ಶನಿವಾರ, ಸೆಪ್ಟೆಂಬರ್ 18, 2021
26 °C
ಕಟ್ಟಡದಿಂದ ಅರ್ಚಕರ ಕುಟುಂಬಗಳು ತೆರವು

ಜಾಗದ ಅತಿಕ್ರಮಣ ತೆರವಿಗೆ ಮುಂದಾದ ಕಂದಾಯ ಇಲಾಖೆ: ಅರ್ಚಕರ ವಸತಿ ಗೃಹ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರದ ಎಚ್‌.ಎಸ್.ಗಾರ್ಡನ್‌ನಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಜಾಗದಲ್ಲಿ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದ ಟ್ರಸ್ಟ್‌ನಿಂದ ಒತ್ತುವರಿ ಮಾಡಿಕೊಂಡು ನಿರ್ಮಿಸಿದ ವಸತಿ ಕಟ್ಟಡದಲ್ಲಿದ್ದ ಅರ್ಚಕರ ಕುಟುಂಬಗಳನ್ನು ಶುಕ್ರವಾರ ಸಂಜೆ ಹೊರಹಾಕಿದ ಕಂದಾಯ ಇಲಾಖೆ ಅಧಿಕಾರಿಗಳು ಕಟ್ಟಡವನ್ನು ಭಾಗಶ ಒಡೆದು ಹಾಕಿದರು.

ಸಂಜೆ 5.30ರ ಸುಮಾರಿಗೆ ಪೊಲೀಸರ ಸರ್ಪಗಾವಲಿನಲ್ಲಿ ಬಂದ ಉಪವಿಭಾಗಾಧಿಕಾರಿ ಬಿ.ಶಿವಸ್ವಾಮಿ ಅವರ ನೇತೃತ್ವದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ವಸತಿ ಕಟ್ಟಡದಲ್ಲಿದ್ದ ಮೂರು ಕುಟುಂಬಗಳ ಸದಸ್ಯರನ್ನು ಹೊರಗೆ ಕಳುಹಿಸಿ, ಮನೆಯ ಒಳಗಿದ್ದ ಸಾಮಗ್ರಿಗಳನ್ನು ದೇವಾಲಯದ ಆವರಣದಲ್ಲಿ ತಂದು ಹಾಕಿದರು. ಬಳಿಕ ಜೆಸಿಬಿ ಬಳಸಿ ಕಟ್ಟಡ ಒಡೆಯುವ ಕಾರ್ಯಾಚರಣೆ ಆರಂಭಗೊಂಡಿತು.

ಕಟ್ಟಡ ತೆರವುಗೊಳಿಸುವುದನ್ನು ವಿರೋಧಿಸಿ ಸ್ಥಳೀಯ ನಾಗರಿಕರು ದೇವಾಲಯದ ಬಳಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರದ ವರೆಗೆ ಕಾಲಾವಕಾಶ ಕೊಟ್ಟಿದ್ದ ಅಧಿಕಾರಿಗಳು, ಟ್ರಸ್ಟ್‌ನವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲು ಹೋಗುತ್ತಿದ್ದಂತೆ ತರಾತುರಿಯಲ್ಲಿ ಕಟ್ಟಡ ತೆರವುಗೊಳಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಸರ್ಕಾರಿ ಸ್ವತ್ತುಗಳು ಒತ್ತುವರಿಯಾಗಿವೆ. ಅವುಗಳನ್ನು ಮೊದಲು ತೆರವುಗೊಳಿಸಲಿ. ರಾಜ್ಯದಲ್ಲಿ ಹಿಂದೂಗಳು ಇರಬಾರದೆ? ಎಲ್ಲರಿಗೂ ದೇವಾಲಯಗಳು ಮಾತ್ರ ಕಾಣುತ್ತವೆಯೇ? ಹೈಕೋರ್ಟ್‌ ಕಟ್ಟಡ ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿದರೂ ಅದಕ್ಕೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಕಟ್ಟಡ ಒಡೆದು ಹಾಕುವ ಕೆಲಸ ಮುಂದುವರಿಸಿದ್ದರು. ರಾತ್ರಿ 7ರ ಸುಮಾರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರಿಗೆ ಹೈಕೋರ್ಟ್‌ನಿಂದ ಫ್ಯಾಕ್ಸ್‌ ಸಂದೇಶವೊಂದು ಬರುತ್ತಿದ್ದಂತೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಅಷ್ಟರೊಳಗೆ ಶೇ75 ರಷ್ಟು ಕಟ್ಟಡವನ್ನು ಒಡೆದು ಹಾಕಲಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ‘ಕ್ರೀಡಾಂಗಣದ ಜಾಗ ಅನೇಕ ವರ್ಷಗಳಿಂದ ಅತಿಕ್ರಮಣವಾಗಿದೆ. ಕಳೆದ ಜನವರಿ 26 ರಂದು ಒತ್ತುವರಿ ಜಾಗದಲ್ಲಿ ಹಾಕಿದ್ದ ತಡೆಬೇಲಿ ತೆರವುಗೊಳಿಸಿ, ಅರ್ಚಕರಿಗೆ ಮನೆ ಖಾಲಿ ಮಾಡಲು ಕಾಲಾವಕಾಶ ನೀಡಿದ್ದೆವು. ಆದರೆ ಅವರು ಮನೆ ಖಾಲಿ ಮಾಡುವ ಬದಲು ಬೇರೆ ಬೇರೆ ಮಾರ್ಗಗಳನ್ನು ಉಪಯೋಗಿಸಲು ಆರಂಭಿಸಿದರು. ಹೀಗಾಗಿ, ಇತ್ತೀಚೆಗೆ ಕೊನೆಯದಾಗಿ ಅವರಿಗೆ ತೆರವುಗೊಳಿಸುವಂತೆ ಎಚ್ಚರಿಕೆ ನೀಡಲಾಗಿತ್ತು’ ಎಂದು ಹೇಳಿದರು.

‘ಸರ್ಕಾರದ ಸ್ವತ್ತನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸಬೇಕೇ ವಿನಾ ಕೆಲವರ ಹಿತಾಸಕ್ತಿಗಾಗಿ ಅಲ್ಲ. ಇಲ್ಲಿನ ಜಾಗ ಕ್ರೀಡಾಪಟುಗಳಿಗೆ ಸೇರಬೇಕಾದ್ದರಿಂದ ವಸತಿ ಕಟ್ಟಡವನ್ನು ನಾವು ತೆರವುಗೊಳಿಸುತ್ತಿದ್ದೇವೆ. ದೇವಾಲಯವನ್ನು ತೆರವು ಮಾಡುವುದಿಲ್ಲ’ ಎಂದು ತಿಳಿಸಿದರು.

ಸರ್ವೇ ನಂಬರ್ 112/3 ಮತ್ತು 115ರಲ್ಲಿ ಟ್ರಸ್ಟ್‌ನವರು 29 ಮೂಕ್ಕಾಲು ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಾಲಯ, ಉದ್ಯಾನ, ವಸತಿ ಗೃಹ, ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಜನವರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕ್ರೀಡಾಂಗಣದ ಬದಿ ದೇವಾಲಯಕ್ಕೆ ಹಾಕಿದ ತಡೆಬೇಲಿಯನ್ನು ತೆರವುಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.