ಘಾಟನೆಯ ಭಾಗ್ಯ ಕಂಡಿಲ್ಲ. ಪ್ರವಾಸಿಗರ ಬಳಕೆಗೂ ಸಿಗದೇ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನೂತನ ಶಾಸಕ ಸಿದ್ದರಾಮಯ್ಯ ಈಗಾಗಲೇ ಎರಡು ಬಾರಿ ಮಹಾಕೂಟಕ್ಕೆ ಬಂದು ಹೋಗಿದ್ದಾರೆ. ಅವರನ್ನು ಅಲ್ಲಿಯೇ ಯಾತ್ರಿ ನಿವಾಸಕ್ಕೆ ಕರೆದೊಯ್ದು ಕಟ್ಟಡ ಉದ್ಘಾಟನೆ ಮಾಡಿಸಲು ಅಧಿಕಾರಿಗಳಿಗೆ ಪುರುಸೊತ್ತು ದೊರಕಿಲ್ಲ.

ಕೋಟ್ಯಂತರ ರೂಪಾಯಿ ಹಣವನ್ನು ಅಧಿಕಾರಿಗಳು ತಮ್ಮ ಜೇಬಿನಿಂದ ಹಾಕಿ ಕಟ್ಟಡ ಕಟ್ಟಿದ್ದರೆ ಹೀಗೆ ಹಾಳು ಬಿಡುತ್ತಿದ್ದರೇ, ಸರ್ಕಾರದ ಹಣಕ್ಕೆ ಉತ್ತರದಾಯಿತ್ವ ಇಲ್ಲವೇ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮೈಸೂರಿನಿಂದ ಮಹಾಕೂಟ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಬಂದಿದ್ದ ಆರ್. ನಾಗೇಶ ‘ ಮೈಸೂರು, ಬೇಲೂರು, ಹಳೇಬೀಡು ಮತ್ತು ಹಂಪಿಯಲ್ಲಿ ಪ್ರವಾಸಿಗರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಾಗಿದೆ. ಆದರೆ ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಮಹಾಕೂಟದಲ್ಲಿ ಮಾತ್ರ ಸರಿಯಾದ ಸೌಲಭ್ಯ ಇಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾತ್ರಿ ನಿವಾಸದಲ್ಲಿ 10 ಕೊಠಡಿಗಳ ಸೌಲಭ್ಯವಿದೆ. ಎಲ್ಲ ಕೊಠಡಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಐದು ಕೊಠಡಿಗಳಿಗೆ ಫರ್ನಿಚರ್ ಕೂಡ ಜೋಡಿಸಲಾಗಿದೆ. ಆದರೆ ಇಲ್ಲಿ ಪ್ರಮುಖವಾಗಿ ನೀರಿನ ಸೌಲಭ್ಯವೇ ಇಲ್ಲ’ ಎಂದು ಕಟ್ಟಡದ ಕಾವಲುಗಾರ ಗೋವಿಂದಪ್ಪ ಹೇಳಿದರು.

‘ಯಾತ್ರಿ ನಿವಾಸಕ್ಕೆ ನೀರಿನ ಸೌಲಭ್ಯ ಕಲ್ಪಿಸಲು ಕೊಳವೆಬಾವಿ ಕೊರೆಸಲು, ಸುತ್ತಲೂ ಕಾಂಪೌಂಡ್ ನಿರ್ಮಿಸಲು ₹20 ಲಕ್ಷ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆಯ ಪ್ರಭಾರ ಇಇ ದಯಾನಂದ ತಿಳಿಸಿದರು.

*
ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ ಮಹಾಕೂಟದ ಯಾತ್ರಿ ನಿವಾಸದಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ತಿಂಗಳೊಳಗೆ ನೀರು, ಊಟ, ವಸತಿ ಸೌಲಭ್ಯ ಕಲ್ಪಿಸಲಾಗುವುದು.
–ಬಿ.ಎಂ. ರಾಠೋಡ, ಸಹಾಯಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ, ಬಾದಾಮಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು