ಶನಿವಾರ, ಸೆಪ್ಟೆಂಬರ್ 21, 2019
24 °C

ಹೊಸನಗರ ಪಟ್ಟಣ ಪಂಚಾಯಿತಿ: ಆಕಾಂಕ್ಷಿಗಳ ಒತ್ತಡ; ನಾಯಕರಿಗೆ ತಲೆನೋವು

Published:
Updated:
Prajavani

ಹೊಸನಗರ: ಇಲ್ಲಿಯ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಿ ವಾರ ಕಳೆಯುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿದೆ.

ಮೇ 29ರಂದು ಚುನಾವಣೆ ನಡೆಯಲಿದ್ದು ಒಟ್ಟು 11 ಸದಸ್ಯ ಸ್ಥಾನವಿರುವ ಪಟ್ಟಣ ಪಂಚಾಯಿತಿಯಲ್ಲಿ ಚುನಾವಣೆ ರಂಗು ದಿನದಿಂದ ದಿನಕ್ಕೆ ಕಾವೇರತೊಡಗಿದೆ.

ಚುನಾವಣೆ ಘೋಷಣೆಯನ್ನು ಎದುರು ನೋಡುತ್ತಿದ್ದ ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಲು ವಿವಿಧ ರೀತಿಯ ಕಸರತ್ತು ಮಾಡ ಹೊರಟಿವೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ತಂತ್ರಗಾರಿಕೆ ರೂಪಿಸುತ್ತಿವೆ. ಉಮೇದುವಾರಿಕೆ ಬಯಸಿರುವ ಆಕಾಂಕ್ಷಿಗಳು ಕೂಡ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು, ಮುಖಂಡರ ಮನಗೆಲ್ಲಲು ಹರ ಸಾಹಸ ಪಡುತ್ತಿದ್ದಾರೆ. ಮುಖಂಡರಿಗೆ ದುಂಬಾಲು ಬಿದ್ದು ಇನ್ನಿಲ್ಲದ ಒತ್ತಡ ಹೇರುತ್ತಿರುವುದು ಕಂಡು ಬರುತ್ತಿದೆ.

ಆಕಾಂಕ್ಷಿಗಳು ಹೆಚ್ಚು: ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಚುನಾವಣೆ ಪೂರ್ವದಲ್ಲಿ ಕೆಲ ಮಂದಿಯ ಹೆಸರಷ್ಟೆ ಕೇಳಿ ಬರುತ್ತಿದ್ದು, ಈಗ ಅದು ದುಪ್ಪಟ್ಟಾಗಿದೆ. ಎಲ್ಲ ವಾರ್ಡ್‌ಗಳಲ್ಲೂ ನಾಲ್ಕೈದು ಆಕಾಂಕ್ಷಿಗಳು ಉಮೇದುವಾರಿಕೆ ಬಯಸಿದ್ದಾರೆ. ಇದು ಪಕ್ಷದ ಮುಖಂಡರ ತಲೆಬಿಸಿಗೆ ಕಾರಣವಾಗಿದೆ.

ಯಾರಿಗೆ ಟಿಕೆಟ್‌ ನೀಡಬೇಕು, ಯಾರನ್ನು ಕೈಬಿಡಬೇಕು ಎಂಬುದೇ ದೊಡ್ಡ ತಲೆನೋವಾಗಿದೆ. ಯಾವುದೇ ಅಸಮಾಧಾನ, ಭಿನ್ನರಾಗಕ್ಕೆ ಆಸ್ಪದ ಕೊಡದಂತೆ ಗೆಲ್ಲುವ ಕುದುರೆಗಳ ಆಯ್ಕೆಯನ್ನು ಅಂತಿಮಗೊಳಿಸುವಲ್ಲಿ ರಾಜಕೀಯ ಪಕ್ಷಗಳು ಜಾಣ್ಮೆಯ ನಡೆ ಅನುಸರಿಸಿವೆ.

ನಾಯಕರೇ ಆಸರೆ: ಹೊಸನಗರ ಪಟ್ಟಣ ಪಂಚಾಯಿತಿಯಲ್ಲಿ ಗೆದ್ದೇ ತೀರಬೇಕು. ನಮ್ಮ ಪಕ್ಷವೇ ಪ್ರಾಬಲ್ಯ ಮೆರೆಯಬೇಕು ಎಂಬ ಮಹದಾಸೆ ಹೊಂದಿರುವ ರಾಜಕೀಯ ನಾಯಕರು ಎದುರಾದ ಚುನಾವಣೆಯಲ್ಲಿ ತಮ್ಮ ವರ್ಚಸ್ಸನ್ನು ಒರೆಗಲ್ಲಿಗೆ ಹಚ್ಚಲು ಅಣಿಯಾಗಿದ್ದಾರೆ. ಅವರ ಕೃಪಾಶೀರ್ವಾದವೇ ಅಭ್ಯರ್ಥಿಗಳಿಗೆ ಶ್ರೀರಕ್ಷೆ ಆಗಿದೆ.

ಕಾಂಗ್ರೆಸ್‌ಗೆ ಮುಖಂಡರಾದ ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ, ಜಿ.ಪಂ ಸದಸ್ಯ ಕಲಗೋಡು ರತ್ನಾಕರ್ ಆಸರೆ ಆಗಿದ್ದಾರೆ. ಅವರ ಅಣತಿಯಂತೆ ಎಲ್ಲವೂ ನಡೆಯುತ್ತಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಬಲವಾಗಿರುವ ಜೆಡಿಎಸ್‌ಗೆ ಸರ್ಕಾರದ ಸಾಧನೆ ಮತ್ತು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವಿ ಜಯರಾಮ್ ಅವರೇ ದಿಕ್ಕು. ಬಿಜೆಪಿಗೆ ಎರಡು ಶಾಸಕರ ಆಶೀರ್ವಾದ ಬಲವಿದೆ. ಶಾಸಕ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಅವರ ನಾಮಬಲ ಇಲ್ಲಿ ಕೆಲಸ ಮಾಡಲಿದೆ.

Post Comments (+)